ADVERTISEMENT

ಶಿಡ್ಲಘಟ್ಟ: ಸೌಹಾರ್ದದ ಪ್ರತೀಕ ಈದ್ ಮಿಲಾದ್

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 14:16 IST
Last Updated 16 ಸೆಪ್ಟೆಂಬರ್ 2024, 14:16 IST
ಶಿಡ್ಲಘಟ್ಟದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಮರು ಮೆರವಣಿಗೆಯಲ್ಲಿ ಈದ್ಗಾ ಮೈದಾನಕ್ಕೆ ಪ್ರಾರ್ಥನೆಗೆ ತೆರಳಿದರು
ಶಿಡ್ಲಘಟ್ಟದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಮರು ಮೆರವಣಿಗೆಯಲ್ಲಿ ಈದ್ಗಾ ಮೈದಾನಕ್ಕೆ ಪ್ರಾರ್ಥನೆಗೆ ತೆರಳಿದರು   

ಶಿಡ್ಲಘಟ್ಟ: ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ಅಂಗವಾಗಿ ಆಚರಿಸಲಾಗುವ ಈದ್ ಮಿಲಾದ್ ಹಬ್ಬವನ್ನು ಸಡಗರ ಸಂಭ್ರಮದಿಂದ ಮುಸ್ಲಿಮರು ಸೋಮವಾರ ಆಚರಿಸಿದರು.

ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲಿಮರು ತಮ್ಮ ಮನೆಗಳಲ್ಲಿ ಸಿಹಿ ಪದಾರ್ಥ ತಯಾರಿಸಿ ಪರಸ್ಪರ ನೆರೆಹೊರೆಯವರಿಗೆ ಹಂಚುತ್ತಾರೆ. ಪ್ರಮುಖ ಮಸೀದಿ ಹಾಗೂ ದರ್ಗಾಗಳಲ್ಲಿ ದಾನಿಗಳು ಊಟ ಮಾಡಿಸುವುದು ಸಂಪ್ರದಾಯ. ಇಸ್ಲಾಮಿನ ರಬಿವುಲ್ ಅವ್ವಲ್ ತಿಂಗಳಲ್ಲಿ ಈ ಹಬ್ಬ ಬರುವ ಕಾರಣ ಒಂದು ತಿಂಗಳ ಕಾಲ ಮಸೀದಿಗಳಲ್ಲಿ ಮೌಲಿದ್ ಪಾರಾಯಣ (ಮಹಮ್ಮದ್ ಫೈಗಂಬರ್ ಅವರ ಕೀರ್ತನೆ) ಮಾಡಲಾಗುತ್ತಿದೆ.

ತಾಲ್ಲೂಕಿನಾದ್ಯಂತ ಈದ್-ಮಿಲಾದ್ ಹಬ್ಬವನ್ನು ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ನಗರದ ಪ್ರಮುಖ ಬೀದಿಗಳನ್ನು ಹಾಗೂ ಹಲವು ಸ್ಥಳಗಳನ್ನು ಅಲಂಕರಿಸಲಾಗಿತ್ತು.

ADVERTISEMENT

ಹಬ್ಬದ ನಿಮಿತ್ತ ಮುಸ್ಲಿ ಸಮಾಜದಿಂದ ಎಲ್ಲಾ ಬಡಾವಣೆಗಳ ಪ್ರಮುಖ ಮಸೀದಿಗಳಿಂದ ಮಹಮ್ಮದ್ ಫೈಗಂಬರ್ ಅವರ ಜನ್ಮಸ್ಥಳ ಮೆಕ್ಕಾ ಹಾಗೂ ಇಸ್ಲಾಂ ಪ್ರಚಾರ ಅರಂಭಿಸಿದ ಮದೀನಾ ನಗರಗಳ ಸ್ಥಬ್ದ ಚಿತ್ರದ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಮುಹಮ್ಮದ ಅವರ ಕುರಿತ ನಾತೆ, ಕವ್ವಾಲಿ ಹಾಡಲಾಯಿತು.

ಮನೆಗಳಲ್ಲಿ ಮಹಿಳೆಯರು ಸಿಹಿ ತಿಂಡಿಗಳನ್ನು ತಯಾರಿಸಿ ವಿತರಿಸಿದರು. ಕಿರಿಯರು ಮತ್ತು ಹಿರಿಯರು ಹೊಸ ಉಡುಪುಗಳನ್ನು ತೊಟ್ಟು ಸಂತಸಪಟ್ಟರು. ಮೆರವಣಿಗೆ ಹಾಗೂ ಸಾಮೂಹಿಕ ಪ್ರಾರ್ಥನೆಯನ್ನು ಈದ್ಗಾ ಮೈದಾನದಲ್ಲಿ ನಡೆಸಲಾಯಿತು.

‘ಪ್ರವಾದಿ ಮಹಮ್ಮದ್ ಅವರು ಬಡವರ ಹಾಗೂ ಹಸಿವೆ ಹೆಚ್ಚಿನ ಮಹತ್ವ ನೀಡಿದ ಕಾರಣ ಹಬ್ಬದಂದು ಅನ್ನ ಸಂತರ್ಪಣೆ ಮಾಡುವುದು ಸಂಪ್ರದಾಯ. ಉಳ್ಳವರು ಮಸೀದಿಗಳಲ್ಲಿ ಊಟ ಮಾಡಿಸುವುದು ಹಾಗೂ ಬಡವರಿಗೆ ಬಟ್ಟೆ, ನಗದು ದಾನ ಮಾಡುವ ಸಂಪ್ರದಾಯವೂ ಇದೆ. ಅವರ ಅನುಯಾಯಿ ಮುಸ್ಲಿಮರೆಲ್ಲರೂ ಈ ಸಂಪ್ರದಾಯ ಪಾಲನೆ ಮಾಡುತ್ತಾ ಬಂದಿದ್ದಾರೆ’ ಎಂದು ಮೆಹಬೂಬ್ ಪಾಷ ತಿಳಿಸಿದರು.

‘ಮಿಲಾದ್ ಅಂದರೆ ಹುಟ್ಟು, ಪ್ರವಾದಿ ಮಹಮ್ಮದ್ ಅವರ ಹುಟ್ಟಿದ ದಿನವನ್ನು ಹಬ್ಬದ ಆಚರಣೆ ಮಾಡಲಾಗುತ್ತದೆ. ಮನೆ, ಮಸೀದಿಗಳ ಅಲಂಕಾರ ವಿಶೇಷವಾಗಿರುತ್ತದೆ. ಹೀಗಾಗಿ ಹಲವರು ಮದರಸಾಗಳ ಮಕ್ಕಳಿಗೆ ಹಾಗೂ ಬಡ ಜನರಿಗೆ ಬಟ್ಟೆದಾನ ಮಾಡಿದ್ದಾರೆ. ಹಬ್ಬದ ಆಚರಣೆಯ ಒಟ್ಟು ಉದ್ದೇಶ ಪರಸ್ಪರ ಸಹೋದರತೆ, ಪರಧರ್ಮ ಸಹಿಷ್ಣುತೆ, ಮಾನವೀಯ ಮೌಲ್ಯಗಳನ್ನು ತಿಳಿಸುವುದಾಗಿದೆ’ ಎಂದು ಅವರು ಹೇಳಿದರು.

ಮಕ್ಕಳು ಸಂಭ್ರಮದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.