ಚಿಕ್ಕಬಳ್ಳಾಪುರ: ‘ನಾನು ಚಿಂತಾಮಣಿಗೆ ಮಾತ್ರ ಸಚಿವನಲ್ಲ. ಜಿಲ್ಲೆಗೆ ಸಚಿವ. ಈ ವಿಚಾರವಾಗಿ ನನ್ನ ಕಡೆ ಬೆರಳು ತೋರಿಸಲು ಡಾ.ಕೆ.ಸುಧಾಕರ್ ಅವರಿಗೆ ನೈತಿಕತೆ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಎಂದರೆ ಬರಿ ಪೆರೇಸಂದ್ರಕ್ಕೆ ಸೀಮಿತವಲ್ಲ. ಪೆರೇಸಂದ್ರ ಜಿಲ್ಲಾ ಕೇಂದ್ರವೇ. ನಿಮ್ಮ ಖುಷಿಗೆ ನಿಮ್ಮ ಊರ ಹತ್ತಿರ ವೈದ್ಯಕೀಯ ಶಿಕ್ಷಣ ಕಾಲೇಜು ಮಾಡಿಕೊಂಡಿರಿ ಎಂದರು.
‘ನಾನು ಚಿಂತಾಮಣಿಗೆ ಸಚಿವನಲ್ಲ. ಚಿಕ್ಕಬಳ್ಳಾಪುರದಲ್ಲಿ ಕನ್ನಡಭವನ, ನಂದಿಗಿರಿಧಾಮಕ್ಕೆ ರೋಪ್ ವೇ, ಹೂ ಮಾರುಕಟ್ಟೆ ನಿರ್ಮಾಣಕ್ಕೆ ಸೌಲಭ್ಯ, ವೈದ್ಯಕೀಯ ಶಿಕ್ಷಣ ಕಾಲೇಜಿಗೆ ಹೆಚ್ಚುವರಿ ಅನುದಾನವನ್ನು ಕೊಡಿಸಿದ್ದು ನಾವು. ಇವರು ಸಚಿವರಾಗಿದ್ದರೂ ಚಿಕ್ಕಬಳ್ಳಾಪುರದಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಸೌಲಭ್ಯವಿರಲಿಲ್ಲ. ಅದನ್ನು ತಂದಿದ್ದು ನಾವು. ಜಿಲ್ಲಾ ಉಸ್ತುವಾರಿ ಸಚಿವನಾಗಿ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿದರು.
ಶಿಷ್ಟಾಚಾರದ ಪ್ರಕಾರ ಸಂಸದರಿಗೂ ಕಾರ್ಯಕ್ರಮಗಳಿಗೆ ಆಹ್ವಾನ ಇರುತ್ತದೆ. ಬರುವುದು ಬಿಡುವುದು ಅವರಿಗೆ ಬಿಟ್ಟಿದ್ದು. ಯಾರು ಒಳ್ಳೆಯವರು ಕೆಟ್ಟವರು ಎನ್ನುವುದು ಜನರಿಗೆ ಗೊತ್ತು. ಕೋವಿಡ್ ಸಂದರ್ಭದಲ್ಲಿ ನಡೆದ ಅವ್ಯವಹಾರದ ಬಗ್ಗೆ ಜನರು ನೋಡುತ್ತಿದ್ದಾರೆ ಎಂದರು.
ಡಾ.ಕೆ.ಸುಧಾಕರ್ ಬಹಳ ಬುದ್ದಿವಂತರು. ಚಿಕ್ಕಬಳ್ಳಾಪುರಕ್ಕೆ ಮಂಜೂರಾಗಿದ್ದ 50 ಹಾಸಿಗೆಗಳ ಐಸಿಯು ಘಟಕ ಚಿಂತಾಮಣಿಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ದೂರುತ್ತಿದ್ದಾರೆ. ಆದರೆ ಅದು 50 ಹಾಸಿಗೆಗಳ ಸಾಮರ್ಥ್ಯದ ಐಸಿಯುವಲ್ಲ. ಆ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಬೇಕು ಎಂದರು.
ಚಿಂತಾಮಣಿ ಜಿಲ್ಲೆಯಲ್ಲಿ ಹೆಚ್ಚು ಜನಸಂಖ್ಯೆಯುಳ್ಳ ತಾಲ್ಲೂಕು. ಚೇಳೂರು, ಶ್ರೀನಿವಾಸಪುರ, ಶಿಡ್ಲಘಟ್ಟ, ಕೋಲಾರ ಭಾಗದವರು ಚಿಕಿತ್ಸೆಗೆ ಬರುತ್ತಾರೆ. ಅಲ್ಲಿ ನಾವು ವೈದ್ಯಕೀಯ ವ್ಯವಸ್ಥೆ ಮಾಡಬೇಕು. ಐಸಿಯು ಘಟಕ ನಿರ್ಮಾಣಕ್ಕೆ ಜಿಲ್ಲಾ ಆಸ್ಪತ್ರೆಯಲ್ಲಿ 1 ಎಕರೆ ಜಾಗಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ಆ ಜಾಗ ಇದೆಯಾ ಎಂದು ಪ್ರಶ್ನಿಸಿದರು.
ಚಿಕ್ಕಬಳ್ಳಾಪುರದಿಂದ ಚಿಂತಾಮಣಿ 42 ಕಿ.ಮೀ ದೂರದಲ್ಲಿ ಇದೆ. ಮತ್ತೆ ಇಲ್ಲಿಂದ ವೈದ್ಯಕೀಯ ಕಾಲೇಜು 18 ಕಿ.ಮೀ ದೂರವಿದೆ. ನಾವು ವೈದ್ಯಕೀಯ ಸೌಲಭ್ಯ ಪಡೆಯಲು ಚಿಕ್ಕಬಳ್ಳಾಪುರ ಜಿಲ್ಲೆಯವರಲ್ಲವೇ ಎಂದು ಪ್ರಶ್ನಿಸಿದರು.
Cut-off box - ‘ಒಳಮೀಸಲಾತಿಗೆ ಬದ್ಧ’ ಜಾತಿಜನಗಣತಿ ಬಹಳ ಸೂಕ್ಷ್ಮವಾದುದು. ವೈಜ್ಞಾನಿಕವಾಗಿ ಗಣತಿ ನಡೆದಿಲ್ಲ ಎನ್ನುವುದು ಕೆಲವರರ ಅಭಿಪ್ರಾಯ. ವರದಿಯಲ್ಲಿ ಏನಿದೆ ಎನ್ನುವುದು ಯಾರೂ ನೋಡಿಲ್ಲ. ವೈಜ್ಞಾನಿಕವಾಗಿ ಸಮೀಕ್ಷೆ ಆಗಿಲ್ಲ ಎಂದು ಒಕ್ಕಲಿಗ ಸಮಾಜದಿಂದ ನಾವೇ ಸಹಿ ಮಾಡಿ ಕೊಟ್ಟಿದ್ದೇವೆ. ವರದಿ ಮಂಡನೆ ಆದ ಮೇಲೆ ಎಲ್ಲರ ಅಭಿಪ್ರಾಯ ಪಡೆದು ನಂತರ ತೀರ್ಮಾನ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು. ಒಳಮೀಸಲಾತಿ ಜಾರಿಗೆ ಸರ್ಕಾರ ಬದ್ಧವಾಗಿದೆ. ಯಾವುದೇ ರೀತಿಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದರು.
ಪೌರಾಯುಕ್ತರ ನೇಮಕದಲ್ಲಿ ಗೊಂದಲ
ಚಿಕ್ಕಬಳ್ಳಾಪುರ ನಗರಸಭೆ ಪೌರಾಯುಕ್ತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದವರು ಈ ಹುದ್ದೆಗೆ ಅರ್ಹರಲ್ಲ ಎಂದು ಕೆಲವರು ನ್ಯಾಯಾಲಯಕ್ಕೆ ಹೋದರು. ಆದರೆ ಈಗ ಗ್ರೇಡ್ 1 ಪೌರಾಯುಕ್ತರು ಯಾರೂ ಸಿಗುತ್ತಿಲ್ಲ ಎಂದು ಡಾ.ಎಂ.ಸಿ.ಸುಧಾಕರ್ ತಿಳಿಸಿದರು. ಯಾವ ಕಾರಣಕ್ಕೆ ನ್ಯಾಯಾಲಯಕ್ಕೆ ಹೋದರೊ ಗೊತ್ತಿಲ್ಲ. ತಪ್ಪು ಆಗಿದೆ. ಉಪವಿಭಾಗಾಧಿಕಾರಿ ಅವರಿಗೆ ಪ್ರಭಾರ ಜವಾಬ್ದಾರಿ ವಹಿಸಲಾಗಿದೆ. ಆದರೆ ಅವರಿಗೆ ಕಾರ್ಯಭಾರದ ಒತ್ತಡ ಹೆಚ್ಚು. ಇದು ನಮಗೀ ಗೊತ್ತು. ಆದರೆ ರಾಜ್ಯದಲ್ಲಿ ನಗರಸಭೆ ಪೌರಾಯುಕ್ತ ಹುದ್ದೆಗಳಿಗೆ ಗ್ರೇಡ್ 1 ಅಧಿಕಾರಿಗಳು ಸಿಗುತ್ತಿಲ್ಲ ಎಂದರು. ಗ್ರೇಡ್ 2 ಅಧಿಕಾರಿ ಪೌರಾಯುಕ್ತರಾಗಿ ಬಂದರೆ ಮತ್ತೆ ಗೊಂದಲ ಸೃಷ್ಟಿ ಆಗುತ್ತದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.