ADVERTISEMENT

ಬರ: ಮೇವು ಇಲ್ಲದೆ ಜಾನುವಾರು ತತ್ತರ

ಬಹುತೇಕ ಕೆರೆ, ಕುಂಟೆ ಬರಿದು * ಅರಣ್ಯದಲ್ಲಿ ಪ್ರಾಣಿ– ಪಕ್ಷಿಗಳಿಗೆ ನೀರಿನ ವ್ಯವಸ್ಥೆ

ಜೆ.ವೆಂಕಟರಾಯಪ್ಪ
Published 6 ಮೇ 2024, 6:55 IST
Last Updated 6 ಮೇ 2024, 6:55 IST
ಗುಡಿಬಂಡೆ ತಾಲ್ಲೂಕಿನ ಎಲ್ಲೋಡು ಹಾಗೂ ಬೀಚಗಾನಹಳ್ಳಿ ಅರಣ್ಯ ಪ್ರದೇಶದಲ್ಲಿ 12 ಸಾವಿರ ನೀರು ಶೇಖರಣ ಸಾಮರ್ಥ್ಯದ ನೀರಿನ ತೊಟ್ಟಿ
ಗುಡಿಬಂಡೆ ತಾಲ್ಲೂಕಿನ ಎಲ್ಲೋಡು ಹಾಗೂ ಬೀಚಗಾನಹಳ್ಳಿ ಅರಣ್ಯ ಪ್ರದೇಶದಲ್ಲಿ 12 ಸಾವಿರ ನೀರು ಶೇಖರಣ ಸಾಮರ್ಥ್ಯದ ನೀರಿನ ತೊಟ್ಟಿ   

ಗುಡಿಬಂಡೆ: ಬರಗಾಲದಿಂದಾಗಿ ಜನ ಜಾನುವಾರು, ಪ್ರಾಣಿಪಕ್ಷಿಗಳಿಗೆ ಆಹಾರ, ಮೇವಿನ ಕೊರತೆ ಎದುರಾಗಿದೆ.

ಅರಣ್ಯ ಇಲಾಖೆ ಎಲ್ಲೋಡು, ಬೀಚಗಾನಹಳ್ಳಿಯಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಿ ನೀರು ಒದಗಿಸುವ ಕೆಲಸ ಮಾಡುತ್ತಿದೆ. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಿಸಿಲಿನ ಝಳ ಮುಂದುವರಿದಿದೆ.

ಬರ ಹೊಡೆತಕ್ಕೆ ರೈತರು ತತ್ತರಿಸಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಕೈ ಹಿಡಿಯುತ್ತಿದ್ದ ಹೈನುಗಾರಿಕೆಗೂ ಬರದ ಬಿಸಿ ತಟ್ಟಿದೆ. ಜಾನುವಾರುಗಳಿಗೆ ನೀರು, ಮೇವು ಒದಗಿಸುವುದೇ ಸವಾಲಾಗಿ ಪರಿಣಮಿಸಿದೆ.

ADVERTISEMENT

ಮಳೆ ಅಭಾವದಿಂದ ಬಯಲು ಪ್ರದೇಶದಲ್ಲಿ ಹಸಿರು ಮಾಯವಾಗಿದೆ. ಗಿಡ–ಮರ, ಹುಲ್ಲು ಒಣಗಿ ಗುಡ್ಡಗಾಡು ಪ್ರದೇಶ ಬಣಗುಡುತ್ತಿದೆ. ಬೆಟ್ಟಗಳಲ್ಲಿ ನೀರು ಆಹಾರ ನೆರಳಿನ ಆಶ್ರಯಕ್ಕಾಗಿ ಜಾನುವಾರು ಪರದಾಡುವಂತಾಗಿದೆ.

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಗತ್ಯ ಇರುವ ಕಡೆ ಜಾನುವಾರು ಕುಡಿಯುವ ನೀರಿಗಾಗಿ ನಿರ್ಮಿಸಿರುವ ತೊಟ್ಟಿಗಳ ನಿರ್ವಹಣೆ ಮಾಡುವವರು ಇಲ್ಲವಾಗಿದ್ದಾರೆ. ತಾಲ್ಲೂಕಿನ ಬಹುತೇಕ ಕೆರೆ, ಕುಂಟೆ ಬರಿದಾಗಿವೆ.

ಜಾನುವಾರುಗೆ ನೀರಿನ ಅಭಾವ ಒಂದೆಡೆಯಾದರೆ ಮೇವು ಒದಗಿಸುವ ಸವಾಲು ಎದುರಾಗಿದೆ. ಮೇವು ಕೇಂದ್ರ ಆರಂಭಕ್ಕೆ ಸಂಬಂಧಿಸಿದಂತೆ ಸರ್ಕಾರಿ ಕಚೇರಿಗಳಿಗೆ ರೈತರು ಅಲೆದಾಡುತ್ತಿದ್ದಾರೆ. ಆದರೆ, ಈ ಕುರಿತು ಕಂದಾಯ ಇಲಾಖೆ, ಪಶು ಪಾಲನಾ ಇಲಾಖೆ ಗಮನಹರಿಸುತ್ತಿಲ್ಲ. ಅನಿವಾರ್ಯವಾಗಿ ರೈತರು ನೆರೆಯ ಜಿಲ್ಲೆಗಳಿಂದ ದುಬಾರಿ ಬೆಲೆಗೆ ಮೇವು ಖರೀದಿಸುತ್ತಿದ್ದಾರೆ.

ಬೇಸಿಗೆ ಮೊದಲೇ ಕಂದಾಯ, ವಶುಪಾಲನೆ ಹಾಗೂ ಅರಣ್ಯ ಇಲಾಖೆಯಿಂದ ಬೆಟ್ಟಗುಡ್ಡ ಅರಣ್ಯ ಪ್ರದೇಶಗಳಲ್ಲಿ ಪಕ್ಷಿಗಳ ದಾಹ ನೀಗಿಸಲು ಕ್ರಮ ವಹಿಸಲಾಗುತ್ತಿತ್ತು. ಆದರೆ, ಪ್ರಸಕ್ತ ವರ್ಷ ಚುನಾವಣೆ ಕಾರ್ಯದ ಒತ್ತಡದಿಂದ ಈ ಯೋಜನೆ ಅನುಷ್ಠಾನಗೊಂಡಿಲ್ಲ.

ತಾಲ್ಲೂಕಿನಲ್ಲಿ 40 ಸಾವಿರಕ್ಕೂ ಅಧಿಕ ಕುರಿ–ಮೇಕೆಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ತೊಟ್ಟಿಗಳ ನೈರ್ಮಲ್ಯ ಕಾಪಾಡಲು ಪಿಡಿಒಗಳಿಗೆ ಪತ್ರ ಬರೆಯಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಇ.ಒ ಹೇಮಾವತಿ ಪ್ರತಿಕ್ರಿಯಿಸಿದ್ದಾರೆ.

ರೈತರಿಗೆ ವಿವಿಧ ಬಗೆ ಮೇವಿನ ತಳಿ ಬೀಜ ವಿತರಣೆ ಮಾಡಲಾಗಿದೆ. ಸದ್ಯ ತಾಲ್ಲೂಕಿನ ಎರಡು ಕಡೆ ಮೇವು ಕೇಂದ್ರ ಸ್ಥಾಪನೆ ಮಾಡಲು ಸಿದ್ಧತೆ ನಡೆದಿದೆ ಎನ್ನುತ್ತಾರೆ ಗುಡಿಬಂಡೆ ಪಶು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ರವಿ.

ಅರಣ್ಯ ಇಲಾಖೆ ವತಿಯಿಂದ ಪ್ರಾಣಿ–ಪಕ್ಷಿಗಳಿಗೆ ನೀರು ಒದಗಿಸುವ ಸಲುವಾಗಿ ಎಲ್ಲೋಡು, ಬೀಚಗಾನಹಳ್ಳಿ ಅರಣ್ಯ ಪ್ರದೇಶದಲ್ಲಿ ತಲಾ 12 ಸಾವಿರ ಲೀಟರ್ ಸಾಮರ್ಥ್ಯದ ನೀರು ಶೇಖರಣೆ ಟ್ಯಾಂಕ್ ಹಾಗೂ 25 ನೀರಿನ ತೊಟ್ಟಿಗಳನ್ನು ಅಳವಡಿಸಲಾಗಿದೆ ಎನ್ನುತ್ತಾರೆ ಸಾಮಾಜಿಕ ಅರಣ್ಯ ಇಲಾಖೆ ಆರ್‌ಎಫ್‌ಒ ಪೂರ್ಣಿಕಾ ರಾಣಿ.

ಕುಡಿಯುವ ನೀರು ಮತ್ತು ಮೇವಿಗೆ ತೀವ್ರ ಬರ ಆವರಿಸಿದೆ. ಸುಳ್ಳು ಹೇಳುತ್ತಾ ಕಾಲಹರಣ ಮಾಡದೆ ಅಧಿಕಾರಿಗಳು ಕೂಡಲೇ ಗೋಶಾಲೆ ಹಾಗೂ ಮೇವು ಕೇಂದ್ರ ಸ್ಥಾಪನೆಗೆ ಒತ್ತು ನೀಡಬೇಕು. ಇಲ್ಲದಿದ್ದರೆ ಜಾನುವಾರು ಸಾಕಣೆ ಮಾಡಲಾಗದೆ ಕಸಾಯಿಖಾನೆಗೆ ಮಾರಾಟ ಮಾಡುವ ಪರಿಸ್ಥಿತಿ ಬರಲಿದೆ ಎಂದು ರೈತ ಮುಖಂಡ ಕಡೇಹಳ್ಳಿ ಅನಂದಪ್ಪ ಆಕ್ರೋಶ ವ್ಯಕ್ತಪಡಿಸುತ್ತಾರೆ. 

ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಅಳವಡಿಸಿರುವ ನೀರಿನ ತೊಟ್ಟಿ
ಬಿಸಿಲಿನ ಧಗೆಯಲ್ಲೂ ಮೇವಿಗಾಗಿ ಪರದಾಡುತ್ತಿರುವ ಕುರಿಗಳು
ತಾಲ್ಲೂಕಿನಲ್ಲಿ ಮಳೆಯ ಅಭಾವದಿಂದ ಕಳೆದ ವರ್ಷ ಬೆಳೆಯಾಗದೇ ಜಾನುವಾರುಗಳಿಗೆ ಮೇವು ಕೊರತೆಯಾಗಿದ್ದು ಪಕ್ಕದ ಅಂದ್ರಪ್ರದೇಶದಿಂದ ಟ್ರಾಕ್ಟರ್ ನಲ್ಲಿ ಜೋಳದ ಮೇವು ಖರೀದಿ ಮಾಡಿ ತರುತ್ತಿರುವ ರೈತರು.
ನಿರ್ವಹಣೆ ಇಲ್ಲದ ನೀರಿನ ತೊಟ್ಟಿಗಳು

ಸರ್ಕಾರ ಗಂಭೀರವಾಗಿ ಪರಿಗಣಿಸಲಿ ಬರ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳ ನಡೆ ಕುರಿತು ಜಿಲ್ಲಾಧಿಕಾರಿ ಗಂಭೀರವಾಗಿ ಪರಿಗಣಿಸಬೇಕು. ಮೇವು ಬ್ಯಾಂಕ್‌ಗಿಂತ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಗೋಶಾಲೆ ನಿರ್ಮಾಣ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಪಿ.ರಾಮನಾಥರೆಡ್ಡಿ ಒತ್ತಾಯಿಸಿದ್ದಾರೆ. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ದನ–ಕರುಗಳಿಗಾಗಿ ನಿರ್ಮಿಸಿರುವ ನೀರಿನ ತೊಟ್ಟಿಗಳು ಸ್ವಚ್ಛತೆ ಕಾಣದಂತಾಗಿದೆ. ಕೆಲವೆಡೆ ತೊಟ್ಟಿಗಳಲ್ಲಿನ ನೀರನ್ನು ಗ್ರಾಮಸ್ಥರು ಬಟ್ಟೆ ಹಾಗೂ ದನಕರು ತೊಳೆಯಲು ಬಳಕೆ ಮಾಡುತ್ತಿದ್ದಾರೆ. ಜಾನುವಾರು ಕುಡಿಯುವ ನೀರು ಒದಗಿಸುವ ಸಲುವಾಗಿ ಗ್ರಾಮ ಪಂಚಾಯಿತಿ ನಿರ್ಮಿಸಿರುವ ತೊಟ್ಟಿಗಳ ನಿರ್ವಹಣೆ ಆಯಾ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.