ADVERTISEMENT

ಚಿಕ್ಕಬಳ್ಳಾಪುರ | ಪಹಣಿಗಳಲ್ಲಿ ವಕ್ಫ್ ಹೆಸರು ನಮೂದು; ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 15:41 IST
Last Updated 19 ನವೆಂಬರ್ 2024, 15:41 IST
ಚಿಕ್ಕಬಳ್ಳಾಪುರದಲ್ಲಿ ವಕ್ಫ್ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿತು
ಚಿಕ್ಕಬಳ್ಳಾಪುರದಲ್ಲಿ ವಕ್ಫ್ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿತು   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಾಲೆ, ಮಂದಿರ ಮತ್ತು ರೈತರ ಜಮೀನುಗಳ ಪಹಣಿಗಳಲ್ಲಿ ವಕ್ಫ್ ಹೆಸರು ನಮೂದಾಗಿದ್ದನ್ನು ವಿರೋಧಿಸಿ ಬಿಜೆಪಿಯು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಯಿತು.

ಚಿಕ್ಕಬಳ್ಳಾಪುರದ ಕಂದವಾರ ಶಾಲೆಯ 20 ಗುಂಟೆ ಜಮೀನಿನ ಪಹಣಿಯಲ್ಲಿ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದ ಪಹಣಿಯಲ್ಲಿಯೂ ವಕ್ಫ್ ಹೆಸರು ನಮೂದಾಗಿರುವುದು ಮತ್ತು ಚಿಂತಾಮಣಿಯ ತಿಮ್ಮಸಂದ್ರದ ಜಮೀನಿನ ವಿಚಾರದಲ್ಲಿ ಎದ್ದಿರುವ ತಗಾದೆ ವಿರೋಧಿಸಿ ಬಿಜೆಪಿ  ಪ್ರತಿಭಟನೆ ಹಮ್ಮಿಕೊಂಡಿತ್ತು.

ADVERTISEMENT

ಮೊದಲಿಗೆ ಮುದ್ದೇನಹಳ್ಳಿಯ ಸರ್‌.ಎಂ.ವಿಶ್ವೇಶ್ವರಯ್ಯ ಅವರ ಸಮಾಧಿಗೆ ಬಿಜೆಪಿ ಮುಖಂಡರು ಪೂಜೆ ಸಲ್ಲಿಸಿದರು. ನಂತರ ಕಂದವಾರ ಶಾಲೆಗೆ ಭೇಟಿ ನೀಡಿದರು. ಈ ವೇಳೆ ಅಧಿಕಾರಿಗಳಿಂದ ಮಾಹಿತಿ ಪಡೆದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಶಾಲೆ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಶಾಲೆ ಆವರಣದಲ್ಲಿನ ಗೋರಿಯ ಸ್ಥಳವನ್ನೂ ಪರಿಶೀಲಿಸಿದರು. 

ನಂತರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದ ಮುಂಭಾಗದಿಂದ ಶಿಡ್ಲಘಟ್ಟ ವೃತ್ತದವರೆಗೆ ಪ್ರತಿಭಟನಾ ರ‍್ಯಾಲಿ ನಡೆಯಿತು. ‌‘ನಮ್ಮ ಭೂಮಿ ನಮ್ಮ ಹಕ್ಕು. ವಕ್ಫ್ ಬೋರ್ಡ್ ಅವರ ಅಪ್ಪನದ್ದಲ್ಲ’ ಎಂಬ ಘೋಷಣೆಗಳು ಮೊಳಗಿದವು.  

ಆರ್.ಅಶೋಕ ಮಾತನಾಡಿ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಆಡಳಿತದಲ್ಲಿ ಕರ್ನಾಟಕವು ಪಾಕಿಸ್ತಾನವಾಗುವತ್ತ ಹೆಜ್ಜೆ ಇಟ್ಟಿದೆ. ಮಠ, ಮಂದಿರ, ರೈತರ ಜಮೀನುಗಳ ಪಹಣಿಗಳಲ್ಲಿ ವಕ್ಫ್ ಹೆಸರು ನಮೂದಾಗಲು ಸಚಿವ ಜಮೀರ್ ಅಹಮದ್ ಅವರ ದುಷ್ಟಕೂಟ ಕಾರಣ. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಶೀರ್ವಾದವಿದೆ ಎಂದು ಆರೋಪಿಸಿದರು. 

‘ನಮ್ಮ ಮನೆಯಲ್ಲಿ ನಾವೇ ಪರಕೀಯರ ರೀತಿಯಲ್ಲಿ ಆಗಿದ್ದೇವೆ. ಇದಕ್ಕೆ ಕಾರಣ ಸಿದ್ದರಾಮಯ್ಯ. ಡಿ.ಕೆ.ಶಿವಕುಮಾರ್ ಕುಕ್ಕರ್ ಬಾಂಬ್ ಇಟ್ಟವನನ್ನು ನಮ್ಮ ಬ್ರದರ್ ಎಂದರು. ಈಗ ಇದೇ ಜೋಡಿ ಕರ್ನಾಟಕವನ್ನು ಪಾಕಿಸ್ತಾನ ಮಾಡಲು ಹೊರಟಿದೆ ಎಂದು ಆರೋಪಿಸಿದರು.

‘ಬೌದ್ಧರು, ಜೈನರು, ಕ್ರೈಸ್ತರು, ಹಿಂದೂಗಳ ಧಾರ್ಮಿಕ ಸಮಿತಿಗಳು, ಮಂಡಳಿಗಳಿಗೆ ನ್ಯಾಯಾಂಗದ ಅಧಿಕಾರವಿಲ್ಲ. ವಕ್ಫ್‌ಗೆ ಮಾತ್ರ ಈ ಅಧಿಕಾರ ನೀಡಲಾಗಿದೆ. ವಕ್ಫ್ ಬೋರ್ಡ್ ವಜಾ ಆಗಬೇಕು. ರಾಜ್ಯದಲ್ಲಿ 21 ಸಾವಿರ ಆಸ್ತಿಗಳು ನಮ್ಮದು ಎಂದು ವಕ್ಫ್ ಬೋರ್ಡ್‌ನವರು ಪ್ರತಿಪಾದಿಸುತ್ತಿದ್ದಾರೆ. ಎಲ್ಲರೂ ತಮ್ಮ ಪಹಣಿ, ಮ್ಯುಟೇಷನ್‌ಗಳನ್ನು ಪರಿಶೀಲಿಸಿಕೊಳ್ಳಬೇಕು’ ಎಂದು ಹೇಳಿದರು.

ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಎಲ್ಲ ಜಮೀನುಗಳನ್ನು ಅರಣ್ಯ ಜಮೀನು ಎನ್ನುತ್ತಾರೆ. ಈ ಹಿಂದೆ ಅರಣ್ಯ ಇಲಾಖೆಯವರೇ ಇವು ಡೀಮ್ಡ್ ಅರಣ್ಯಗಳು ಎಂದು ಪಟ್ಟಿ ಮಾಡಿತ್ತು. ನಾನು ಕಂದಾಯ ಸಚಿವನಾಗಿದ್ದ ವೇಳೆ ರೈತರು ಉಳುಮೆ ಮಾಡುತ್ತಿರುವ ಜಮೀನುಗಳನ್ನು ಈ ಪಟ್ಟಿಯಿಂದ ಕೈ ಬಿಡಬೇಕು ಎಂದು  ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದೆ ಎಂದು ಹೇಳಿದರು.

‘ಬಿಜೆಪಿಯವರು ಕೋಮು ಗಲಭೆ ಸೃಷ್ಟಿಸಲು ವಿವಾದ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ದೂರುತ್ತಿದ್ದಾರೆ. ಆದರೆ ಇದು ಬಿಜೆಪಿ ವಿಷಯವಲ್ಲ. ಹಿಂದೂಗಳ ವಿಷಯ. ವಿರೋಧ ಪಕ್ಷವಾಗಿ ನಾವು ಹೋರಾಟ ಮಾಡುತ್ತಿದ್ದೇವೆ’ ಎಂದು ಹೇಳಿದರು. 

ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ಲ್ಯಾಂಡ್ ಜಿಹಾದ್ ಘೋಷಿಸಿದೆ. ರೈತರ ಜಮೀನು ಉಳಿಸುವ ನಿಟ್ಟಿನಲ್ಲಿ ಈ ಹೋರಾಟ ನಡೆಸುತ್ತಿದ್ದೇವೆ. ವಿಭಜಿಸಿ ಆಳುವ ಬ್ರಿಟಿಷರ ನೀತಿಯನ್ನು ಕಾಂಗ್ರೆಸ್ ಸರ್ಕಾರ ‌ಮುಂದುರಿಸಿದೆ ಎಂದು ಹೇಳಿದರು.

ರೈತರು ತಲತಲಾಂತರದಿಂದ ಭೂಮಿ ನಂಬಿದ್ದಾರೆ. ಜಮೀನುಗಳಲ್ಲಿ ಅನುಭವದಲ್ಲಿ ಇದ್ದಾರೆ. ಆದರೆ ಪಹಣಿಗಳಲ್ಲಿ ವಕ್ಫ್ ಎಂದು ನಮೂದಾಗಿದೆ. ‌‌ಬಹುಸಂಖ್ಯಾತ ಹಿಂದೂಗಳ ಮೇಲೆ ವಕ್ಫ್ ಗದಾಪ್ರಹಾರ ಮಾಡುತ್ತಿದೆ ಎಂದರು.

ಕಾಂಗ್ರೆಸ್ ಆಡಳಿತದಲ್ಲಿ ಹಿಂದೂಗಳನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ನೋಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಯಾವ ರೀತಿಯಲ್ಲಿ ಕಾನೂನು ಬಾಹಿರವಾಗಿ ವಕ್ಫ್‌ಗೆ ಅಧಿಕಾರ ನೀಡಲಿದೆಯೊ ಅದನ್ನು ವಾಪಸ್ ಪಡೆದು ಕಾನೂನು ತಿದ್ದುಪಡಿ ತಂದೇ ತರುತ್ತೇವೆ ಎಂದು ಹೇಳಿದರು.

ಮಾಜಿ ಸಂಸದ ಎಸ್.ಮುನಿಸ್ವಾಮಿ, ನಗರಸಭೆ ಅಧ್ಯಕ್ಷ ಎ.ಗಜೇಂದ್ರ, ಕೆ.ವಿ.ನಾಗರಾಜ್, ಮರಳುಕುಂಟೆ ಕೃಷ್ಣಮೂರ್ತಿ, ಸೀಕಲ್ ರಾಮಚಂದ್ರಗೌಡ, ಕೇಶವರೆಡ್ಡಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

‘ಬಾವುಟ ತೆರವು; 15 ದಿನ ಗಡುವು’

‘ನಮ್ಮ ಹೋರಾಟದ ಫಲವಾಗಿ ಚಿಕ್ಕಬಳ್ಳಾಪುರದ ಕಂದವಾರ ಶಾಲೆ ಪಹಣಿಯಲ್ಲಿ ವಕ್ಫ್ ಹೆಸರು ತೆಗೆಯಲಾಗಿದೆ. ಆದರೆ ಶಾಲೆ ಆವರಣದಲ್ಲಿ ಗೋರಿ ಇದೆ. ಇದು ಹೇಗೆ ಸಾಧ್ಯ? ಶಾಲಾ ಕಾಂಪೌಂಡ್ ಒಳಗೆ ಹೇಗೆ ಮಸೀದಿ ಬಂದಿತು. ಇಲ್ಲಿನ ಗೋರಿ ಮತ್ತು ಅದರ ಮೇಲಿನ ಹಸಿರು ಹೊದಿಕೆಗಳನ್ನು 15 ದಿನಗಳ ಒಳಗೆ ತೆರವು ಮಾಡಬೇಕು’ ಎಂದು ಆರ್.ಅಶೋಕ ಆಗ್ರಹಿಸಿದರು. ‘ತೆರವು ಮಾಡದಿದ್ದರೆ ನಾವೇ ತೆರವುಗೊಳಿಸಲು ಕ್ರಮವಹಿಸುತ್ತೇವೆ’ ಎಂದರು.

‘ಶಾಸಕರೂ ದಂಗೆ ಎದಿದ್ದಾರೆ’

16 ತಿಂಗಳಾದರೂ ಅಭಿವೃದ್ಧಿಗೆ ಹಣವಿಲ್ಲ. ಶಾಸಕರು ದಂಗೆ ಎದಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.  ರಾಜ್ಯದಲ್ಲಿ 12 ಲಕ್ಷ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಮಾಡಲು ಸರ್ಕಾರ ಮುಂದಾಗಿದೆ. ಬಡವರ ಕಾರ್ಡ್‌ಗಳೂ ರದ್ದಾಗುತ್ತಿವೆ. ಪಡಿತರ ಚೀಟಿ ರದ್ದು ಮಾಡುವುದರ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದು ಹೇಳಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.