ADVERTISEMENT

ಗೌರಿಬಿದನೂರು: ಕಸದ ತೊಟ್ಟಿಯಾದ ಖಾಲಿ ನಿವೇಶನಗಳು

ಗೌರಿಬಿದನೂರು ನಗರದ ಹೊರವಲಯದ ಬಡಾವಣೆಗಳಲ್ಲಿಯೂ ಅಧ್ವಾನ

ಕೆ.ಎನ್‌.ನರಸಿಂಹಮೂರ್ತಿ
Published 21 ಅಕ್ಟೋಬರ್ 2024, 7:20 IST
Last Updated 21 ಅಕ್ಟೋಬರ್ 2024, 7:20 IST
ಗೌರಿಬಿದನೂರು ರೈಲ್ವೆ ಸಮಾನಂತರ ರಸ್ತೆ ಪಕ್ಕದ ಬಡಾವಣೆಯಲ್ಲಿನ ನಿವೇಶನಗಳ ಸ್ಥಿತಿ
ಗೌರಿಬಿದನೂರು ರೈಲ್ವೆ ಸಮಾನಂತರ ರಸ್ತೆ ಪಕ್ಕದ ಬಡಾವಣೆಯಲ್ಲಿನ ನಿವೇಶನಗಳ ಸ್ಥಿತಿ   

ಗೌರಿಬಿದನೂರು: ನಗರವು ದಿನದಿಂದ ದಿನಕ್ಕೆ ವ್ಯಾಪಕವಾಗಿ ಬೆಳೆಯುತ್ತಿದೆ. ನಿವೇಶನಗಳು ದುಬಾರಿ ಆಗುತ್ತಿವೆ. ರಿಯಲ್ ಎಸ್ಟೇಟ್ ಉದ್ಯಮಿಗಳು ವ್ಯವಸಾಯದ ಜಮೀನನ್ನು ನಿವೇಶವಾಗಿ ಪರಿವರ್ತಿಸುತ್ತಲೇ ಇದ್ದಾರೆ.

ಇದು ಒಂದೆಡೆಯಾದರೆ, ತಲೆ ಎತ್ತಿದ ಬಡಾವಣೆಗಳು, ನಿವೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗಿಡಗಂಟಿಗಳು ಬೆಳೆದಿವೆ. ನಗರವನ್ನು ಒಮ್ಮೆ ಸುತ್ತಿದರೆ ಜನವಸತಿ ಪ್ರದೇಶಗಳಲ್ಲಿ ಖಾಲಿ ಇರುವ ನಿವೇಶನಗಳಲ್ಲಿ ಕುರುಚಲು ಗಿಡಗಳು,  ಗಿಡಗಂಟಿ,  ಪ್ಲಾಸ್ಟಿಕ್, ಮದ್ಯದ ಬಾಟಲಿಗಳು, ಹಸಿ ಮತ್ತು ಒಣ ತ್ಯಾಜ್ಯ,  ಮಾಂಸದ ತ್ಯಾಜ್ಯ, ಕಟ್ಟಡದ ಅವಶೇಷಗಳ ತ್ಯಾಜ್ಯ ಎದ್ದು ಕಾಣುತ್ತದೆ.

ಗೌರಿಬಿದನೂರು ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿವೆ. ಈ ವಾರ್ಡ್‌ಗಳ ವ್ಯಾಪ್ತಿಯಲ್ಲಿನ ಬಹುತೇಕ ಖಾಲಿ ನಿವೇಶನಗಳ ಸ್ಥಿತಿ ಇದೇ ರೀತಿಯಲ್ಲಿ ಇದೆ.

ADVERTISEMENT

 ತ್ಯಾಜ್ಯದ ಘಟಕಗಳಾಗಿ ಸೊಳ್ಳೆಗಳನ್ನು ಉತ್ಪತ್ತಿ ಮಾಡುವ ತಾಣಗಳಾಗಿವೆ. ಇಲಿ, ಹೆಗ್ಗಣ, ಹಾವು, ಚೇಳು ಸೇರಿ ವಿಷ ಜಂತುಗಳ ಆವಾಸ ಸ್ಥಾನಗಳಾಗಿವೆ.  ನೆರೆಮನೆಯವರು ನಿತ್ಯ ಆತಂಕದಿಂದಲೇ ದಿನ ಕಳೆಯುವ ಸ್ಥಿತಿ ಇದೆ. ಇಂತಹ ಭಾಗದಲ್ಲಿ ಮಕ್ಕಳು ಮತ್ತು ಮಹಿಳೆಯರು ಸಂಚರಿಸಲು ಕಷ್ಟವಾಗುತ್ತಿದೆ.

ನಗರದ ಅಭಿಲಾಷ್ ಲೇಔಟ್, ಕಲ್ಲೂಡಿ, ಕರೇಕಲ್ಲಹಳ್ಳಿ, ಮಾದನಹಳ್ಳಿ, ಬೈ ಪಾಸ್ ರಸ್ತೆ, ಮುನೇಶ್ವರ ಬಡಾವಣೆ ಮತ್ತಿತರ ಹಲವು ಬಡಾವಣೆಗಳಲ್ಲಿ ಈ ಅಧ್ವಾನ ಹೆಚ್ಚು ಕಾಣುತ್ತದೆ.

ಬಹುತೇಕ ಎಲ್ಲಾ ವಾರ್ಡ್‌ಗಳಲ್ಲೂ ಖಾಲಿ ನಿವೇಶನಗಳು ಇರುವುದರಿಂದ ನಾಯಿಗಳ ಹಾವಳಿ ಮಿತಿ ಮೀರಿದೆ. ಮಾಂಸದ ಅಂಗಡಿಗಳವರು ಬಿಸಾಡುವ ಮಾಂಸದ ತ್ಯಾಜ್ಯವನ್ನು ತಿಂದು, ನಾಯಿಗಳು ರೋಷಭರಿತವಾಗಿದ್ದು, ನಗರದಲ್ಲಿ  ನಾಯಿ ಕಡಿತದ ಪ್ರಕರಣಗಳು ಹೆಚ್ಚುತ್ತಿವೆ. ಹಾಗೂ ಖಾಲಿ ನಿವೇಶನಗಳಿಗೆ ಮನೆಗಳಲ್ಲಿನ ತ್ಯಾಜ್ಯದ ನೀರು ಹರಿಯುವುದರಿಂದ, ಗಿಡ ಗಂಟಿಗಳು ಬೆಳೆದು, ತ್ಯಾಜ್ಯ ಸಂಗ್ರಹವಾಗುತ್ತಿದೆ. ಇದರಲ್ಲಿ ಹಂದಿಗಳು ನಿತ್ಯವೂ ಕಾಣುತ್ತವೆ. ಅಲ್ಲಿಯೇ ಸಂತಾನವನ್ನು ಹೆಚ್ಚಿಸಿಕೊಳ್ಳುತ್ತಿವೆ.

ನಗರದ ಬಹುತೇಕ ವಾರ್ಡ್ ಗಳಲ್ಲಿ ದಶಕಗಳಿಂದಲೂ ಖಾಲಿ ಇರುವ ನಿವೇಶನದ ಮಾಲೀಕರು ಯಾರು ಎನ್ನುವುದು ನಗರಸಭೆಗೂ ಕೂಡ ತಿಳಿದಿಲ್ಲ ಎನ್ನುವಂತಿದೆ. ಮಾಲೀಕರು ಸಹ ತಮ್ಮ ನಿವೇಶನಗಳ ಸ್ವಚ್ಛತೆಗೆ ಮುಂದಾಗುತ್ತಿಲ್ಲ. ಇದು ನಗರದ ಸೌಂದರ್ಯಕ್ಕೆ ಕಪ್ಪು ಚುಕ್ಕೆ ಎನಿಸಿದೆ.

ಕೆಲವು ಬಡಾವಣೆ ನಿರ್ಮಾಣವಾಗಿ ದಶಕಗಳೇ ಕಳೆದಿವೆ. ಈ ಬಡಾವಣೆಗಳಲ್ಲಿ ಮನೆಗಳು ನಿರ್ಮಾಣವಾಗಿಲ್ಲ. ಇಂತಹ ಖಾಲಿ ಬಡಾವಣೆಗಳು ನಗರದ ಹೊರ ವಲಯದಲ್ಲಿ ಸಾಕಷ್ಟು ಕಂಡು ಬರುತ್ತವೆ.

ನಗರದ ವಾತಾವರಣವನ್ನು ಉತ್ತಮವಾಗಿ ಕಾಪಾಡುವುದು ಅಧಿಕಾರಿಗಳು ಮತ್ತು ಸ್ಥಳೀಯ ನಾಗರಿಕರ ಜವಾಬ್ದಾರಿ. ನಗರದಲ್ಲಿನ ಖಾಲಿ ನಿವೇಶನಗಳ ಸ್ವಚ್ಛತೆಗೆ ಬೃಹತ್ ಅಭಿಯಾನ ಅವಶ್ಯಕವಿದೆ. ಖಾಲಿ ನಿವೇಶನಗಳ ಮಾಲೀಕರಿಗೆ ಸ್ವಚ್ಛತೆ ಮಾಡಲು  ಕಡ್ಡಾಯವಾಗಿ ಎಚ್ಚರಿಕೆ ನೀಡಬೇಕು. ತಪ್ಪಿದಲ್ಲಿ ದಂಡ ವಿಧಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುವರು.

ಕಲಾ ಭವನದ ಪಕ್ಕದ ನಿವೇಶನಗಳಲ್ಲಿ ತ್ಯಾಜ್ಯ
ಬಿ.ಎಚ್ ರಸ್ತೆ ಮನೆಗಳ ಬಳಿಯ ಖಾಲಿ ನಿವೇಶನಗಳಲ್ಲಿ ಗಿಡಗಳು 
ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ
ಖಾಲಿ ನಿವೇಶನಗಳಿಂದ ನಗರದಲ್ಲಿ ಗಂಭೀರ ಸಮಸ್ಯೆ ಆಗುತ್ತಿರುವುದು ಕಂಡು ಬರುತ್ತಿದೆ. ಈ ಬಗ್ಗೆ ಎಲ್ಲಾ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಲಕ್ಷ್ಮಿನಾರಾಯಣಪ್ಪ. ನಗರಸಭೆ ಅಧ್ಯಕ್ಷ ಗೌರಿಬಿದನೂರು ನೋಟಿಸ್ ನೀಡಲಾಗಿದೆ ನಗರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ಹಲವು  ಖಾಸಗಿ ನಿವೇಶನ ಮಾಲೀಕರಿಗೆ  ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸುವ ಕುರಿತು ನೋಟಿಸ್ ನೀಡಲಾಗಿದೆ. ತಪ್ಪಿದಲ್ಲಿ ನಗರಸಭೆಯಿಂದ ಸ್ವಚ್ಛಗೊಳಿಸಿ ಅವರ  ನಿವೇಶನದ ದಾಖಲೆಗಳಲ್ಲಿ  ದಂಡ ಸೇರಿಸಲಾಗುವುದು. ಡಿ.ಎಂ ಗೀತಾ ನಗರಸಭೆ ಪೌರಾಯುಕ್ತೆ ಗೌರಿಬಿದನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.