ಚಿಂತಾಮಣಿ: ಹವಾಮಾನ ವೈಪರೀತ್ಯ, ಮಳೆಯ ಅಸಮತೋಲನದಿಂದ ರಾಗಿ ಇಳುವರಿ ಕಡಿಮೆಯಾಗುತ್ತಿದೆ. ಪರ್ಯಾಯವಾಗಿ ನೂತನ ರಾಗಿ ತಳಿ ಕೆ.ಎಂ.ಆರ್ 316 ರೈತರ ತಾಕುಗಳಲ್ಲಿ ಪ್ರಾತ್ಯಕ್ಷಿಕೆಯ ಮೂಲಕ ಪರಿಚಯಿಸಲಾಗಿದೆ ಎಂದು ವಿಜ್ಞಾನಿ ಕೆ.ಸಿಂಧು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರವು ಮೇಲೇರಿ ಗ್ರಾಮದ ಮಂಜುನಾಥ ಜಮೀನಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕ್ಷೇತ್ರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ನೂತನ ರಾಗಿ ತಳಿಯ ಬಗ್ಗೆ ರೈತರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬರ ತಡೆಯುವ ಹಾಗೂ ಹೆಚ್ಚು ತೆಂಡೆ ಹೊಡೆಯುವ ಶಕ್ತಿ ಹೊಂದಿದೆ. ತೆನೆಯಲ್ಲಿ ಸರಾಸರಿ 9-10 ಇಳುಕುಗಳಿದ್ದು, ತೆನೆಯಲ್ಲಿ ಕಾಳುಗಳು ದಪ್ಪವಾಗಿ ಚೆನ್ನಾಗಿ ತುಂಬಿ ಕೊಂಡಿದ್ದು ಬೀಜ ಬೇರ್ಪಡಿಸಿದಾಗ ಕಡಿಮೆ ಹೊಟ್ಟು ಹಾಗೂ ಹೆಚ್ಚು ಕಾಳು ಹೊಂದಿರುತ್ತದೆ ಎಂದು ತಿಳಿಸಿದರು.
ಅಲ್ಪಾವಧಿ ರಾಗಿ ತಳಿಯಾದ ಕೆ.ಎಂ.ಆರ್ 316ರ ತೆನೆಯ ಸರಾಸರಿ ತೂಕ 50 ಗ್ರಾಂ ಇದ್ದು, ಗಿಡದ ಕಾಂಡ ದಪ್ಪ ಇರುವುದರಿಂದ ಬಾಗುವುದಿಲ್ಲ. ಬಾಗಿ ಕೆಳಗೆ ಬಿದ್ದು ತೆನೆಯ ಕಾಳು ಹಾಳಾಗುವುದಿಲ್ಲ. ಒಂದು ಎಕರೆಗೆ 16-18 ಕ್ವಿಂಟಲ್ ಇಳುವರಿ ನಿರೀಕ್ಷಿಸಬಹುದು ಎಂದು ತಿಳಿಸಿದರು.
ರೈತ ಮಂಜುನಾಥ್ ನೂತನ ರಾಗಿ ತಳಿಯ ಕುರಿತು ತಮ್ಮ ಅನುಭವ ರೈತರೊಂದಿಗೆ ಹಂಚಿಕೊಂಡರು. ಪಂಚಾಯಿತಿ ಸದಸ್ಯ ರಮೇಶ್, ಕೃಷಿ ಇಲಾಖೆ ಅಧಿಕಾರಿ ಶ್ರೀವತ್ಸ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.