ಚಿಂತಾಮಣಿ: ಚಿಂತಾಮಣಿಗೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಬೇಕು ಎಂಬ ದಶಕಗಳ ಕನಸು ನನಸಾಗಿದ್ದು, ನಗರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಪ್ರಸಕ್ತ ಸಾಲಿನಿಂದಲೇ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಂಯೋಜಿತ ಎಂಜಿನಿಯರಿಂಗ್ ಕಾಲೇಜು ಕಾರ್ಯಾರಂಭ ಮಾಡಲಿದೆ.
ಈ ವರ್ಷದ ಸಿಇಟಿ ಕೌನ್ಸೆಲಿಂಗ್‌ನ ಸೀಟ್ ಮ್ಯಾಟ್ರಿಕ್ಸ್‌ಗೆ ಸೇರಿಸಲಾಗಿದೆ. ಶೀಘ್ರದಲ್ಲೇ ನಡೆಯಲಿರುವ ಸಿಇಟಿ ಕೌನ್ಸೆಲಿಂಗ್‌ನಲ್ಲಿ ವಿದ್ಯಾರ್ಥಿಗಳು ಸೀಟುಗಳನ್ನು ಆಯ್ಕೆ ಮಾಡಿಕೊಂಡು ದಾಖಲಾಗಬಹುದು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಆಸಕ್ತಿಯಿಂದ ಸರ್.ಎಂ.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಂಯೋಜಿತ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆರಂಭವಾಗುತ್ತಿದೆ. ಸರ್ಕಾರಿ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಇಲ್ಲ. ಚಿಂತಾಮಣಿಯಲ್ಲಿ ಎಂಜಿನಿಯರಿಂಗ್ ಕಾಲೇಜು ತೆರೆಯುವ ಬೇಡಿಕೆ ದಶಕಗಳದ್ದು. ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಿದೆ. ಜಿಲ್ಲೆಯ ಅತ್ಯಂತ ದೊಡ್ಡ ತಾಲ್ಲೂಕು ಚಿಂತಾಮಣಿಯಲ್ಲಿ ಎಂಜಿನಿಯರಿಂಗ್ ಕಾಲೇಜು ಆರಂಭವಾಗಿರುವುದು ನಾಗರಿಕರಲ್ಲಿ ಸಂತಸ ಉಂಟಾಗಿದೆ.
ನಗರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಎಂಜಿನಿಯರಿಂಗ್ ಕಾಲೇಜಿನ ತರಗತಿ ಆರಂಭಿಸಲಾಗುತ್ತದೆ. ಚಿಂತಾಮಣಿ ಸರ್ಕಾರಿ ಪಾಲಿಟೆಕ್ನಿಕ್‌ಗೂ ಉತ್ತಮ ಇತಿಹಾಸವಿದೆ. ರಾಜ್ಯದಲ್ಲಿ ಪ್ರಾರಂಭವಾದ ಮೂರನೇ ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಅವಿಭಜಿತ ಕೋಲಾರ ಜಿಲ್ಲೆಯ ಪ್ರಥಮ ಸರ್ಕಾರಿ ಪಾಲಿಟೆಕ್ನಿಕ್ ಎಂಬ ಹೆಗ್ಗಳಿಕೆ ಇದೆ.
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಎಂಜಿನಿಯರಿಂಗ್ ಕಾಲೇಜನ್ನು ಮಂಜೂರು ಮಾಡಿಸಿದರೆ, ಅವರ ತಾತ ಅಂದು ಶಾಸಕರಾಗಿದ್ದ ಎಂ.ಸಿ.ಆಂಜನೇಯರೆಡ್ಡಿ ಸರ್ಕಾರಿ ಪಾಲಿಟೆಕ್ನಿಕ್ ಮಂಜೂರು ಮಾಡಿಸಿದ್ದರು ಎಂಬುದು ಸ್ಮರಣೀಯ.
ರಾಜ್ಯದಲ್ಲಿ ಬೆಂಗಳೂರಿನ ಎಸ್.ಜೆ.ಪಿ ಪಾಲಿಟೆಕ್ನಿಕ್, ಮೈಸೂರಿನ ಸರ್ಕಾರಿ ಪಾಲಿಟೆಕ್ನಿಕ್ ನಂತರ ಮೂರನೆಯ ಸರ್ಕಾರಿ ಪಾಲಿಟೆಕ್ನಿಕ್ ಚಿಂತಾಮಣಿಗೆ ತಂದ ಕೀರ್ತಿ ಅಂದಿನ ಶಾಸಕ ಎಂ.ಸಿ.ಆಂಜನೇಯರೆಡ್ಡಿಗೆ ಸಲ್ಲುತ್ತದೆ. 1951ರಲ್ಲಿ ಜಿಲ್ಲೆಯಲ್ಲಿ ಯಾವ ಪುರಸಭೆ ₹50 ಸಾವಿರ ಠೇವಣಿ ಮಾಡಿದವರಿಗೆ ಪಾಲಿಟೆಕ್ನಿಕ್ ನೀಡುವುದಾಗಿ ಸರ್ಕಾರದ ಆದೇಶವಾಗಿತ್ತು. ಕೊನೆಯ ದಿನಾಂಕದಂದು ರಾತ್ರಿಯವರೆಗೂ ಖಜಾನೆಯ ಲೆಕ್ಕಾಚಾರವನ್ನು ಮುಕ್ತಾಯಗೊಳಿಸಬಾರದು ಎಂದು ಆಂಜನೇಯರೆಡ್ಡಿ ಅಧಿಕಾರಿಗಳಿಗೆ ಸೂಚಿಸಿ ಸಂಜೆಗೆ ₹50 ಸಾವಿರ ಜಮಾ ಮಾಡಿದರು ಎಂದು ಆಗ ಶಿರಸ್ತೆದಾರ್ ಆಗಿದ್ದ ಎನ್. ಶಾಮಣ್ಣ ಹೇಳುತ್ತಿದ್ದರು ಎಂದು ಹಿರಿಯ ನಾಗರಿಕ ಎ.ಕೃಷ್ಣಪ್ಪ ಸ್ಮರಿಸುತ್ತಾರೆ.
ಡಾ.ಎಂ.ಸಿ.ಸುಧಾಕರ್ 10-12 ವರ್ಷಗಳ ಹಿಂದೆಯೇ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಕನಸು ಕಂಡಿದ್ದರು. ಆದರೆ ಚುನಾವಣೆಯಲ್ಲಿ ಎರಡು ಬಾರಿ ಸೋತಿದ್ದರಿಂದ ಕಾಲೇಜಿನ ಕನಸು ನನೆಗುದಿಗೆ ಬಿದ್ದಿತ್ತು. 2023ರ ಚುನಾವಣೆಯಲ್ಲಿ ಅವರು ಗೆದ್ದ ಒಂದೇ ವರ್ಷದಲ್ಲಿ ಎಂಜಿನಿಯರಿಂಗ್ ಕಾಲೇಜನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ಉನ್ನತ ಹುದ್ದೆ ಪಡೆದಿದ್ದಾರೆ. ರಾಜ್ಯದ ಉತ್ತಮ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಒಂದಾಗಿದೆ. ಅದರಲ್ಲಿ ಎಂಜಿನಿಯರಿಂಗ್ ಕಾಲೇಜು ಆರಂಭವಾಗುತ್ತಿದ್ದು, ಅದೂ ಸಹ ಪಾಲಿಟೆಕ್ನಿಕ್‌ನಂತೆ ಶೈಕ್ಷಣಿಕವಾಗಿ ಉನ್ನತ ಸ್ಥಾನಕ್ಕೆ ಬೆಳೆಯಲಿ ಎಂಬುದು ನಗರದ ಶಿಕ್ಷಣಪ್ರೇಮಿಗಳ ಆಶಯವಾಗಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭವಾಗುತ್ತಿರುವ ಚಿಂತಾಮಣಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಾಲ್ಕು ಕೋರ್ಸ್‌ಗಳಿಗೆ ಮಂಜೂರಾತಿ ಸಿಕ್ಕಿದೆ. ಕಂಪ್ಯೂಟರ್ ಸೈನ್ಸ್, ಕಂಪ್ಯೂಟರ್ ಸೈನ್ಸ್(ಎಐಎಂಎಲ್), ಎಲೆಕ್ಟ್ರಾನಿಕ್ಸ್ ಅ‍್ಯಂಡ್ ಕಮ್ಯೂನಿಕೇಷನ್, ಎಲೆಕ್ಟ್ರಿಕಲ್ ಅ‍್ಯಂಡ್ ಎಲೆಕ್ಟ್ರಾನಿಕ್ಸ್ ವಿಭಾಗಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಅನುಮತಿ ದೊರೆತಿದೆ. ಪ್ರತಿ ಕೋರ್ಸ್‌ಗೂ ತಲಾ 60 ಸೀಟುಗಳಿವೆ ಎಂದು ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಮುದ್ದೇನಹಳ್ಳಿ ಕಾಲೇಜಿನಿಂದ ಶಿವಮೂರ್ತಿ ಎಂಬುವವರನ್ನು ನೋಡಲ್ ಅಧಿಕಾರಿ ಹಾಗೂ ಪ್ರಭಾರಿ ಪ್ರಾಂಶುಪಾಲರನ್ನಾಗಿ ನೇಮಕ ಮಾಡಿದೆ.
ತಾತ್ಕಾಲಿಕವಾಗಿ ಈ ವರ್ಷ ತರಗತಿಗಳನ್ನು ಪಾಲಿಟೆಕ್ನಿಕ್ ಕಟ್ಟಡದಲ್ಲಿ ಅಗತ್ಯಕ್ಕೆ ತಕ್ಕಂತೆ ವಿನ್ಯಾಸ ರೂಪಿಸಲು ₹1ಕೋಟಿಯನ್ನು ಉನ್ನತ ಶಿಕ್ಷಣ ಇಲಾಖೆ ಮಂಜೂರು ಮಾಡಿದೆ. ಟೆಂಡರ್ ಪ್ರಕ್ರಿಯೆ ನಡೆಯುತ್ತದೆ. ವಿದ್ಯಾರ್ಥಿನಿಯರ ವಿದ್ಯಾರ್ಥಿನಿಲಯಕ್ಕೂ ಅದೇ ಕಟ್ಟಡದ ಪಕ್ಕದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಬಾಲಕರ ವಿದ್ಯಾರ್ಥಿನಿಲಯಕ್ಕೆ ಖಾಸಗಿ ಕಟ್ಟಡ ಗುರುತಿಸಲಾಗುತ್ತದೆ. ಮೊದಲ ವರ್ಷವಾದರೂ ಸುಸಜ್ಜಿತ ವ್ಯವಸ್ಥೆ ಮಾಡಲಾಗುವುದು. ಸೋಮವಾರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಆಗಮಿಸಿ ಸಿದ್ಧತೆ ಪರಿಶೀಲನೆ ನಡೆಸಲಿದ್ದಾರೆ.
ಹೊಸ ಕಟ್ಟಡಕ್ಕೆ ಸ್ಥಳ ಮಂಜೂರು: ನಗರದ ಬೆಂಗಳೂರು ರಸ್ತೆಯಲ್ಲಿರುವ ಕನಂಪಲ್ಲಿ ಕೆರೆಯ ಪಕ್ಕದಲ್ಲಿ 9 ಎಕರೆ 38 ಗುಂಟೆ ಜಾಗ ಎಂಜಿನಿಯರಿಂಗ್ ಕಾಲೇಜಿನ ಕಟ್ಟಡಕ್ಕಾಗಿ ಮಂಜೂರಾಗಿದೆ. ಇನ್ನು ಒಂದು ಸುಮಾರು 3 ಎಕರೆ ಸಿಗಲಿದ್ದು ಒಟ್ಟು 12.5 ಎಕರೆ ಜಮೀನಿನಲ್ಲಿ ಹಂತ ಹಂತವಾಗಿ ಸುಮಾರು ₹100 ಕೋಟಿ ವೆಚ್ಚದಲ್ಲಿ ನೂತನ ಕಾಲೇಜಿನ ಸುಸಜ್ಜಿತ ಕ್ಯಾಂಪಸ್ ನಿರ್ಮಿಸಲಾಗುವುದು.
ವಿವಿಧ ವಿಭಾಗಗಳು, ಆಡಳಿತ ಕಚೇರಿ, ತರಗತಿ ಕೊಠಡಿ, ಆಡಿಟೋರಿಯಂ, ವಿದ್ಯಾರ್ಥಿನಿಯರ ಮತ್ತು ವಿದ್ಯಾರ್ಥಿಗಳ ಪ್ರತ್ಯೇಕ ವಿದ್ಯಾರ್ಥಿನಿಲಯ ಕಟ್ಟಡಗಳನ್ನು ಆಧುನಿಕ ಶೈಲಿಯಲ್ಲಿ ನಿರ್ಮಿಸಲು ನೀಲನಕ್ಷೆ ತಯಾರಿಸಲಾಗಿದೆ. ಸದ್ಯಕ್ಕೆ ರಸ್ತೆ ಮತ್ತಿತರ ಪೂರ್ವಭಾವಿ ಕಾಮಗಾರಿಗಳಿಗಾಗಿ ₹6 ಕೋಟಿ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ₹10 ಕೋಟಿಗಿಂತ ಹೆಚ್ಚಿನ ಮೊತ್ತದ ಕಾಮಗಾರಿಗೆ ಕ್ಯಾಬಿನೆಟ್ ಅನುಮೋದನೆ ಅಗತ್ಯವಿದೆ. ಎರಡು ತಿಂಗಳಿನಲ್ಲಿ ಕಾಮಗಾರಿ ಪ್ರಾರಂಭಕ್ಕೆ ಕ್ಯಾಬಿನೆಟ್ ಅನುಮೋದನೆ ಸಿಗಲಿದೆ ಎಂದು ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಚಿಂತಾಮಣಿಯ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಕಾಲೇಜಿನ ಆರಂಭಕ್ಕೆ ಸಿದ್ಧತೆ ನಡೆಸಲಾಗುತ್ತಿದೆಜಿ.ಶಿವಮೂರ್ತಿ ಪ್ರಭಾರಿ ಪ್ರಾಂಶುಪಾಲ
ಕಾಲೇಜು ಆರಂಭವಾಗುತ್ತಿರುವುದು ಸಂತಸ ತಂದಿದೆ. ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ದೊಡ್ಡ ತಾಲ್ಲೂಕಾಗಿರುವ ಚಿಂತಾಮಣಿಗೆ ಕಾಲೇಜು ಅಗತ್ಯವಿತ್ತುಅಮರನಾಥಗುಪ್ತ ನಿವೃತ್ತ ಉಪನ್ಯಾಸಕ ಸರ್ಕಾರಿ ಪಾಲಿಟೆಕ್ನಿಕ್
ನೇರವಾಗಿ ಪ್ರವೇಶ ದೊರೆಯದಿದ್ದರೂ ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಯ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು. ದಾಖಲಾದ ಮೇಲೂ ದೂರದ ಕಾಲೇಜುಗಳಲ್ಲಿ ಸೀಟು ದೊರೆತವರು ಪರಸ್ಪರ ವರ್ಗಾವಣೆಗೂ ಅವಕಾಶವಿರುತ್ತದೆಆರ್.ನಾರಾಯಣರೆಡ್ಡಿ ನಿವೃತ್ತ ಪ್ರೌಢಶಾಲಾ ಮುಖ್ಯೋಪಾಧ್ಯಾಯ
ಕನಂಪಲ್ಲಿ ಕೆರೆ ಬಳಿ ಬೆಂಗಳೂರು ರಸ್ತೆಗೆ ಹೊಂದಿಕೊಂಡಂತೆ 12.5 ಎಕರೆ ಜಾಗದಲ್ಲಿ ಹಂತ ಹಂತವಾಗಿ ಸುಮಾರು ₹100 ಕೋಟಿ ವೆಚ್ಚದಲ್ಲಿ ಕಾಲೇಜು ಕ್ಯಾಂಪಸ್ ನಿರ್ಮಾಣ ಮಾಡಲಾಗುವುದು. 2-3 ತಿಂಗಳುಗಳಲ್ಲಿ ಕಾಮಗಾರಿ ಆರಂಭವಾಗಲಿದೆಡಾ.ಎಂ.ಸಿ.ಸುಧಾಕರ್ ಉನ್ನತ ಶಿಕ್ಷಣ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.