ADVERTISEMENT

ನೀರು ಸಂಸ್ಕರಣೆಗೆ ಬಾತುಕೋಳಿ...!

ಚಿಕ್ಕಬಳ್ಳಾಪುರ ನಗರಸಭೆಯಿಂದ ವಿನೂತನ ಪರಿಸರಸ್ನೇಹಿ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 4:16 IST
Last Updated 20 ಡಿಸೆಂಬರ್ 2020, 4:16 IST
ಜಿಲ್ಲಾಧಿಕಾರಿ ಆರ್.ಲತಾ ಅವರು ಬಾತುಕೋಳಿಗಳನ್ನು ವೀಕ್ಷಿಸಿದರು.
ಜಿಲ್ಲಾಧಿಕಾರಿ ಆರ್.ಲತಾ ಅವರು ಬಾತುಕೋಳಿಗಳನ್ನು ವೀಕ್ಷಿಸಿದರು.   

ಚಿಕ್ಕಬಳ್ಳಾಪುರ: ‘ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ ಕೊಳಚೆ ನೀರನ್ನು ಬಾತುಕೋಳಿಗಳಿಂದ ನೈಸರ್ಗಿಕವಾಗಿ ಸಂಸ್ಕರಣೆ ಮಾಡುವ ವಿನೂತನ ವಿಧಾನವನ್ನು ಚಿಕ್ಕಬಳ್ಳಾಪುರ ನಗರಸಭೆ ಅಳವಡಿಸಿಕೊಂಡಿದೆ’ ಎಂದು ಜಿಲ್ಲಾಧಿಕಾರಿ ಆರ್. ಲತಾ ತಿಳಿಸಿದರು.

ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7ರ ಬದಿ ಇರುವ ನಗರಸಭೆ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ನಗರಸಭೆಯ ಹೊಸ ಪ್ರಯೋಗ ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೀರು ಸಂಸ್ಕರಣಾ ಘಟಕದಲ್ಲಿ ಆರು ಹೊಂಡಗಳಿವೆ. ಅವುಗಳ ಪೈಕಿ ಅಂತಿಮವಾಗಿ ನೀರು ಶುದ್ಧೀಕರಿಸುವ ಎರಡು ಹೊಂಡಗಳಲ್ಲಿ ನೂರು ಬಾತುಕೋಳಿಗಳನ್ನು ಬಿಡಲಾಗಿದೆ. ಇದೊಂದು ಪರಿಸರ ಸ್ನೇಹಿ ಪ್ರಯೋಗವಾಗಿದ್ದು, ತ್ಯಾಜ್ಯ ನೀರಿನ ಸಂಸ್ಕರಣೆಗೆ ಯಂತ್ರಗಳ ಬದಲು ಪಕ್ಷಿಗಳನ್ನು ಬಳಕೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಬಾತುಕೋಳಿಗಳು ನೀರಿನಲ್ಲಿ ಚಲಿಸಬೇಕಾದರೆ ಅತಿ ವೇಗವಾಗಿ ರೆಕ್ಕೆಗಳನ್ನು ಬಡಿಯುತ್ತವೆ. ರೆಕ್ಕೆಗಳು ಬಡಿದಾಗಲೆಲ್ಲ ನೈಸರ್ಗಿಕ ಪ್ರಕ್ರಿಯೆಯಲ್ಲಿ ಕೊಳೆಚೆ ನೀರಿನಲ್ಲಿ ಆಮ್ಲಜನಕ ಸೇರ್ಪಡೆಯಾಗುತ್ತದೆ. ಇದರಿಂದ ಕೊಳಚೆ ನೀರು ಶುದ್ಧೀಕರಣವಾಗುತ್ತದೆ. ಇದೊಂದು ವಿದ್ಯುತ್ ಉಳಿತಾಯ, ಪರಿಸರ ರಕ್ಷಣೆ ಆಶಯದ ಪ್ರಯೋಗವಾಗಿದೆ’ ಎಂದು ತಿಳಿಸಿದರು.

‘ಇಲ್ಲಿ ಸಂಸ್ಕರಣೆಯಾಗುವ ನೀರನ್ನು ಜಿಲ್ಲಾಡಳಿತ ಭವನ ಮತ್ತು ಎಸ್ಪಿ ಕಚೇರಿ ಆವರಣದಲ್ಲಿರುವ ತೋಟಗಳಿಗೆ ಬಳಕೆ ಮಾಡಲು ಮತ್ತು ಸುತ್ತಲಿನ ರೈತರಿಗೆ ನೀಡಲು ಯೋಜನೆ ರೂಪಿಸಲಾಗಿದೆ. ಒಂದು ಬಾತುಕೋಳಿ ವಾರ್ಷಿಕ ಸರಾಸರಿ 300 ಮೊಟ್ಟೆಗಳನ್ನು ನೀಡಲಿದೆ. 100 ಕೋಳಿಗಳಿಂದ ಸಿಗುವ ಮೊಟ್ಟೆಗಳನ್ನು ಮಾರಾಟ ಮಾಡಿ, ಬರುವ ಆದಾಯದಿಂದ ಘಟಕವನ್ನು ನಿರ್ವಹಣೆ ಮಾಡಬಹುದಾಗಿದೆ’ ಎಂದರು.

ನಗರಸಭೆ ಆಯುಕ್ತ ಲೋಹಿತ್ ನಗರಸಭೆಯ ಅಧ್ಯಕ್ಷರಾದ ಆನಂದರೆಡ್ಡಿ ಬಾಬು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.