ADVERTISEMENT

ಚಿಕ್ಕಬಳ್ಳಾಪುರ: ರೈಲ್ವೆ ಇಲಾಖೆ ಹೊಸ ಯೋಜನೆ ಜಾರಿಗೆ ಮನವಿ

ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ ಸಂಸದ ಡಾ.ಕೆ.ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 6:14 IST
Last Updated 10 ಅಕ್ಟೋಬರ್ 2024, 6:14 IST
   

ಚಿಕ್ಕಬಳ್ಳಾಪುರ: ‘ಹೊಸದಾಗಿ ಚಿಕ್ಕಬಳ್ಳಾಪುರ-ಗೌರಿಬಿದನೂರು ರೈಲ್ವೆ ಮಾರ್ಗ ನಿರ್ಮಾಣ, ಯಲಹಂಕ-ಚಿಕ್ಕಬಳ್ಳಾಪುರ ನಡುವೆ ಮಾರ್ಗದ ಡಬಲಿಂಗ್ ಕಾಮಗಾರಿ, ಬಂಗಾರಪೇಟೆ-ಯಲಹಂಕ ನಡುವೆ ವಿದ್ಯುದ್ದೀಕರಣ ಸೇರಿದಂತೆ ರೈಲ್ವೆ ಇಲಾಖೆಗೆ ಸಂಬಂಧಿಸಿದ ಯೋಜನೆ ಹಾಗೂ ಕಾಮಗಾರಿಗಳನ್ನು ಶೀಘ್ರ ಆರಂಭಿಸಬೇಕು’ ಎಂದು ಸಂಸದ ಡಾ.ಕೆ.ಸುಧಾಕರ್‌ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಮಂಗಳವಾರ ನವದೆಹಲಿಯಲ್ಲಿ ಭೇಟಿ ಮಾಡಿ, ವಿವಿಧ ಯೋಜನೆ ಹಾಗೂ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೊಸ ರೈಲ್ವೆ ಮಾರ್ಗಗಳ ನಿರ್ಮಾಣ, ಅಂತಿಮ ಸ್ಥಳ ಸಮೀಕ್ಷೆ, ವಿದ್ಯುದ್ದೀಕರಣ, ಮೇಲ್ಸೇತುವೆ ಹಾಗೂ ಕೆಳಸೇತುವೆ ನಿರ್ಮಾಣ, ಉಪನಗರ ರೈಲು ಮೊದಲಾದ ಕಾಮಗಾರಿಗಳ ಬಗ್ಗೆ ಸಂಸದ ಡಾ.ಕೆ.ಸುಧಾಕರ್‌ ಚರ್ಚಿಸಿ ಮನವಿ ಸಲ್ಲಿಸಿದರು.

ADVERTISEMENT

ಇದಕ್ಕೆ ಸ್ಪಂದಿಸಿರುವ ಸಚಿವ ವಿ.ಸೋಮಣ್ಣ, ಕಾಮಗಾರಿಗಳ ಸಾಧ್ಯಾಸಾಧ್ಯತೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲು ರೈಲ್ವೆ ಭವನದಲ್ಲಿ ಬುಧವಾರ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಿದರು.

ಸಭೆಯಲ್ಲಿ ಸಂಸದ ಡಾ.ಕೆ.ಸುಧಾಕರ್‌ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಚಿಕ್ಕಬಳ್ಳಾಪುರ-ಗೌರಿಬಿದನೂರು ನಡುವೆ 44 ಕಿ.ಮೀ ಉದ್ದದ ಮಾರ್ಗ, ಶ್ರೀನಿವಾಸಪುರ-ಮದನಪಲ್ಲಿ ನಡುವೆ 75 ಕಿ.ಮೀ. ಉದ್ದದ ಮಾರ್ಗ, ಮಾರಿಕುಪ್ಪಂ-ಕುಪ್ಪಂ ನಡುವೆ 23.7 ಕಿ.ಮೀ. ಉದ್ದದ ಮಾರ್ಗ ನಿರ್ಮಾಣದ ಯೋಜನೆಗಳನ್ನು ಪರಿಗಣಿಸಲು ಮನವಿ ಮಾಡಿದರು. ಚಿಕ್ಕಬಳ್ಳಾಪುರ- ಸತ್ಯಸಾಯಿ ಪ್ರಶಾಂತಿ ನಿಲಯಂ (ಪುಟ್ಟಪರ್ತಿ) ನಡುವಿನ 103 ಕಿ.ಮೀ. ಮಾರ್ಗದ ಸಮೀಕ್ಷೆಯನ್ನು 10 ವರ್ಷದ ಹಿಂದೆ ಮಾಡಿದ್ದು, ಮುಂದೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಗಮನಹರಿಸಬೇಕೆಂದು ಕೋರಿದರು.

ಉಪನಗರ ರೈಲು ಯೋಜನೆಯಡಿಯ 47 ಕಿ.ಮೀ. ಉದ್ದದ ರಾಜನುಕುಂಟೆ–ಯಲಹಂಕ–ಹೀಲಲಿಗೆ (ಕಾರಿಡಾರ್ 4) ಮಾರ್ಗ ಹಾಗೂ 42 ಕಿ.ಮೀ. ಉದ್ದದ ದೇವನಹಳ್ಳಿ-ಯಲಹಂಕ-ಯಶವಂತಪುರ (ಕಾರಿಡಾರ್ 1) ಮಾರ್ಗದ ಕಾಮಗಾರಿಯನ್ನು ವೇಗಗೊಳಿಸಬೇಕು. ಯಲಹಂಕ-ದೇವನಹಳ್ಳಿ ಮಾರ್ಗದ (23.7 ಕಿ.ಮೀ) ಡಬ್ಲಿಂಗ್, ಬೆಟ್ಟಹಲಸೂರು-ರಾಜಾನುಕುಂಟೆ ಮಾರ್ಗದ ನಿರ್ಮಾಣ, (6.14 ಕಿ.ಮೀ.), ಚಿಕ್ಕಬಳ್ಳಾಪುರ-ಗೌರಿಬಿದನೂರು (44 ಕಿ.ಮೀ.) ಹೊಸ ಮಾರ್ಗ ಹಾಗೂ ದೇವನಹಳ್ಳಿ-ಬಂಗಾರಪೇಟೆ-ಕೋಲಾರ (125 ಕಿ.ಮೀ) ಡಬ್ಲಿಂಗ್ ಕಾಮಗಾರಿಗಾಗಿ ಅಂತಿಮ ಸ್ಥಳ ಸಮೀಕ್ಷೆ ನಡೆಯಬೇಕಿದೆ. ಈ ಕುರಿತು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.