ADVERTISEMENT

ರೈತ ಚಳವಳಿ ಹಾದಿ ಮೆಲುಕು

ರೈತ ಸಂಘ, ಹಸಿರುಸೇನೆ ಸಭೆಯಲ್ಲಿ ಪ್ರೊ. ಎಂಡಿಎನ್‌ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 4:30 IST
Last Updated 16 ಫೆಬ್ರುವರಿ 2023, 4:30 IST
ಚಿಂತಾಮಣಿಯ ಹೊರವಲಯದಲ್ಲಿ ನಡೆದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಸಭೆಯಲ್ಲಿ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿದರು
ಚಿಂತಾಮಣಿಯ ಹೊರವಲಯದಲ್ಲಿ ನಡೆದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಸಭೆಯಲ್ಲಿ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿದರು   

ಚಿಂತಾಮಣಿ: ರೈತರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಒಗ್ಗಟ್ಟಿನಿಂದ ಹೋರಾಟ ಕೈಗೊಳ್ಳಬೇಕು ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಹೇಳಿದರು.

ತಾಲ್ಲೂಕಿನ ತಿನಕಲ್ ಗ್ರಾಮದಲ್ಲಿ ಮಂಗಳವಾರ ಸಂಘದ ತಾಲ್ಲೂಕು ಘಟಕವು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.

1980ರಲ್ಲಿ ನವಲುಗುಂದ, ನರಗುಂದದಲ್ಲಿ ರೈತ ಹೋರಾಟಗಾರರ ಮೇಲೆ ನಡೆದ ಗೋಲಿಬಾರ್ ಪ್ರಕರಣದಿಂದ ರೈತ ಸಂಘ ಉದಯವಾಯಿತು. 1980ರಲ್ಲಿ ಶಿವಮೊಗ್ಗದಲ್ಲಿ ಆರಂಭವಾದ ಕಬ್ಬು ಬೆಳೆ ಸಂಘದ ನಂತರ ಹಲವಾರು ಮುಖಂಡರು ಸೇರಿ ಪೊಲೀಸ್ ದೌರ್ಜನ್ಯವನ್ನು ತಡೆಗಟ್ಟುವ ಸಲುವಾಗಿ ರೈತ ಸಂಘವನ್ನು ಕಟ್ಟುವ ಕಲ್ಪನೆ ಮೂಡಿ ಬಂತು. ಅಂದಿನಿಂದಲೂ ಸಂಘಟನೆ ಬಲವಾಗಿ ಬೇರೂರಿತು. ಅಂದಿನ ಇಂದಿರಾ ಗಾಂಧಿ ಸರ್ಕಾರವನ್ನು ಕಿತ್ತೊಗೆದು ಜನತಾಪಕ್ಷ ಉದಯವಾಗಲು ಸಹಕಾರ ನೀಡಿತು ಎಂದು ಹೋರಾಟವನ್ನು ಮೆಲುಕು ಹಾಕಿದರು.

ADVERTISEMENT

ಇದುವರೆಗೆ 164 ಜನ ರೈತರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಅಂದಿನ ಗಟ್ಟಿತನವನ್ನು, ಹೋರಾಟವನ್ನು ಇಂದಿನ ರೈತರು ರೂಪಿಸಿಕೊಳ್ಳಬೇಕು. ಒಗ್ಗಟ್ಟಿನಿಂದ ನಡೆದರೆ ಮಾತ್ರ ರೈತರಿಗೆ ಗೌರವ ದೊರೆಯುತ್ತದೆ. ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಬಲವಾದ ಒತ್ತಡ ತರಲು ಹೋರಾಟ ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸೀಕಲ್ ರಮಣಾರೆಡ್ಡಿ ಮಾತನಾಡಿ, ರೈತರ ಸಾಲ ಮನ್ನಾ ಮಾಡಬಾರದು ಎಂದು ಹೇಳಿಕೆ ನೀಡಿರುವ ಸಂಸತ್ ಸದಸ್ಯ ತೇಜಸ್ವಿ ಸೂರ್ಯ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ಸಂಸದರು ಎಂದಾದರೂ ಹಳ್ಳಿಗಳಿಗೆ ಭೇಟಿ ನೀಡಿದ್ದಾರೆಯೇ? ಹಳ್ಳಿಗಳ ರೈತರ ಜೀವನದ ಕಷ್ಟಗಳ ಬಗ್ಗೆ ಮಾಹಿತಿ ಇದೆಯೇ? ಲಕ್ಷಾಂತರ ಕೋಟಿ ಉದ್ಯಮಿಗಳ ಬ್ಯಾಂಕ್ ಸಾಲವನ್ನು ಮನ್ನಾ ಮಾಡಬಹುದು. ರೈತರ ಸಾಲವನ್ನು ಮಾತ್ರ ಏಕೆ ಮನ್ನಾ ಮಾಡಬಾರದು
ಎಂದು ಪ್ರಶ್ನಿಸಿದರು.

ರೈತರು ತಮ್ಮ ಸ್ವಾರ್ಥಕ್ಕಾಗಿ ಸಾಲ ಮಾಡಲಿಲ್ಲ. ದೇಶದ ಜನರಿಗೆ ಆಹಾರ ಪದಾರ್ಥ ಬೆಳೆಯಲು ಸಾಲ ಪಡೆದರು. ಸಕಾಲದಲ್ಲಿ ಮಳೆ-ಬೆಳೆಯಾಗದೆ ನಷ್ಟ ಹೊಂದುತ್ತಾರೆ. ತಮ್ಮ ಶ್ರಮಕ್ಕೆ ಬೆಲೆ ಕೊಡದಿದ್ದರೂ ಪರವಾಗಿಲ್ಲ, ಮಾಡಿರುವ ಸಾಲವನ್ನು ಮನ್ನಾ ಮಾಡಿ ಎಂದು ಕೇಳುವುದರಲ್ಲಿ ತಪ್ಪೇನಿದೆ? ಸಂಸದರು ರೈತರ ಕ್ಷಮೆ ಕೇಳಬೇಕು ಎಂದು
ಆಗ್ರಹಿಸಿದರು.

ರೈತ ಸಂಘಟನೆ ಸದಸ್ಯರಿಗೆ ಗುರುತಿನ ಕಾರ್ಡ್ ಗಳನ್ನು ವಿತರಿಸಲಾಯಿತು. ಪ್ರಧಾನ ಕಾರ್ಯದರ್ಶಿ ಎಂ.ಎಲ್.ಆಂಜನೇಯರೆಡ್ಡಿ, ಉಪಾಧ್ಯಕ್ಷ ಗಂಜೂರು ನಾರಾಯಣಸ್ವಾಮಿ, ರಾಯಪ್ಪಲ್ಲಿ ಆನಂದರೆಡ್ಡಿ, ಚೀಮನಹಳ್ಳಿ ಜಿ.ಮುನಿರೆಡ್ಡಿ, ಆರ್.ಎಸ್.ಸಿ ಆಂಜನೇಯರೆಡ್ಡಿ, ಅಲ್ಲಾಬಕಾಶ್, ಕೆಂಚಾರ್ಲಹಳ್ಳಿ ಕೆ.ವಿ.ಕೃಷ್ಣಾರೆಡ್ಡಿ, ಬೊಮ್ಮೇಕಲ್ಲು ಮುನಿಕೆಂಪಣ್ಣ, ಪಾಲು ನಾರಾಯಣಸ್ವಾಮಿ, ಕಾಗತಿ ವೆಂಕಟಾಚಲಪತಿ, ಗುಟ್ಟಹಳ್ಳಿ ರಾಮಕೃಷ್ಣಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.