ADVERTISEMENT

ಮತದಾರರಿಗೆ ಕೋಳಿ ವಿತರಣೆ; ಬಾಡೂಟದ ಕೂಪನ್!

ಉಡುಗೊರೆಗಳ ಮಹಾಪೂರ

ಈರಪ್ಪ ಹಳಕಟ್ಟಿ
Published 21 ಡಿಸೆಂಬರ್ 2020, 4:14 IST
Last Updated 21 ಡಿಸೆಂಬರ್ 2020, 4:14 IST
ಉಡುಗೊರೆ–ಪ್ರಾತಿನಿಧಿಕ ಚಿತ್ರ
ಉಡುಗೊರೆ–ಪ್ರಾತಿನಿಧಿಕ ಚಿತ್ರ   

ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯಿತಿ ಅಖಾಡ ರಂಗೇರುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ಮತದಾರರನ್ನು ಸೆಳೆಯಲು ಕಸರತ್ತು
ಆರಂಭವಾಗಿದೆ. ಹಲವಾರು ಆಮಿಷಗಳನ್ನು ಒಡ್ಡಲಾಗುತ್ತಿದೆ.

ಹೋಟೆಲ್‌, ಡಾಬಾ, ಬಾರ್‌, ರೆಸ್ಟೋರೆಂಟ್‌ಗಳಿಗೆ ಶುಕ್ರದೆಸೆ ಶುರುವಾಗಿದೆ. ಮತದಾರರಿಗೆ ಕೇವಲ ಬಾಡೂಟ ಅಲ್ಲ, ಕೋಳಿ, ಮಾಂಸ, ಮದ್ಯ, ಆಹಾರ ಪದಾರ್ಥಗಳ ಕಿಟ್‌ ಸಹ ಪೂರೈಕೆ ಮಾಡಲಾಗುತ್ತಿದೆ ಎನ್ನಲಾಗಿದೆ.

ಮೊದಲ ಹಂತದಲ್ಲಿ ಮತದಾನ ನಡೆಯುತ್ತಿರುವ ಬಾಗೇಪಲ್ಲಿ, ಚಿಂತಾಮಣಿ ಮತ್ತು ಶಿಡ್ಲಘಟ್ಟ ತಾಲ್ಲೂಕುಗಳ ಹಳ್ಳಿಗಳಲ್ಲಿ ಸದ್ಯ ಅಭ್ಯರ್ಥಿಗಳು ಜೋರಾಗಿ ಮತದಾರರಿಗೆ ಕೋಳಿಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಕುಟುಂಬದಲ್ಲಿರುವ ಮತಗಳ ಸಂಖ್ಯೆಗೆ ಅನುಗುಣವಾಗಿ ಒಂದೂವರೆ ಕೆ.ಜಿ.ಯಿಂದ ಮೂರು ಕೆ.ಜಿ. ಕೋಳಿ ನೀಡಲಾಗುತ್ತಿದೆ. ಮತ್ತೆ ಕೆಲವರು ಕೋಳಿ ಜತೆ ಮದ್ಯ ಸಹ ಹಂಚುತ್ತಿದ್ದಾರೆ ಎಂದು ತಿಳಿದುಬಂದಿದೆ.

ADVERTISEMENT

ಕಡೇ ಕಾರ್ತಿಕ ಸೋಮವಾರ ಮುಗಿದದ್ದೇ ಗ್ರಾಮಗಳಲ್ಲಿ ಕೋಳಿ ಪೂರೈಕೆ ಜೋರಾಗಿದೆ. ಯುವಜನರ ಗುಂಪುಗಳು ತೋಟದ ಮನೆಗಳಲ್ಲಿ ಮದ್ಯ, ಮಾಂಸದ ಪಾರ್ಟಿ ಆಯೋಜನೆ ಮಾಡುತ್ತಿವೆ. ಮತಗಳು ಕೈತಪ್ಪಿ ಹೋಗಬಹುದು ಎಂಬ ಆತಂಕಕ್ಕೆ ಬಿದ್ದ ಕೆಲ ಅಭ್ಯರ್ಥಿಗಳು ಅನಾರೋಗ್ಯಪೀಡಿತರ ವೈದ್ಯಕೀಯ ಚಿಕಿತ್ಸೆಗೂ ಆರ್ಥಿಕ ನೆರವು ನೀಡುತ್ತಿದ್ದಾರೆ ಎನ್ನಲಾಗಿದೆ.

ಕಾರ್ತಿಕ ಮಾಸ ಮುಗಿಯುವುದನ್ನೇ ಕಾಯುತ್ತಿದ್ದ ಗ್ರಾಮ ಪಂಚಾಯಿತಿ ಚುನಾವಣೆಯ ಹುರಿಯಾಳುಗಳು ಬಾಡೂಟಗಳನ್ನು ಏರ್ಪಡಿಸುತ್ತಿದ್ದು, ಎಲ್ಲೆಡೆ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಕೆಲವೆಡೆ ಹೋಟೆಲ್‌, ಡಾಬಾದಲ್ಲಿ ಊಟ ಮಾಡಲುಮತದಾರರಿಗೆ ಬಾಡೂಟದ ಕೂಪನ್‌ ನೀಡಲಾಗುತ್ತಿದೆ.

ಬಹುತೇಕ ಬಾಡೂಟದಂತಹ ಕಾರ್ಯಕ್ರಮಗಳು ತೋಟದ ಮನೆಗಳಲ್ಲೇ ನಡೆಯುತ್ತಿವೆ. ಕೆಲವು ಹಣವಂತರು ಮುಖ್ಯರಸ್ತೆಯ ಆಸುಪಾಸಿನಲ್ಲಿರುವ ಡಾಬಾಗಳಲ್ಲಿ ನಡೆಸುತ್ತಿದ್ದಾರೆ. ದಿನಕಳೆದಂತೆ ಇವುಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.

ಮತದಾರರನ್ನು ಓಲೈಸಿಕೊಳ್ಳಲು ಮದ್ಯ ಪೂರೈಸಲಾಗುತ್ತಿದೆ. ಕೆಲವು ಅಭ್ಯರ್ಥಿಗಳು ಟೋಕನ್‌ ನೀಡುತ್ತಿದ್ದು, ಮದ್ಯಪ್ರಿಯರು ಸಮೀಪದ ಬಾರ್‌ಗಳಿಗೆ ಹೋಗಿ ಟೋಕನ್‌ ನೀಡಿ ಮದ್ಯ ಪಡೆಯುತ್ತಿದ್ದಾರೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.

ಗ್ರಾಮೀಣ ಭಾಗದ ಬಹುತೇಕರು ಕೆಲಸಕ್ಕಾಗಿ ನಗರ ಪ್ರದೇಶಗಳಿಗೆ ತೆರಳುವುದರಿಂದ ಅಭ್ಯರ್ಥಿಗಳು ರಾತ್ರಿವೇಳೆ ಮತದಾರರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದಾರೆ. ಮತದಾನ ಹಿಂದಿನ ದಿನ ರಾತ್ರಿ ಮತದಾರರಿಗೆ ಹಣ, ಮದ್ಯ, ಉಡುಗೊರೆಗಳನ್ನು ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಾರಿ ಕೋವಿಡ್‌ನಿಂದ ಕೆಲಸ ಕಳೆದುಕೊಂಡು ಊರು ಸೇರಿದವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಬಾಡೂಟ, ಔತಣಕೂಟಗಳು ಹಿಂದಿಗಿಂತಲೂ ಹೆಚ್ಚಾಗಿ ಆಯೋಜನೆ ಗೊಳ್ಳುತ್ತಿವೆ ಎನ್ನುತ್ತಾರೆ ಪ್ರಜ್ಞಾವಂತರು.

ಪ್ರತಿಷ್ಠೆಯನ್ನೇ ಪಣಕ್ಕಿಟ್ಟು ಕಣಕ್ಕಿಳಿದಿರುವ ಅಭ್ಯರ್ಥಿಗಳು ಗೆಲ್ಲುವ ಸಲುವಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಬಹುತೇಕ ಹುರಿಯಾಳುಗಳು ತಮ್ಮ ಬೆಂಬಲಿಗರನ್ನು ಸೇರಿಸಿ ಸಣ್ಣಸಣ್ಣದಾಗಿಯೇ ಮದ್ಯದ ಕೂಟಗಳನ್ನು ನಡೆಸುತ್ತಿದ್ದಾರೆ. ಹಿಂಬಾಲಕರಿಗೆ ಮದ್ಯದ ಬಾಟಲಿಗಳ ಹಂಚುವಿಕೆಯೂ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.