ಗೌರಿಬಿದನೂರು: ತಾಲ್ಲೂಕು ಹೊಸೂರು ಹೋಬಳಿ ಸೊನಗಾನಹಳ್ಳಿಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು ಚರಂಡಿಗಳಲ್ಲಿನ ತ್ಯಾಜ್ಯ ಮತ್ತು ಕೊಳಚೆ ನೀರಿನ ಸಂಗ್ರಹದಿಂದ ಸ್ಥಳೀಯರು ಮೂಗು ಮುಚ್ಚಿಕೊಂಡು ಓಡಾಡುವ ಜತೆಗೆ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಬದುಕುವಂತಾಗಿದೆ.
ಗ್ರಾಮದ ಪ್ರತಿ ರಸ್ತೆ ಮತ್ತು ಚರಂಡಿಗಳಲ್ಲಿ ಕಸದ್ದೆ ಕಾರುಬಾರಾಗಿದೆ. ಚರಂಡಿಗಳಲ್ಲಿ ತಿಂಗಳುಗಳಿಂದ ತುಂಬಿ ತುಳುಕುತ್ತಿರುವ ತ್ಯಾಜ್ಯದಿಂದಾಗಿ ಬಳಕೆಯಾದ ನೀರು ಚರಂಡಿಗಳಲ್ಲೆ ನಿಂತು ಮಡುಗಟ್ಟಿದ ವಾತಾವರಣವಿದೆ. ಜತೆಗೆ ಕೊಳೆತು ದುರ್ನಾತ ಬೀರುತ್ತಿದೆ. ಇದರಿಂದಾಗಿ ನಿತ್ಯ ರಸ್ತೆಯಲ್ಲಿ ಓಡಾಡುವ ನಾಗರೀಕರು ಮತ್ತು ಚರಂಡಿ ಬದಿಯಲ್ಲಿನ ಮನೆಯವರು ಭಯದ ವಾತಾವರಣದಲ್ಲಿಯೇ ಬದುಕುವಂತಾಗಿದೆ.
ಗ್ರಾಮದ ಜನತೆಗೆ ಕುಡಿಯುವ ನೀರನ್ನು ಒದಗಿಸುವ ನೀರಿನ ಸಿಸ್ಟನ್ ಮತ್ತು ನಳಗಳ ಸಮೀಪ ಸ್ವಚ್ಛತೆ ಇಲ್ಲದೆ ಕೆಸರು ತುಂಬಿದೆ. ಇದರಲ್ಲೇ ಮಹಿಳೆಯರು ಮತ್ತು ಮಕ್ಕಳು ನೀರನ್ನು ತುಂಬಿಸಿಕೊಳ್ಳುವ ಸ್ಥಿತಿ ಇದೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಗ್ರಾಮದಲ್ಲಿನ ಜನತೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿದ್ದಾರೆ. ಗ್ರಾಮದಲ್ಲಿನ ಚರಂಡಿ ಸ್ವಚ್ಛಗೊಳಿಸುವಂತೆ ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ರಮವಹಿಸಿಲ್ಲ.
ಗ್ರಾಮಕ್ಕೆ ನೀರನ್ನು ಸರಬರಾಜು ಮಾಡುವ ಓವರ್ ಹೆಡ್ ಟ್ಯಾಂಕ್‌ಗಳ ಸುತ್ತಲೂ ಕೊಳಚೆ ತುಂಬಿದೆ. ನಿರುಪಯುಕ್ತ ಗಿಡಗಳು ಬೆಳೆದಿದ್ದರೂ ಕೂಡ ಅವುಗಳ ಸ್ವಚ್ಛತೆಗೆ ಗ್ರಾ.ಪಂ ಸಿಬ್ಬಂದಿ ಮುಂದಾಗಿಲ್ಲ. ಗ್ರಾಮದಲ್ಲಿ ಅಗತ್ಯ ಸೌಲಭ್ಯ ಒದಗಿಸುವ ಜತೆಗೆ ಸ್ವಚ್ಛತೆ ಕಾಪಾಡಿ ಜನರ ಆರೋಗ್ಯವನ್ನು ಕಾಪಾಡುವುದು ಸ್ಥಳೀಯ ಗ್ರಾ.ಪಂ ಯ ಜವಾಬ್ದಾರಿಯಾಗಿದೆ. ಆದರೆ ಅವರ ನಿರ್ಲಕ್ಷ್ಯದಿಂದಾಗಿ ಇಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆತ್ತು, ಗ್ರಾಮದಲ್ಲಿನ ಅನೈರ್ಮಲ್ಯವನ್ನು ಸ್ವಚ್ಛಗೊಳಿಸಿ ಜನರಲ್ಲಿ ಆತ್ಮಸ್ಥೈರ್ಯದ ಮೂಡಿಸುವ ಜತೆಗೆ ಭಯದ ವಾತಾವರಣ ನಿವಾರಿಸಬೇಕಾಗಿದೆ ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.
‘ಸೊನಗಾನಹಳ್ಳಿ ಮತ್ತು ನೆರೆಯ ಗ್ರಾಮಗಳಲ್ಲಿ ಚರಂಡಿಗಳ ಸ್ವಚ್ಛತೆ ಮತ್ತು ಕುಡಿಯುವ ನೀರಿನ ಸಮರ್ಪಕ ನಿರ್ವಹಣೆ ಬಗ್ಗೆ ಸಿಬ್ಬಂದಿಗೆ ತಿಳಿಸಲಾಗಿದೆ. ಶೀಘ್ರದಲ್ಲೇ ಚರಂಡಿಗಳಲ್ಲಿನ ತ್ಯಾಜ್ಯ ಸ್ವಚ್ಛಗೊಳಿಸುತ್ತೇವೆ’ ಎನ್ನುತ್ತಾರೆ ಪಿಡಿಒ ನಾಗೇಂದ್ರಪ್ಪ.
‘ವರ್ಷಗಳು ಕಳೆದರೂ ಕೂಡ ಗ್ರಾಮದಲ್ಲಿನ ಚರಂಡಿಗಳು ಸ್ವಚ್ಚತಾ ಭಾಗ್ಯ ಕಾಣುವುದಿಲ್ಲ. ಸ್ವಚ್ಛತೆ ಹೆಸರಿನಲ್ಲಿ ಅಧಿಕಾರಿಗಳು ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಗ್ರಾಮದಲ್ಲಿ ಮತ್ತು ದಲಿತರ ಕಾಲೋನಿಗಳಲ್ಲಿ ಸ್ವಚ್ಛತೆ ಮರೆತು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಾರೆ. ಜನರ ಆರೋಗ್ಯ ಹದಗೆಟ್ಟರೆ ಯಾರು ಹೊಣೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ನರಸಿಂಹಮೂರ್ತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.