ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಜನರ ಬಹು ನಿರೀಕ್ಷೆಯ ಎತ್ತಿನಹೊಳೆ ನೀರಾವರಿ ಯೋಜನೆಗೆ ಇಲ್ಲಿಯವರೆಗೆ ಒಟ್ಟು ₹ 16,076,71 ಕೋಟಿ ವೆಚ್ಚವಾಗಿದೆ. ಹೀಗೆ ಒಂದು ದಶಕದ ಅವಧಿಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ವ್ಯಯವಾಗಿದ್ದರೂ ಯೋಜನೆಯಿಂದ ಜಿಲ್ಲೆಗೆ ಹನಿ ನೀರು ದೊರೆತಿಲ್ಲ!
ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನಲ್ಲಿ ಎತ್ತಿನಹೊಳೆ ಯೋಜನೆಯ ಕಾಮಗಾರಿಗಳು ನಡೆಯುತ್ತಿವೆ. ಗೌರಿಬಿದನೂರು ಮೂಲಕವೇ ಜಿಲ್ಲೆಗೆ ಎತ್ತಿನಹೊಳೆ ನೀರು ಪ್ರವೇಶಿಸಬೇಕು.
ಒಂದು ದಶಕದ ಅವಧಿಯಲ್ಲಿ ಎತ್ತಿನಹೊಳೆ ನೀರಾವರಿ ಯೋಜನೆಯ ವೆಚ್ಚ ಮೂರು ಪಟ್ಟು ಹೆಚ್ಚಳ ಕಂಡಿದೆ. 2012ರಲ್ಲಿ ₹ 8,300 ಕೋಟಿ ಯೋಜನೆಯ ಅಂದಾಜು ವೆಚ್ಚವಾಗಿತ್ತು. ಅದು 2014ಕ್ಕೆ ₹ 12,900 ಕೋಟಿ ಮುಟ್ಟಿತು. 2023ರಲ್ಲಿ ₹ 23,251 ಕೋಟಿ ತಲುಪಿದೆ. ಹೀಗೆ ವೆಚ್ಚ ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗಿದೆ. ವೆಚ್ಚ ಹೆಚ್ಚಳದ ಸಮಯದಲ್ಲಿ ಪರ ವಿರೋಧದ ಚರ್ಚೆಗಳು ಗರಿಗೆದರಿವೆ. ನೀರಾವರಿ ಹೋರಾಟಗಾರರು ತೀಕ್ಷ್ಮವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಎತ್ತಿನಹೊಳೆ ಯೋಜನೆ ಪ್ರಾರಂಭವಾದ ದಿನದಿಂದ ಇಲ್ಲಿಯವರೆಗೆ ಒಟ್ಟು ₹ 16,076,71 ಕೋಟಿ ವೆಚ್ಚವಾಗಿದೆ. ಈ ಹಣದಲ್ಲಿ ನಿರ್ಮಾಣ ಕಾಮಗಾರಿಗಳಿಗಾಗಿಯೇ ಹೆಚ್ಚು ವ್ಯಯಿಸಲಾಗಿದೆ.
ಭೂಸ್ವಾಧಿನಕ್ಕೆ ಎಂದು ₹ 1,688.26 ಕೋಟಿ, ಚಾಲ್ತಿ ಹಾಗೂ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ₹ 13,663.18 ಕೋಟಿ, ಯೋಜನಾ ಪ್ರದೇಶ ವ್ಯಾಪ್ತಿಯಲ್ಲಿನ ಬಾಧಿತ ಪ್ರದೇಶಗಳ ರಸ್ತೆಗಳ ಸುಧಾರಣೆ, ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಕೆಪಿಟಿಸಿಎಲ್, ಚೆಸ್ಕಾಂ, ಅರಣ್ಯ ಇತ್ಯಾದಿ ಇಲಾಖೆಗಳಿಗೆ ಭರಿಸಿರುವ ಠೇವಣಿ ಮೊತ್ತ ₹ 588.66 ಕೋಟಿ ಮತ್ತು ವೇತನ ಹಾಗೂ ಇತರೆ ಖರ್ಚುಗಳಿಗೆ ₹ 141.61 ಕೋಟಿ ಭರಿಸಲಾಗಿದೆ ಎಂದು ಸರ್ಕಾರವು ಕೋಲಾರ ಶಾಸಕ ಕೊತ್ತೂರು ಜಿ.ಮಂಜುನಾಥ್ ಅವರ ಪ್ರಶ್ನೆಗೆ ಸಮಗ್ರವಾಗಿ ಉತ್ತರಿಸಿದೆ.
2022ರ ಜನವರಿ ಅಂತ್ಯದವರೆಗೆ ಎತ್ತಿನಹೊಳೆ ಯೋಜನೆಗೆ ₹ 9268,76 ಕೋಟಿ ವೆಚ್ಚ ಮಾಡಲಾಗಿತ್ತು. ಅಲ್ಲಿಂದ ನಂತರ ಮೂರು ವರ್ಷಗಳಲ್ಲಿ ಒಟ್ಟು ವೆಚ್ಚ ₹ 16 ಸಾವಿರ ಕೋಟಿ ತಲುಪಿದೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆ ಶುದ್ಧ ಕುಡಿಯುವ ನೀರು ನೀಡುವ ಮತ್ತು ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದಲೇ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಜಿಲ್ಲೆಯಲ್ಲಿ ಕಾಮಗಾರಿಗೆ ಭೂಸ್ವಾಧೀನವು ಇನ್ನೂ ವೇಗ ಪಡೆದಿಲ್ಲ. ಈ ಕಾರಣದಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ಯಾವಾಗ ಹರಿಯುತ್ತದೆ ಎನ್ನುವ ಕುತೂಹಲ ನಾಗರಿಕರಲ್ಲಿ ಇದೆ. ಭೂಸ್ವಾಧೀನ ಪ್ರಕ್ರಿಯೆಗಳು ಜಿಲ್ಲೆಯಲ್ಲಿ ತೆವಳುತ್ತಲೇ ಸಾಗಿವೆ.
ಫೀಡರ್ ಪೈಪ್‌ಲೈನ್ ಕಾಮಗಾರಿ ಸ್ಥಗಿತ: ಎತ್ತಿನಹೊಳೆ ಯೋಜನೆಯ ಮೂಲ ಉದ್ದೇಶ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವುದಾಗಿದೆ. ಈ ನಿಟ್ಟಿನಲ್ಲಿ ಲಕ್ಕೇನಹಳ್ಳಿ ಸಮತೋಲನಾ ಜಲಾಶಯದ ನಂತರದ ಗುರುತ್ವ ಪೈಪ್‌ಲೈನ್ ಹಾಗೂ ಫೀಡರ್ ಪೈಪ್‌ಲೈನ್ ಕಾಮಗಾರಿಗಳ ಟೆಂಡರ್‌ಗಳನ್ನು 2023ರ ಮಾ.23ರಂದು ಜರುಗಿದ ವಿಶ್ವೇಶ್ವರಯ್ಯ ಜಲ ನಿಗಮದ ನಿರ್ದೇಶನದ ಮಂಡಳಿಯ 28ನೇ ಸಭೆಯಲ್ಲಿ ಅನುಮೋದಿಸಲಾಗಿತ್ತು. ₹ 2874.41 ಕೋಟಿ ಮೊತ್ತಕ್ಕೆ ಗುತ್ತಿಗೆ ಸಹ ವಹಿಸಲಾಗಿತ್ತು.
ಈ ಕಾಮಗಾರಿಗಳಿಗೆ ಕೆಟಿಪಿಸಿ ನಿಯಮಗಳ ಅನ್ವಯ ಟೆಂಡರ್‌ಗಳನ್ನು ಆಹ್ವಾನಿಸಿ ತಾಂತ್ರಿಕ ಬಿಡ್ ಹಾಗೂ ಆರ್ಥಿಕ ಬಿಡ್‌ಗಳಿಗೆ ನಿಗಮದ ಟೆಂಡ್ ಪರಿಶೀಲನಾ ಸಮಿತಿ, ತಾಂತ್ರಿಕ ಉಪಸಮಿತಿಗಳ ಶಿಫಾರಸ್ಸಿನೊಂದಿಗೆ ನಿರ್ದೇಶಕರ ಮಂಡಳಿಯ ಅನುಮೋದನೆ ಪಡೆಯಲಾಗಿತ್ತು. 2023ರ ಮೇ 15ರಂದು ಕಾಮಗಾರಿಯನ್ನು ಗುತ್ತಿಗೆದಾರರಿಗೆ ವಹಿಸಲಾಗಿತ್ತು.
ಆದರೆ 2023ರ ಡಿ.26ರಂದು ಜರುಗಿದ ನಿಗಮದ ನಿರ್ದೇಶಕದ ಮಂಡಳಿಒಯ 30ನೇ ಸಭೆಯಲ್ಲಿ ಸದರಿ ಕಾಮಗಾರಿಗಳನ್ನು ಸದಸ್ಯಕ್ಕೆ ಸ್ಥಗಿತಗಳಿಸಿ ಯೋಜನೆಯ ಏತ ಕಾಮಗಾರಿಗಳು ಮತ್ತು ಮುಖ್ಉ ಗುರುತ್ವ ಕಾಲುವೆಯ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಮೊದಲು ಪೂರ್ಣಗೊಳಿಸಲು ನಿರ್ರಿಸಲಾಗಿದೆ. ಗುರುತ್ವ ಕಾಲುವೆಯಲ್ಲಿ ಕಿ.ಮೀ 261.69ರವರೆಗೆ ನೀರು ಹರಿಸಿದ ನಂತರವೇ ಸದರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಣಯಿಸಿಲಾದ ಕಾರಣ ಪ್ತಸ್ತುತ ಈ ಕಾಮಗಾರಿಗಳನ್ನು ಇಲ್ಲಿಯವರೆಗೂ ಪ್ರಾರಂಭಿಸಿಲ್ಲ ಎಂದು ಸರ್ಕಾರ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.