ADVERTISEMENT

ಕಾಂಗ್ರೆಸ್‌ನವರಿಗೆ ಕೇಂದ್ರ ಬಜೆಟ್ ಅರ್ಥವೇ ಆಗಿಲ್ಲ: ಸಚಿವ ಡಾ.ಕೆ. ಸುಧಾಕರ್ ಟೀಕೆ

ಕೃಷಿ ಕಾಯ್ದೆ: ವದಂತಿಗೆ ಕಿವಿಗೊಡಬೇಡಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 2:48 IST
Last Updated 14 ಫೆಬ್ರುವರಿ 2021, 2:48 IST
ಡಾ.ಕೆ. ಸುಧಾಕರ್
ಡಾ.ಕೆ. ಸುಧಾಕರ್   

ಚಿಕ್ಕಬಳ್ಳಾಪುರ: ‘ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿಯಲ್ಲಿ ಸುಧಾರಣೆ ತರಲು ಹೊಸ ಕಾನೂನು ತಂದಿದ್ದಾರೆ. ಈ ಕಾನೂನುಗಳ ಬಗ್ಗೆ ರೈತರ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ರೈತರು ಯಾವುದೇ ವದಂತಿ, ಅಪಪ್ರಚಾರಕ್ಕೆ ಕಿವಿಗೊಡಬಾರದು’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೋದಿ ಅವರು ಹೇಳಿದಂತೆ ನಾವು ಬುದ್ಧಿಜೀವಿಗಳನ್ನು ನೋಡಿದಂತೆ ಈಗ ಆಂದೋಲನ ಜೀವಿಗಳನ್ನು ನೋಡುತ್ತಿದ್ದೇವೆ. ಇಂತಹವರು ಸದಾ ಆಂದೋಲನ ನಡೆಸಲು ಕಾಯುತ್ತಿರುತ್ತಾರೆ ಎಂದು ತಿಳಿಸಿದರು.

‘ಸ್ವಸ್ಥ ಭಾರತಕ್ಕೆ ಮುನ್ನುಡಿ ಬರೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಆತ್ಮನಿರ್ಭರ ಭಾರತ ಬಜೆಟ್ ಮಂಡಿಸಿದೆ. ಇದು ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಬಜೆಟ್ ಆಗಿದೆ. ಆದರೆ, ಆಮದು ನಾಯಕರಿರುವ ಕಾಂಗ್ರೆಸ್ ಪಕ್ಷಕ್ಕೆ ಆತ್ಮನಿರ್ಭರ ಭಾರತದ ಪರಿಕಲ್ಪನೆ ಅರ್ಥವೇ ಆಗುವುದಿಲ್ಲ’ ಎಂದು ಟೀಕಿಸಿದರು.

ADVERTISEMENT

‘ದೇಶದ ಸರ್ವಾಂಗೀಣ ಅಭಿವೃದ್ಧಿಯೇ ಮೋದಿ ಅವರ ನೇತೃತ್ವದ ಸರ್ಕಾರದ ಬಜೆಟ್ ಮಂತ್ರವಾಗಿದೆ. ಕೊರೊನಾದಿಂದಾಗಿ ತಾತ್ಕಾಲಿಕವಾಗಿ ಮಂದವಾಗಿದ್ದ ಆರ್ಥಿಕ ವ್ಯವಸ್ಥೆ ಮುಂದಿನ ಕೆಲವೇ ತಿಂಗಳಲ್ಲಿ ಸುಸ್ಥಿರಗೊಳ್ಳುವಂತೆ ಮಾಡುವ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಈ ಆತ್ಮನಿರ್ಭರದ ಬಜೆಟ್ ಸ್ವಸ್ಥ ಭಾರತಕ್ಕೆ ಮುನ್ನುಡಿ ಬರೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಆರೋಗ್ಯ ಮತ್ತು ಯೋಗಕ್ಷೇಮ, ಮೂಲಸೌಕರ್ಯ, ಅಂತರ್ಗತ ಅಭಿವೃದ್ಧಿ, ಮಾನವ ಸಂಪನ್ಮೂಲ ಅಭಿವೃದ್ಧಿ, ಸಂಶೋಧನೆ ಮತ್ತು ಅಭಿವೃದ್ಧಿ, ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಎಂಬ ಆರು ಅಂಶಗಳಲ್ಲಿ ಬಜೆಟ್ ರೂಪಿಸಲಾಗಿದೆ. ₹ 34,83,236 ಕೋಟಿ ಗಾತ್ರದ ಬಜೆಟ್ ಆರ್ಥಿಕತೆಗೆ ಚಿಕಿತ್ಸೆ ನೀಡುವಂತಿದೆ. ಕೋವಿಡ್ ನಂತರದ ಕಾಲದಲ್ಲಿ ಆರ್ಥಿಕತೆಯನ್ನು ಹೇಗೆ ಪುನಶ್ಚೇತನಗೊಳಿಸಬೇಕು ಎಂಬ ಸ್ಪಷ್ಟ ನೀಲನಕ್ಷೆ, ಮುನ್ನೋಟ ಬಜೆಟ್‌ನಲ್ಲಿದೆ’ ಎಂದು
ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಲಿಂಗಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್. ಕೇಶವರೆಡ್ಡಿ, ನಗರಸಭೆ ಅಧ್ಯಕ್ಷ ಬಾಬು ಆನಂದರೆಡ್ಡಿ, ಮುಖಂಡರಾದ ಕೆ.ವಿ. ನವೀನ್ ಕಿರಣ್, ಮರಳುಕುಂಟೆ ಕೃಷ್ಣಮೂರ್ತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.