ADVERTISEMENT

ಚಿಕ್ಕಬಳ್ಳಾಪುರ | ಮಾನವ ಹಕ್ಕು; 8 ವರ್ಷಗಳಲ್ಲಿ 575 ಅರ್ಜಿ

ಮಾನವ ಹಕ್ಕುಗಳ ಆಯೋಗಕ್ಕೆ ಜಿಲ್ಲೆಯಿಂದ ಕಡಿಮೆ ಸಂಖ್ಯೆಯಲ್ಲಿ ದೂರು

ಡಿ.ಎಂ.ಕುರ್ಕೆ ಪ್ರಶಾಂತ
Published 15 ಡಿಸೆಂಬರ್ 2023, 7:15 IST
Last Updated 15 ಡಿಸೆಂಬರ್ 2023, 7:15 IST
<div class="paragraphs"><p>ರಾಜ್ಯ ಮಾನವ ಹಕ್ಕುಗಳ ಆಯೋಗ</p></div>

ರಾಜ್ಯ ಮಾನವ ಹಕ್ಕುಗಳ ಆಯೋಗ

   

ಚಿಕ್ಕಬಳ್ಳಾಪುರ: ಮಾನವ ಹಕ್ಕುಗಳ ರಕ್ಷಣೆಗಾಗಿ ರಾಜ್ಯ ಮಾನವ ಹಕ್ಕುಗಳ ಆಯೋಗ ಕಾರ್ಯನಿರ್ವಹಿಸುತ್ತಿದೆ. ಕೆಲಸ ಮಾಡುವ ಸ್ಥಳದಿಂದ ಹಿಡಿದು ಶಾಲಾ ಕಾಲೇಜುಗಳಲ್ಲಿ ಮೂಲಸೌಲಭ್ಯಗಳು ಇಲ್ಲದಿದ್ದರೂ ಆಯೋಗಕ್ಕೆ ದೂರು ಸಲ್ಲಿಸಬಹುದು. ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಗಳ ಹಕ್ಕುಗಳ ರಕ್ಷಣೆಯಲ್ಲಿ ಆಯೋಗವು ಮಹತ್ವದ ಪಾತ್ರವಹಿಸುತ್ತದೆ.

ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಜನರಲ್ಲಿ ಆಯೋಗದ ಕಾರ್ಯಗಳ ಬಗೆಗಿನ ಅರಿವಿನ ಕೊರತೆ ಮತ್ತು ಪ್ರಚಾರದ ಕೊರತೆಯಿಂದಲೂ ಆಯೋಗಕ್ಕೆ ದೂರುಗಳನ್ನು ಸಲ್ಲಿಸುವ ಪ್ರಮಾಣ ತೀರಾ ಕಡಿಮೆ ಇದೆ.

ADVERTISEMENT

ಬೆಂಗಳೂರಿನಲ್ಲಿ ಮಾನವ ಹಕ್ಕುಗಳ ಆಯೋಗದ ಕೇಂದ್ರ ಕಚೇರಿ ಇದೆ. ಚಿಕ್ಕಬಳ್ಳಾಪುರ ರಾಜಧಾನಿಗೆ ಸಮೀಪವೂ ಇದೆ. ಆದರೆ ತಮ್ಮ ಸಮಸ್ಯೆಗಳನ್ನು ಹೊತ್ತು ಆಯೋಗದ ಬಳಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಎಷ್ಟು ಜನರು ಹೋಗಿದ್ದಾರೆ ಎನ್ನುವ ಅಂಕಿ ಸಂಖ್ಯೆಗಳನ್ನು ನೋಡಿದರೆ ನಿರಾಸೆ ವ್ಯಕ್ತವಾಗುತ್ತದೆ.

ಮಾನವ ಹಕ್ಕುಗಳ ಆಯೋಗಕ್ಕೆ 2015ರಿಂದ 2023ರ ಮೇ31ರವರೆಗೆ ಯಾವ ಜಿಲ್ಲೆಯಿಂದ ಎಷ್ಟು ದೂರುಗಳು ನೋಂದಣಿ ಆಗಿವೆ ಎನ್ನುವುದನ್ನು ನೋಡಿದರೆ ತೀರಾ ಕಡಿಮೆ ಸಂಖ್ಯೆಯ ದೂರುಗಳು ದಾಖಲಾಗಿರುವ ಮೊದಲ ಐದು ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರ ಸಹ ಸ್ಥಾನ ಪಡೆದಿದೆ.

ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿಕ್ಕಮಗಳೂರು, ಗದಗ, ವಿಜಯನಗರ ಜಿಲ್ಲೆಗಳು ಕಡಿಮೆ ಸಂಖ್ಯೆಯಲ್ಲಿ ಅರ್ಜಿಗಳನ್ನು ನೋಂದಾಯಿಸಿರುವ ಜಿಲ್ಲೆಗಳ ಪಟ್ಟಿಯಲ್ಲಿ ಇವೆ. ಬೆಂಗಳೂರು ನಗರ, ಮೈಸೂರು, ತುಮಕೂರು, ಬೆಳಗಾವಿ ಮತ್ತು ಬಳ್ಳಾರಿ ಜಿಲ್ಲೆಗಳು ಹೆಚ್ಚು ಅರ್ಜಿಗಳು ನೋಂದಣಿಯಾದ ಮೊದಲ ಐದು ಸ್ಥಾನಗಳಲ್ಲಿ ಇವೆ.

2015ರಿಂದ 2023ರ ಮೇ31ರವರೆಗೆ ಜಿಲ್ಲೆಯಿಂದ 575 ದೂರುಗಳು ನೋಂದಣಿ ಆಗಿವೆ. ಈ ಪೈಕಿ 528 ಅರ್ಜಿಗಳು ವಿಲೇವಾರಿಯಾಗಿವೆ. 47 ಅರ್ಜಿಗಳ ವಿಲೇವಾರಿ ಬಾಕಿ ಇದೆ. 

ಮಾಹಿತಿ ಹಕ್ಕು ಕಾರ್ಯಕರ್ತ ಭೀಮನಗೌಡ ಪರಗೊಂಡ ಅವರು ಈ ಬಗ್ಗೆ ಮಾಹಿತಿ ಕೋರಿ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಆಯೋಗವು  ಜಿಲ್ಲಾವಾರು ಮಾಹಿತಿ ನೀಡಿದೆ.

ಸಮಾನತೆ, ಸ್ವಾತಂತ್ರ್ಯಕ್ಕೆ ಧಕ್ಕೆ ಸೇರಿದಂತೆ ಒಂದು ಸರ್ಕಾರಿ ಸಂಸ್ಥೆ, ಶಾಲಾ ಕಾಲೇಜಿಗೆ ಮೂಲ ಸೌಕರ್ಯಗಳು ಇಲ್ಲದಿದ್ದರೂ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಎಂದು ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ನ್ಯಾಯಾಧೀಶರು ತಿಳಿಸಿದ್ದರು. 

ಚಿಕ್ಕಬಳ್ಳಾಪುರ ರಾಜ್ಯದ ಗಡಿ ಜಿಲ್ಲೆ. ಇಂದಿಗೂ ಬಾಗೇಪಲ್ಲಿ, ಗುಡಿಬಂಡೆ ಭಾಗಗಳಲ್ಲಿ ದಲಿತರ ಮೇಲಿನ ಹಲ್ಲೆ, ದೌರ್ಜನ್ಯಗಳು ಹೆಚ್ಚಿವೆ. ಗಡಿಭಾಗದ ಶಾಲೆಗಳು ಸೌಲಭ್ಯಗಳಿಲ್ಲದೆ ಬಳಲಿವೆ. ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಜಿಲ್ಲೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಈ ಬಗ್ಗೆ ವಿವಿಧ ಸಂಘಟನೆಗಳು ಆಗಾಗ್ಗೆ ಧ್ವನಿ ಎತ್ತುತ್ತಿವೆ. ಪ್ರತಿಭಟನೆಗಳನ್ನು ಸಹ ಮಾಡುತ್ತಿವೆ. ಆದರೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವಲ್ಲಿ ಮಾತ್ರ ಜಿಲ್ಲೆ ಕಳಪೆಯಾಗಿವೆ.

ಆನ್‌ಲೈನ್‌ನಲ್ಲಿಯೂ ಆಯೋಗಕ್ಕೆ ದೂರು ಅರ್ಜಿಗಳನ್ನು ಸಲ್ಲಿಸಬಹುದು. ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯ ಹೆಸರು, ವಿಳಾಸ, ಜಿಲ್ಲೆ, ರಾಜ್ಯ, ವಯಸ್ಸು, ಧರ್ಮ, ಜಾತಿ, ಘಟನೆಯ ಸ್ಥಳ, ದಿನಾಂಕ, ಘಟನೆಯ ವಿವರ, ಯಾವುದಾದರೂ ನ್ಯಾಯಾಲಯ, ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಮುಂಚಿತವಾಗಿ ದೂರು ಸಲ್ಲಿಸಿದ್ದೀರಾ ಇತ್ಯಾದಿ ವಿವರಗಳನ್ನು ಭರ್ತಿ ಮಾಡಿ ದೂರು ಅರ್ಜಿ ಸಲ್ಲಿಸಬೇಕು.

‘ಜಾಗೃತಿ ಹೆಚ್ಚು ನಡೆಯಲಿದೆ’
ಬೆಂಗಳೂರಿಗೆ ಚಿಕ್ಕಬಳ್ಳಾಪುರ ಕೇವಲ 50 ಕಿ.ಮೀ ದೂರದಲ್ಲಿ ಇದೆ. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದ ಜಿಲ್ಲೆಗಳು ಬಹುದೂರ ಇವೆ. ಹೀಗಿದ್ದರೂ ಮಾನವ ಹಕ್ಕುಗಳ ವಿಚಾರವಾಗಿ ದೂರು ನೀಡುವಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಹೋಲಿಸಿದೆ ಮುಂದಿವೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮನಗೌಡ ಪರಗೊಂಡ ತಿಳಿಸಿದರು. ದೂರುಗಳು ಕಡಿಮೆ ದಾಖಲಾಗುತ್ತಿರುವ ಜಿಲ್ಲೆಗಳಲ್ಲಿ ಆಯೋಗವು ಜಾಗೃತಿ ಮೂಡಿಸಬೇಕು ಎಂದು ಕೋರಿದರು.
‘ದಿನಾಚರಣೆಗಳಿಗೆ ಸೀಮಿತ’
ಜಿಲ್ಲೆಯಲ್ಲಿ ಮಾನವ ಹಕ್ಕುಗಳ ಕಾರ್ಯಕ್ರಮಗಳು ದಿನಾಚರಣೆಗೆ ಮಾತ್ರ ಸೀಮಿತವಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆ, ರಕ್ಷಣೆ ಮತ್ತು ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಆದರೆ ಜಿಲ್ಲೆಯಲ್ಲಿ ಅಂತಹ ಪ್ರಯತ್ನಗಳು ಆಗುತ್ತಿಲ್ಲ ಎಂದು ಮಾನವ ಹಕ್ಕುಗಳ ಹೋರಾಟಗಾರ ನಕ್ಕನಹಳ್ಳಿ ಮಂಜುನಾಥ್ ಬೇಸರ ವ್ಯಕ್ತಪಡಿಸುವರು. ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದವರಿಗೆ ಯಾವ ಶಿಕ್ಷೆಯಾಗಿದೆ. ಯಾವ ಸಂತ್ರಸ್ತರು, ಅನ್ಯಾಯಕ್ಕೆ ಒಳಗಾದವರು ದೂರು ನೀಡಬಹುದು ಎನ್ನುವ ಕನಿಷ್ಠ ಮಾಹಿತಿಯ ಬಗ್ಗೆಯೂ ಜನ ಜಾಗೃತಿ ನಡೆಯುತ್ತಿಲ್ಲ. ಈ ಕಾರಣದಿಂದ ಜಿಲ್ಲೆಯಲ್ಲಿ ಆಯೋಗಕ್ಕೆ ದೂರುಗಳನ್ನು ನೀಡುವವರು ಕಡಿಮೆ ಇದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.