ADVERTISEMENT

ಅಲೆಮಾರಿಗಳಿಗೆ ನಿವೇಶನ: ಸೂಚನೆ

ಅಲೆಮಾರಿ, ಅರೆಅಲೆಮಾರಿ ಸಮುದಾಯದವರ ಸೌಲಭ್ಯಗಳ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 5:06 IST
Last Updated 22 ಏಪ್ರಿಲ್ 2021, 5:06 IST
ಚಿಂತಾಮಣಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಲೆಮಾರಿ ಸಮುದಾಯದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಹಶೀಲ್ದಾರ್ ಹನುಮಂತರಾಯಪ್ಪ, ಸಮುದಾಯ ಕೋಶದ ಜಿಲ್ಲಾ ನಾಮನಿರ್ದೇಶನ ಸದಸ್ಯ ಕೆ.ಸುರೇಶ್ ಇದ್ದರು
ಚಿಂತಾಮಣಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಲೆಮಾರಿ ಸಮುದಾಯದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಹಶೀಲ್ದಾರ್ ಹನುಮಂತರಾಯಪ್ಪ, ಸಮುದಾಯ ಕೋಶದ ಜಿಲ್ಲಾ ನಾಮನಿರ್ದೇಶನ ಸದಸ್ಯ ಕೆ.ಸುರೇಶ್ ಇದ್ದರು   

ಚಿಂತಾಮಣಿ: ಅಲೆಮಾರಿ, ಅರೆಅಲೆಮಾರಿ ಜನಾಂಗದವರು ಹೆಚ್ಚಾಗಿ ನೆಲೆಸಿರುವ ಗ್ರಾಮಗಳಲ್ಲಿ ಅಥವಾ ನಗರ ವ್ಯಾಪ್ತಿಯಲ್ಲಿ ಒಂದೆಡೆ ನೆಲೆಯೂರಿ ಜೀವನ ಸಾಗಿಸಲು 2 ಎಕರೆ ಜಮೀನು ಗುರುತಿಸಿ ನಿವೇಶನಗಳಿಗಾಗಿ ಮಂಜೂರು ಮಾಡಬೇಕು ಎಂದು ಅಲೆಮಾರಿ, ಅರೆಅಲೆಮಾರಿ ಕೋಶದ ಜಿಲ್ಲಾ ನಾಮನಿರ್ದೇಶನ ಸದಸ್ಯ ಕೆ.ಸುರೇಶ್ಮನವಿ ಮಾಡಿದರು.

ನಗರದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ಅಲೆಮಾರಿ, ಅರೆಅಲೆಮಾರಿ ಸಮುದಾಯದವರ ಸೌಲಭ್ಯಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಸಮುದಾಯದ ನಿವೇಶನ, ವಸತಿರಹಿತರನ್ನು ಗುರುತಿಸಿ ಸೂರು ಭಾಗ್ಯ ಕಲ್ಪಿಸಬೇಕು. ನಿರುದ್ಯೋಗ ಯುವಕ, ಯುವತಿಯರಿಗೆ ತರಬೇತಿ ಕಾರ್ಯಾಗಾರ ನಡೆಸಬೇಕು. ಈ ಸಮುದಾಯದವರು ನೆಲೆಸಿರುವ ಗ್ರಾಮಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲು ಅನುದಾನ ನೀಡಬೇಕು. ಅಲೆಮಾರಿ ಕಾಲೋನಿಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದರು.

ADVERTISEMENT

ಅಲೆಮಾರಿ ಸಮುದಾಯದವರು ನೆಲೆಸಿರುವ ಕಾಲೋನಿಗಳಲ್ಲಿ ಸಿಸಿ ರಸ್ತೆ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು. ಖಾಸಗಿ ಶಾಲೆಗಳಲ್ಲಿ ಹೆಚ್ಚಾಗಿ ಶುಲ್ಕ ವಸೂಲಿ ಮಾಡುತ್ತಿದ್ದು ದೂರು ನೀಡಿದರೂ ಕ್ರಮಕೈಗೊಂಡಿಲ್ಲ. ಸರ್ಕಾರಿ ಸುತ್ತೋಲೆಯಂತೆ ಶುಲ್ಕ ಪಡೆಯಲು ಸೂಚನೆ ನೀಡಬೇಕು. ಖಾಸಗಿ ಪಿಯು ಕಾಲೇಜುಗಳಲ್ಲಿ ಟ್ಯೂಷನ್ ಫೀ, ವಿಶೇಷ ತರಗತಿಗಳು, ಆನ್‌ಲೈನ್ ತರಗತಿಗಳು ಎಂದು ಶುಲ್ಕ ವಸೂಲಿ ಮಾಡುತ್ತಿರುವುದನ್ನು ನಿಲ್ಲಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಲೆಮಾರಿ ಕಾಲೋನಿಗಳಲ್ಲಿ ಒತ್ತುವರಿಯಾಗಿರುವ ಸ್ಮಶಾನಗಳನ್ನು ತೆರವುಗೊಳಿಸಬೇಕು. ಸರ್ಕಾರದ ಎಲ್ಲ ಇಲಾಖೆಗಳ ಅಧಿಕಾರಿಗಳು ಗಮನಹರಿಸಿ ಅಲೆಮಾರಿ, ಅರೆಅಲೆಮಾರಿ ಸಮುದಾಯ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಅಭಿವೃದ್ಧಿಯಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಶ್ರಮಿಸಬೇಕು ಎಂದು ಮನವಿ ಮಾಡಿದರು.

ತಹಶೀಲ್ದಾರ್ ಹನುಮಂತರಾಯಪ್ಪ ಮಾತನಾಡಿ, ಅಲೆಮಾರಿ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ಹೊರಡಿಸಿರುವ ಸುತ್ತೋಲೆಯಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಸಮಗ್ರ ಸಮೀಕ್ಷೆ ನಡೆಸಿ ಹಂತ ಹಂತವಾಗಿ ಅವರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.

ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.