ADVERTISEMENT

ಅನಗತ್ಯ ರಸಗೊಬ್ಬರ ಬಳಕೆ ಸರಿಯಲ್ಲ

ಮಣ್ಣಿನ ಫಲವತ್ತತೆಯತ್ತ ಗಮನಹರಿಸಿ

ಡಿ.ಜಿ.ಮಲ್ಲಿಕಾರ್ಜುನ
Published 27 ಸೆಪ್ಟೆಂಬರ್ 2019, 15:54 IST
Last Updated 27 ಸೆಪ್ಟೆಂಬರ್ 2019, 15:54 IST
ಶಿಡ್ಲಘಟ್ಟದ ಹಾಪ್‍ಕಾಮ್ಸ್ ರಸಗೊಬ್ಬರ ಅಂಗಡಿಯ ಮುಂಭಾಗ ಯೂರಿಯಾ ಪಡೆಯಲು ಗುಂಪುಗೂಡಿರುವ ರೈತರು
ಶಿಡ್ಲಘಟ್ಟದ ಹಾಪ್‍ಕಾಮ್ಸ್ ರಸಗೊಬ್ಬರ ಅಂಗಡಿಯ ಮುಂಭಾಗ ಯೂರಿಯಾ ಪಡೆಯಲು ಗುಂಪುಗೂಡಿರುವ ರೈತರು   

ಶಿಡ್ಲಘಟ್ಟ: ತಾಲ್ಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ಯೂರಿಯಾ ಗೊಬ್ಬರಕ್ಕಾಗಿ ರೈತರು ಮುಗಿಬಿದ್ದಿದ್ದಾರೆ.

ಕೃಷಿ ಇಲಾಖೆಯ ಅಧಿಕಾರಿಗಳ ಅಂಕಿ-ಅಂಶಗಳ ಪ್ರಕಾರ ಸುಮಾರು 30 ಟನ್ ಯೂರಿಯಾ ದಾಸ್ತಾನಿದೆ. ಆದರೂ ಯೂರಿಯಾ ಪಡೆಯಲು ನಗರದ ಹಾಪ್‍ಕಾಮ್ಸ್ ರಸಗೊಬ್ಬರದ ಅಂಗಡಿಯತ್ತ ನೂರಾರು ರೈತರು ಬೆಳಿಗ್ಗೆಯಿಂದಲೇ ಸಾಲಾಗಿ ನಿಂತಿದ್ದಾರೆ.

ಕೃಷಿ ಇಲಾಖೆಯ ಅಧಿಕಾರಿಗಳ ಅಂಕಿ ಅಂಶಗಳ ಪ್ರಕಾರ ಸೆಪ್ಟೆಂಬರ್ ಒಂದರಿಂದ 24 ವರೆಗೆ ವಾಡಿಕೆ ಮಳೆ 477 ಮಿ.ಮೀಟರ್ ಆಗಬೇಕಿತ್ತು. ಆದರೆ, 460 ಮಿ.ಮೀಟರ್ ಮಳೆಯಾಗಿದೆ. ಸರಾಸರಿ ವಾಡಿಕೆಗಿಂತಲೂ ಮಳೆ ಕಡಿಮೆಯಾದರೂ, ಕಳೆದೆರಡು ದಿನಗಳಿಂದ ಸುರಿದ ಭಾರಿ ಮಳೆಯಿಂದ ಬಿತ್ತನೆ ಕಾರ್ಯ ಚುರುಕುಗೊಂಡಿದೆ.

ADVERTISEMENT

ತಾಲ್ಲೂಕಿನಾದ್ಯಂತ 2019-20ನೇ ಸಾಲಿನಲ್ಲಿ ಕಸಬಾ, ಸಾದಲಿ, ಜಂಗಮಕೋಟೆ ಮತ್ತು ಬಶೆಟ್ಟಹಳ್ಳಿ ಹೋಬಳಿಯಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತ, ರಾಗಿ, ಮುಸುಕಿನಜೋಳ, ಮೇವಿನ ಜೋಳ, ತೃಣಧಾನ್ಯ, ತೊಗರಿ, ಹುರುಳಿ, ಅವರೆ, ಅಲಸಂದೆ, ನೆಲಗಡಲೆ, ಸೂರ್ಯಕಾಂತಿ, ಸಾಸಿವೆ, ಎಳ್ಳು, ಹರಳು, ಕಬ್ಬು, ಹತ್ತಿ ಸಹಿತ 17,268 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯೊಂದಿಗೆ ಇದುವರೆಗೆ 14,067 (ಶೇ 82) ಸಾಧನೆ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ರೈತರ ರಸಗೊಬ್ಬರ ಬಳಕೆ ಅಸಮತೋಲನದಿಂದ ಕೂಡಿದೆ. ಅವರು ಯೂರಿಯಾ ಅತಿ ಬಳಕೆ ಮಾಡುತ್ತಿದ್ದಾರೆ. ಇದರಿಂದ ಅಂತರ್ಜಲ ಕಲುಷಿತಗೊಳ್ಳುತ್ತಿದೆ. ರೈತರು ಜೈವಿಕ ಹಾಗೂ ಸಾವಯವ ಗೊಬ್ಬರಗಳನ್ನು ಸಮತೋಲನದಿಂದ ಬಳಸಬೇಕು. ಮೊದಲು ಮಣ್ಣು ಪರೀಕ್ಷೆ ಮಾಡಿಸಿ, ಮಣ್ಣಿನ ಆರೋಗ್ಯದ ಬಗ್ಗೆ ತಿಳಿಯಿರಿ. ಮಣ್ಣಿನ ಆರೋಗ್ಯ ಕಾಪಾಡದಿದ್ದಲ್ಲಿ ಆಹಾರದ ಬೆಳೆಯ ಗುಣಮಟ್ಟ ಕಡಿಮೆಯಾಗಲಿದೆ’ ಎಂದು ಕೃಷಿ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ.

ರಸಗೊಬ್ಬರ ಬಳಕೆ: ಭೂಮಿ ಆರೋಗ್ಯ ಹಾಳು
ಇತ್ತೀಚಿನ ದಿನಗಳಲ್ಲಿ ರಸಗೊಬ್ಬರವನ್ನು ಯಥೇಚ್ಛವಾಗಿ ಬಳಸುವುದರಿಂದ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿದೆ. ಕಡಿಮೆ ಬೆಲೆಯೆಂದು ಯೂರಿಯಾ ರಸಗೊಬ್ಬರವನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಇದರ ಬದಲಾಗಿ ಸಾವಯವ ಗೊಬ್ಬರ ಬಳಸಬೇಕಿದೆ. ಅಗತ್ಯಕ್ಕಿಂತ ಹೆಚ್ಚು ಗೊಬ್ಬರ ಕೊಟ್ಟರೆ ಗಿಡದ ಗಾತ್ರ ವಿನಾ ಕಾರಣ ದೊಡ್ಡದಾಗುತ್ತದೆ. ಆದರೆ ಇಳುವರಿ ಹೆಚ್ಚಾಗುವುದಿಲ್ಲ. ಗಿಡ ಹಚ್ಚ ಹಸುರಾಗಬೇಕೆಂದು ಎಕರೆಗೆ ಒಂದು ಮೂಟೆಯಷ್ಟು ಯೂರಿಯಾವನ್ನು ರೈತರು ಸುರಿಯುತ್ತಿದ್ದಾರೆ. ಇದು ಕೃಷಿ ಇಲಾಖೆ ಶಿಫಾರಸಿಗಿಂತ ಹಲವು ಪಟ್ಟು ಹೆಚ್ಚು. ರಾಸಾಯನಿಕ ಗೊಬ್ಬರದ ಅತಿ ಬಳಕೆಯಿಂದ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ನ ಅನುಪಾತ ಭೂಮಿಯಲ್ಲಿ ವಿಪರೀತ ಪ್ರಮಾಣದಲ್ಲಿ ಹೆಚ್ಚಿ, ಲಘು ಪೋಷಕಾಂಶಗಳ ಕೊರತೆ ಕಾಣಿಸಿಕೊಳ್ಳುತ್ತದೆ. ಭೂಮಿಯ ಆರೋಗ್ಯ ಹಾಳಾಗುತ್ತದೆ.
-ಜನಾರ್ದನಮೂರ್ತಿ, ನಿವೃತ್ತ ರೇಷ್ಮೆ ಇಲಾಖೆ ಅಧಿಕಾರಿ

**
ಭೂ ಸಿದ್ಧತೆ ನಂತರ ರಸಗೊಬ್ಬರ
ಬಿತ್ತನೆ ಸಂದರ್ಭದಲ್ಲಿ ಬೆಳೆಯ ಆಯಸ್ಸಿನಲ್ಲಿ ನೀಡಬೇಕಾದಷ್ಟು ಗೊಬ್ಬರವನ್ನುಒಮ್ಮೆಲೆ ಚೆಲ್ಲಿ ಬರುವುದು ತಪ್ಪು ಅಭ್ಯಾಸ. ಭೂ ಸಿದ್ಧತೆಯ ನಂತರ ಬಿತ್ತನೆಗೆ ಮೊದಲು ರಸಗೊಬ್ಬರ ಕೊಡಬೇಕು. ಬಿತ್ತನೆ ರಾಗಿಯೊಂದಿಗೆ ರಸಗೊಬ್ಬರವನ್ನು ಎಂದಿಗೂ ಬೆರೆಸಬಾರದು. ಒಂದು ಕೆ.ಜಿ ಬಿತ್ತನೆ ರಾಗಿಗೆ ಐದು ಕೆ.ಜಿ ಮಣ್ಣು ಬೆರೆಸಿ ಹಾಕಬೇಕು. ಬಿತ್ತನೆ ಮಾಡುವ ದಿನ, ಬಿತ್ತನೆ ಬೀಜ ಚೆಲ್ಲುವ ಮೊದಲು ಮೂಲ ಗೊಬ್ಬರವಾಗಿ ಕಾಂಪ್ಲೆಕ್ಸ್ ನೀಡಬೇಕು. ಮೊಳಕೆ ಬಂದು ಕಳೆ ಕಿತ್ತ ನಂತರ ಎಕರೆಗೆ 15 ಕೆ.ಜಿ ಯೂರಿಯಾ, 25 ಕೆ.ಜಿ ಪೊಟ್ಯಾಷ್ ಮೇಲುಗೊಬ್ಬರವಾಗಿ ಕೊಡಬೇಕು. ಒಂದು ಎಕರೆ ರಾಗಿ ಬೆಳೆಗೆ 4 ಟನ್ ಕೊಟ್ಟಿಗೆ ಗೊಬ್ಬರ ಕೊಡಬೇಕು.
–ಡಾ.ಎಸ್.ವಿ.ಮಂಜುನಾಥ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.