ADVERTISEMENT

ಶಿಡ್ಲಘಟ್ಟ: ‘ಇಂಗ್ಲಿಷ್’ ಸೌತೆ ಬೆಳೆದು ಲಕ್ಷಾಂತರ ಆದಾಯ ಗಳಿಸಿದ ರೈತ

ಡಿ.ಜಿ.ಮಲ್ಲಿಕಾರ್ಜುನ
Published 30 ಜುಲೈ 2024, 5:11 IST
Last Updated 30 ಜುಲೈ 2024, 5:11 IST
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ರೈತ ಜಯಂತ್ ಬೆಳೆದಿರುವ ಇಂಗ್ಲಿಷ್ ಸೌತೆ
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ರೈತ ಜಯಂತ್ ಬೆಳೆದಿರುವ ಇಂಗ್ಲಿಷ್ ಸೌತೆ   

ಶಿಡ್ಲಘಟ್ಟ: ಇಂಗ್ಲಿಷ್ ಸೌತೆಕಾಯಿ ನೋಡಲು ಮಾಮೂಲಿಯಾಗಿ ಬಳಸುವ ಸೌತೆಕಾಯಿಗಿಂತ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಸಣ್ಣಕ್ಕೆ ನೀಳವಾದ ಆಕಾರ, ತೆಳುವಾದ ಸಿಪ್ಪೆ, ಕಡಿಮೆ ಬೀಜ, ಒಗರು ಅಥವಾ ಕಹಿ ಅಂಶವಿರದೇ ಸಿಹಿಯಾಗಿರುವುದು ಇದರ ವಿಶೇಷತೆ. ಹಾಗಾಗಿ ಇದಕ್ಕೆ ಬೇಡಿಕೆ ಮತ್ತು ಬೆಲೆ ಹೆಚ್ಚು.

ಈ ಇಂಗ್ಲಿಷ್ ಸೌತೆಕಾಯಿಯನ್ನು ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ರೈತ ಜಯಂತ್ (ಸೋನು) ಬೆಳೆದಿದ್ದು, ತನ್ನ ಯಶೋಗಾಥೆಯನ್ನು ವಿವರಿಸಿದ್ದಾರೆ.

‘ಯೂರೋಪ್ ಅಥವಾ ಇಂಗ್ಲಿಷ್ ಸೌತೆ ಮೂರು ತಿಂಗಳ ಬೆಳೆ. ಮೊದಲ ಫಸಲು 30 ದಿನಕ್ಕೆ ಬಂದರೆ, ಆನಂತರ ಎರಡು ತಿಂಗಳು ನಮಗೆ ಫಸಲನ್ನು ಕೊಡುತ್ತದೆ. ಒಂದು ಎಕರೆಗೆ 30 ರಿಂದ 40 ಟನ್ ಇಳುವರಿ ಪಡೆಯಬಹುದು’.

ADVERTISEMENT

‘ಒಂದು ಸಸಿ(ನಾರು)ಗೆ ₹10ಕೊಟ್ಟು ತಂದು ಒಂದು ಎಕರೆಗೆ ನಾಟಿ ಮಾಡಿದ್ದೇನೆ. ನಾಟಿ ಮಾಡುವ ಮುನ್ನ ಕೊಟ್ಟಿಗೆ ಗೊಬ್ಬರ, ಮಣ್ಣು ಹಾಕಿ ಭೂಮಿ ಸಿದ್ಧತೆ ಮಾಡಿದ್ದೆ. ನಾಟಿ ಮಾಡಿದ ಒಂದು ವಾರದಲ್ಲಿ ಬೀಜ ಮೊಳೆತು ಬಳ್ಳಿಯಾಯಿತು. ಬೀಜಗಳು ಮೊಳೆತು ಬಳ್ಳಿಯಾಗಿ ಮೇಲೆ ಏರಲು ಅನುಕೂಲವಾಗುವಂತೆ ದಾರ ಕಟ್ಟಿದ್ದೆ’ ಎಂದು ವಿವರಿಸಿದರು.

‘ಹೂ ಕಟ್ಟುವ, ಬಳ್ಳಿಯ ಎಲೆ ಕೆಂಪಾಗುವ ಸಂದರ್ಭದಲ್ಲಿ ತಜ್ಞರ ಸಲಹೆ ಪಡೆದು, ಔಷಧಗಳನ್ನು ಒಂದೆರಡು ಬಾರಿ ಸಿಂಪಡಿಸಿದರೆ ಸಾಕು. ಇದರ ಜೊತೆಗೆ ಹಸುವಿನ ಗಂಜಲ, ದ್ರವರೂಪಿ ಗೊಬ್ಬರವನ್ನು ನೀರಿನ ಮೂಲಕ ಗಿಡಗಳಿಗೆ ಹಾಯಿಸುವುದರಿಂದ ಯಾವುದೇ ರೋಗವೂ ಬಾರದು’ ಎಂದು ಹೇಳಿದರು.

‘ಸರಿಯಾಗಿ ಮೂವತ್ತು ದಿನಗಳಿಗೆ ಫಸಲು ಕೊಯ್ಲಿಗೆ ಬಂದಿದೆ. ಮೊದಲ ಕೊಯ್ಲಿನಲ್ಲಿ ಮೂರು ದಿನ ನಡೆದು, ಮೂರು ಟನ್ ಸೌತೆ ಸಿಕ್ಕಿದೆ. ಚಿಕ್ಕಬಳ್ಳಾಪುರದಲ್ಲಿ ವಿವಿಧ ಕಂಪೆನಿಗಳು ಸೌತೆಕಾಯಿಯನ್ನು ಕೊಳ್ಳುತ್ತಿವೆ. ಪ್ರಸ್ತುತ ₹31 ಬೆಲೆ ಇರುವುದರಿಂದ ಹಾಕಿರುವ ಬಂಡವಾಳ ಬಿಟ್ಟು ನನಗೆ ಕೇವಲ 35 ದಿನಕ್ಕೆ ಒಂದು ₹1 ಲಕ್ಷ ನಿವ್ವಳ ಆದಾಯ ಬಂದಿದೆ. ಇದೇ ಬೆಲೆ ಮುಂದುವರಿದದ್ದೇ ಆದಲ್ಲಿ ನಾನು ಏನಿಲ್ಲವೆಂದರೂ ₹8 ರಿಂದ ₹9 ಲಕ್ಷ ಆದಾಯ ಗಳಿಸುತ್ತೇನೆ’ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ಅಪ್ಪೇಗೌಡನಹಳ್ಳಿಯ ರೈತ ಜಯಂತ್.

ಬಳ್ಳಿಯಲ್ಲಿ ಇಂಗ್ಲಿಷ್ ಸೌತೆ
ಇಂಗ್ಲಿಷ್ ಸೌತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.