ADVERTISEMENT

ಚಿಕ್ಕಬಳ್ಳಾಪುರ: ‘ಕೈ’ ಹಿಡಿದ ಮಾಜಿ ಶಾಸಕ ಬಚ್ಚೇಗೌಡ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2024, 20:14 IST
Last Updated 31 ಮಾರ್ಚ್ 2024, 20:14 IST
   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಹಾಗೂ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಭಾನುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.

ಅವರ ಜೊತೆಗೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುನೇಗೌಡ, ಜಿ.ಪಂ ಮಾಜಿ ಸದಸ್ಯ ಕೆ.ಸಿ.ರಾಜಾಕಾಂತ್, ಅಂಗರೇಖನಹಳ್ಳಿ ರವಿಕುಮಾರ್ ಮತ್ತಿತರರು ಸಹ ಕಾಂಗ್ರೆಸ್ ಸೇರ್ಪಡೆಯಾದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಸಚಿವ ಬೈರತಿ ಸುರೇಶ್, ಶಾಸಕ ಪ್ರದೀಪ್ ಈಶ್ವರ್, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ, ಎಂ.ಆರ್.ಸೀತಾರಾಮ್ ಈ ವೇಳೆ ಹಾಜರಿದ್ದರು.

2008ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ನಿಂದ ಬಚ್ಚೇಗೌಡ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. 2013, 2018 ಮತ್ತು 2023ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣಕ್ಕೆ ಇಳಿದು ಸೋಲು ಅನುಭವಿಸಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ 19 ಸಾವಿರ ಮತಗಳನ್ನು ಪಡೆದಿದ್ದರು.

ADVERTISEMENT

ಬಚ್ಚೇಗೌಡ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಬಿ.ಪಿಳ್ಳಪ್ಪ ಅವರ ಪುತ್ರ. ಪಿಳ್ಳಪ್ಪ ಅವರು ದೇವೇಗೌಡರ ಆಪ್ತರು. ದಶಕಗಳಿಂದಲೂ‌ ಈ ಕುಟುಂಬ ದೇವೇಗೌಡರ ಕುಟುಂಬಕ್ಕೆ ಆಪ್ತವಾಗಿತ್ತು. ಜನತಾದಳದಲ್ಲಿಯೇ ರಾಜಕೀಯ ನೆಲೆ ಕಂಡುಕೊಂಡಿತ್ತು. ಬಚ್ಚೇಗೌಡ ಅವರು ಈಗ ಕಾಂಗ್ರೆಸ್ ಸೇರುವ ಮೂಲಕ ಹಲವು ದಶಕಗಳ ಜೆಡಿಎಸ್ ಸಖ್ಯವನ್ನು ಕಡಿದುಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ಬಚ್ಚೇಗೌಡ ಅವರ ಎದುರಾಳಿ ಆಗಿದ್ದಾರೆ. ಮೂರು ಚುನಾವಣೆಗಳಲ್ಲಿ ಈ ಇಬ್ಬರು ಮುಖಾಮುಖಿ ಆಗಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸುಧಾಕರ್ ಸ್ಪರ್ಧೆ ಮಾಡಿದರೆ ತಾವು ಜೆಡಿಎಸ್ ತೊರೆಯುವುದಾಗಿ ಹೇಳುತ್ತಿದ್ದರು. ಸುಧಾಕರ್ ಅಭ್ಯರ್ಥಿಯಾಗುವುದನ್ನು ವಿರೋಧಿಸುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.