ADVERTISEMENT

ಶಿಡ್ಲಘಟ್ಟ: ಹೆಚ್ಚಿದ ಸರ್ಕಾರಿ ಶಾಲೆ ಆಕರ್ಷಣೆ

ಆಮೂರ ತಿಮ್ಮನಹಳ್ಳಿ ಗ್ರಾಮದ ಎಲ್ಲಾ ಮಕ್ಕಳು ಸರ್ಕಾರಿ ಶಾಲೆಗೆ ದಾಖಲು

ಡಿ.ಜಿ.ಮಲ್ಲಿಕಾರ್ಜುನ
Published 31 ಆಗಸ್ಟ್ 2024, 7:21 IST
Last Updated 31 ಆಗಸ್ಟ್ 2024, 7:21 IST
<div class="paragraphs"><p>ಶಿಡ್ಲಘಟ್ಟದ ಆಮೂರ ತಿಮ್ಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನೋಟ</p></div>

ಶಿಡ್ಲಘಟ್ಟದ ಆಮೂರ ತಿಮ್ಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನೋಟ

   

ಶಿಡ್ಲಘಟ್ಟ: ವರ್ಷದಿಂದ ವರ್ಷಕ್ಕೆ ಶಾಲಾ ದಾಖಲಾತಿಯಲ್ಲಿ ಹೆಚ್ಚಳವಾಗುತ್ತಾ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚು ದಾಖಲಾತಿ ಹೊಂದಿದ ಶಾಲೆ ಎಂದು ತಾಲ್ಲೂಕಿನಲ್ಲಿ ಹೆಸರಾಗಿದೆ ಆಮೂರ ತಿಮ್ಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ.

34 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರನ್ನು ಹೊಂದಿರುವ ಈ ಶಾಲೆಯಲ್ಲಿ ಗ್ರಾಮದ ಎಲ್ಲಾ ಮಕ್ಕಳು ಸರ್ಕಾರಿ ಶಾಲೆಗೆ ದಾಖಲಾಗಿದ್ದಾರೆ. ಈ ಗ್ರಾಮದಿಂದ ಯಾವುದೇ ಮಗುವು ಸಹ ಖಾಸಗಿ ಶಾಲೆಗೆ ದಾಖಲಾಗಿಲ್ಲ ಎಂಬುದೊಂದು ವಿಶೇಷ.

ADVERTISEMENT

1-5 ರ ತನಕ ಓದಿದ ಮೇಲೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ 6ನೇ ತರಗತಿಗೆ ಈ ಶಾಲೆಯ ಮಕ್ಕಳು ವಸತಿ ಶಾಲೆಗಳಿಗೆ ಆಯ್ಕೆ ಯಾಗುತ್ತಿ ರುತ್ತಾರೆ. ಶಾಲೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಗ್ರಾಮದ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ಬಹಳ ಶಾಲೆಯೆಡೆಗಿನ ಪ್ರೀತಿ ಮತ್ತು ದೇಶಭಕ್ತಿ ಎರಡನ್ನೂ ಇಲ್ಲಿ ಮೆರೆಯಲಾಗುತ್ತದೆ.

ಶಾಲೆಗೆ ಹೆಚ್ಚು ಜಾಗವಿರದಿದ್ದರೂ ನೇರಳೆ, ಬೇವು, ಗಸಗಸೆ, ಸೀಬೆ, ಗುಲ್‌ಮೊಹರ್, ಕರಿಬೇವು, ನಿಂಬೆ, ಬಾಳೆ, ಸಂಪಿಗೆ, ನೆಲ್ಲಿ, ನುಗ್ಗೆ ಮುಂತಾದ ಮರಗಳನ್ನು ಬೆಳೆಯಲಾಗಿದೆ. ಮಕ್ಕಳಿಗಾಗುವಷ್ಟು ಬಾಳೆಹಣ್ಣು, ತರಕಾರಿ, ಸೊಪ್ಪುಗಳನ್ನು ಶಾಲೆಯ ಆವರಣದಲ್ಲಿಯೇ ಬೆಳೆಯುತ್ತಾರೆ.

‘ಶಾಲಾ ಕೊಠಡಿ ದುರಸ್ತಿ ಹಾಗೂ ಶೌಚಾಲಯಗಳ ಅಗತ್ಯವಿದೆ. ಪೀಠೋಪಕರಣ, ಕುಡಿಯುವ ನೀರಿನ ಫಿಲ್ಟರ್, ಮಕ್ಕಳಲ್ಲಿ ಕಂಪ್ಯೂಟರ್ ಜ್ಞಾನ ಮೂಡಿಸಲು ಕಂಪ್ಯೂಟರ್ ಅಗತ್ಯವಿದೆ. ಹಿರಿಯ ವಿದ್ಯಾರ್ಥಿಗಳು ಮತ್ತು ದಾನಿಗಳಿಂದ ಶಾಲಾ ಅಗತ್ಯತೆಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ’ ಎನ್ನುತ್ತಾರೆ ಶಿಕ್ಷಕ ವಿ.ಎನ್.ಗಜೇಂದ್ರ.

ಅಭಿವೃದ್ಧಿಗೆ ಕೈ ಜೋಡಿಸುವೆ

ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತದಿಂದಾಗಿ ಹಲವು ಶಾಲೆಗಳು ಮುಚ್ಚಿವೆ. ನಮ್ಮೂರ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕಂಡು ಸಂತಸವಾಯಿತು. ಶಾಲಾ ಅಭಿವೃದ್ಧಿಗೆ ಕೈ ಜೋಡಿಸಲು ನಿರ್ಧರಿಸಿದ್ದೇನೆ. ಶಾಲೆಯ ಅಗತ್ಯತೆಗಳನ್ನು ಹಂತ ಹಂತವಾಗಿ ಪೂರೈಸುವ ಗುರಿ ಹೊಂದಿದ್ದೇನೆ

ಚೌಡಪ್ಪ, ಹಳೆ ವಿದ್ಯಾರ್ಥಿ

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರೋತ್ಸಾಹ

ಶಾಲೆಯಲ್ಲಿ ಚೆನ್ನಾಗಿ ಕಲಿಸುತ್ತಾರೆ. ಪಾಠದ ಜೊತೆಗೆ ಆಟಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಸಿಗುತ್ತಿದೆ. ನವೋದಯ ಮತ್ತು ಮೊರಾರ್ಜಿ ಶಾಲೆಗಳ ಪರೀಕ್ಷೆಗೆ ವಿಶೇಷ ಆಸಕ್ತಿ ವಹಿಸಿ ತರಬೇತಿ ನೀಡುತ್ತಾರೆ.

ಜಾನವಿ.ಎ.ಆರ್, 5ನೇ ತರಗತಿ ವಿದ್ಯಾರ್ಥಿನಿ

22 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೋಷಕರ ಮತ್ತು ಗ್ರಾಮಸ್ಥರ ಸಹಕಾರದಿಂದ ಉತ್ತಮ ದಾಖಲಾತಿ ಇದೆ. ಯಾವ ಮಕ್ಕಳೂ ಖಾಸಗಿ ಶಾಲೆಗೆ ಹೋಗುವುದಿಲ್ಲ
ನಾಗರತ್ನಮ್ಮ.ಎನ್, ಮುಖ್ಯ ಶಿಕ್ಷಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.