ADVERTISEMENT

ಚಿಕ್ಕಬಳ್ಳಾಪುರ | ಸಂಸ್ಕರಿತ ಕೊಳಚೆ ನೀರಲ್ಲಿ ಮೀನುಗಾರಿಕೆ

ಕಂದವಾರ ಕೆರೆ ನೀರು ಬಳಕೆಗೆ ಆಯೋಗ್ಯವಲ್ಲ ಎಂದು ಫಲಕ; ಅಧಿಕಾರಿಗಳ ಜಾಣ ಕುರುಡು

ಡಿ.ಎಂ.ಕುರ್ಕೆ ಪ್ರಶಾಂತ
Published 23 ಜೂನ್ 2024, 6:09 IST
Last Updated 23 ಜೂನ್ 2024, 6:09 IST
ಚಿಕ್ಕಬಳ್ಳಾಪುರದ ಕಂದವಾರ ಕೆರೆ ಬಳಿ ಬಳಕೆಗೆ ಯೋಗ್ಯವಲ್ಲ ಎಂದು ಅಳವಡಿಸಿರುವ ನಾಮಫಲಕ
ಚಿಕ್ಕಬಳ್ಳಾಪುರದ ಕಂದವಾರ ಕೆರೆ ಬಳಿ ಬಳಕೆಗೆ ಯೋಗ್ಯವಲ್ಲ ಎಂದು ಅಳವಡಿಸಿರುವ ನಾಮಫಲಕ   

ಚಿಕ್ಕಬಳ್ಳಾಪುರ: ಎಚ್‌.ಎನ್.ವ್ಯಾಲಿ ಯೋಜನೆಯಡಿ ಅಂತರ್ಜಲ ಮರುಪೂರಣಕ್ಕಾಗಿ ಈ ಕೆರೆ ಗುರುತಿಸಲಾಗಿದೆ. ಈ ನೀರನ್ನು ಕುಡಿಯುವುದಕ್ಕಾಗಲಿ, ವ್ಯವಸಾಯಕ್ಕಾಗಲಿ ಉಪಯೋಗಿಸಬಾರದು. ಸದರಿ ನೀರನ್ನು ಅನಧಿಕೃತವಾಗಿ ಉಪಯೋಗಿಸಿದಲ್ಲಿ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು. ಈ ಕೆರೆಯಲ್ಲಿ ಈಜುವುದು, ಮರಳು ತೆಗೆಯುವುದನ್ನು ನಿಷೇಧಿಸಲಾಗಿದೆ–ಇದು ನಗರದ ಕಂದವಾರ ಕೆರೆಯ ಏರಿ ಹಿಂಭಾಗದಲ್ಲಿ ಸಣ್ಣ ನೀರಾವರಿ ಇಲಾಖೆ ಅಳವಡಿಸಿರುವ ನಾಮಫಲಕ.

ಆದರೆ ಈ ಫಲಕವನ್ನು ಅಣಕಿಸುವಂತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಂತೆ ಕೆರೆಯಲ್ಲಿ ಮಾತ್ರ ಮೀನುಗಾರಿಕೆ ನಡೆಯುತ್ತಲೇ ಇದೆ. ಮೀನುಗಾರಿಕೆಗೆ ತಡೆ ನೀಡಬೇಕಾದ ಸಣ್ಣ ನೀರಾವರಿ ಇಲಾಖೆ ಮತ್ತು ಎಚ್‌.ಎನ್.ವ್ಯಾಲಿ ಯೋಜನೆಯ ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತಿದ್ದಾರೆ.

ತೆಪ್ಪಗಳಲ್ಲಿ ಕಂದವಾರ ಕೆರೆಯಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಅರೆ ಸಂಸ್ಕರಿತ ನೀರಿನಲ್ಲಿ ಬೆಳೆದ ಮೀನುಗಳನ್ನು ಹಿಡಿದು ಕೆಲವರು ಮಾರಾಟ ಮಾಡಿದರೆ ಕೆಲವರು ತಮ್ಮ ಮನೆಗಳಲ್ಲಿಯೇ ಮೀನೂಟಕ್ಕೆ ಕೊಂಡೊಯ್ಯುತ್ತಿದ್ದಾರೆ. ಮೀನು ಹಿಡಿಯುವವರು ಕೆರೆಗೆ ಇಳಿದರೂ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.

ADVERTISEMENT

ಕಂದವಾರ ಕೆರೆಗೆ ನಗರದ ಯುಜಿಡಿ ನೀರು ಹರಿಯುತ್ತಿದೆ. ಈ ಬಗ್ಗೆ ಈ ಹಿಂದೆಯೇ ಸಣ್ಣ ನೀರಾವರಿ ಇಲಾಖೆಯು ನಗರಸಭೆ ಮತ್ತು ಜಿಲ್ಲಾಧಿಕಾರಿ ಅವರಿಗೆ ಪತ್ರ ಸಹ ಬರೆದಿದೆ. ಕೆರೆ ಅಂಚಿನ ಭಾಗಗಳನ್ನು ಗಮನಿಸಿದರೆ ನಗರದ ಕೊಳಚೆ ನೀರು ಕೆರೆಗೆ ಸೇರುತ್ತಿರುವುದು ಕಾಣುತ್ತದೆ.

ಸಂಸ್ಕರಿತ ನೀರನ್ನು ಜನರು ನೇರವಾಗಿ‌ ಕುಡಿಯುವುದಾಗಲಿ ಅಥವಾ ಕೃಷಿಗೆ ಬಳಕೆ ಮಾಡುವುದಕ್ಕಾಗಲೀ ಅವಕಾಶವಿಲ್ಲ ಎಂಬುದು ಸರ್ಕಾರದ ನಿಯಮ. ಅಲ್ಲಿಗೆ ಎಚ್.ಎನ್.ವ್ಯಾಲಿ ನೀರು ಅಂತರ್ಜಲ ಅಭಿವೃದ್ಧಿಗಷ್ಟೇ ಸೀಮಿತ ಎಂಬುದು ಸ್ಪಷ್ಟವಾಗಿದೆ. ಆದರೆ, ಇಂತಹ ನೀರಿನಲ್ಲಿ ಬೆಳೆದ ಮೀನುಗಳು ಮನುಷ್ಯರು ಸೇವಿಸಲು ಯೋಗ್ಯವೇ? ಇವು ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುವುದಿಲ್ಲವೇ? ವ್ಯಾಲಿ ನೀರಿನಲ್ಲಿ ಮೀನುಗಾರಿಕೆ ಮಾಡಲು ಅವಕಾಶವಿದೆಯೇ? ಎನ್ನುವ ಪ್ರಶ್ನೆ ಪ್ರಜ್ಞಾವಂತರಲ್ಲಿ ಮೂಡಿದೆ.

ಎಚ್‌.ಎನ್.ವ್ಯಾಲಿ ಮತ್ತು ಕೆ.ಸಿ.ವ್ಯಾಲಿಯ ಅರೆ ಸಂಸ್ಕರಿತ ನೀರು ಅಂತರ್ಜಲವನ್ನು ಕಲುಷಿತಗೊಳಿಸುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾಮಗಳು ಉಂಟಾಗುತ್ತಿದೆ ಎಂದು ನೀರಾವರಿ ಹೋರಾಟಗಾರರು ಆರೋಪಿಸುತ್ತಿದ್ದಾರೆ. ಈ ನಡುವೆಯೇ ಬೆಂಗಳೂರಿನ ಕೊಳಚೆ ನೀರನ್ನು ಎರಡು ಹಂತದಲ್ಲಿ ಸಂಸ್ಕರಿಸಿ ಹರಿಸುತ್ತಿರುವ ಕಂದವಾರ ಕೆರೆಯಲ್ಲಿ ಮೀನುಗಾರಿಕೆ ನಡೆಯುತ್ತಿದೆ.

ವಾರಾಂತ್ಯದ ದಿನಗಳಲ್ಲಿ ಹೆಚ್ಚು: ವಾರಾಂತ್ಯದ ಶನಿವಾರ ಮತ್ತು ಭಾನುವಾರ ಕೆರೆಯಲ್ಲಿ ಮೀನುಗಾರಿಕೆಗೆ ತೆಪ್ಪಗಳು ಹೆಚ್ಚು ಇಳಿಯುತ್ತವೆ. ಉಳಿದ ದಿನಗಳಲ್ಲಿ ಅಲ್ಲೊಂದು ಇಲ್ಲೊಂದು ತೆಪ್ಪಗಳು ನೀರಿಗೆ ಇಳಿಯುತ್ತಿವೆ. ಕೆರೆಯ ಬದಿಗಳಲ್ಲಿ ಕೆಲವರು ಗಾಳ ಹಾಕಿಯೂ ಮೀನು ಹಿಡಿಯುವ ದೃಶ್ಯಗಳು ಕಂಡು ಬರುತ್ತವೆ. 

ಶ್ರೀನಿವಾಸಸಾಗರದಲ್ಲಿಯೂ ಇದೇ ಕಥೆ: ತಾಲ್ಲೂಕಿನ ಶ್ರೀನಿವಾಸಸಾಗರಕ್ಕೂ ಎಚ್‌.ಎನ್.ವ್ಯಾಲಿ ನೀರು ಹರಿಸಲಾಗುತ್ತಿದೆ. ಈ ಕೆರೆಯಲ್ಲಿಯೂ ಮೀನುಗಾರಿಕೆ ನಡೆಯುತ್ತಿದೆ. ಈ ಬಗ್ಗೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ಈ ಹಿಂದೆ ದೂರು ಸಹ ನೀಡಿದ್ದರು. 

ಚಿಕ್ಕಬಳ್ಳಾಪುರದ ಕಂದವಾರ ಕೆರೆಯಲ್ಲಿ ಮೀನುಗಾರಿಕೆ ನಡೆಯುತ್ತಿರುವುದು

ಮೀನು ಸೇವಿಸಲು ಸುರಕ್ಷಿತವೇ?

ಕಂದವಾರ ಕೆರೆಯಲ್ಲಿ ತೆಪ್ಪಗಳನ್ನು ಬಳಸಿ ಮೀನು ಹಿಡಿಯುವುದು ಸಾಮಾನ್ಯವಾಗಿದೆ. ಮೀನು ಹಿಡಿಯುವವರನ್ನು ಕೇಳಿದರೆ ಜಿಲೇಬಿ ಮೀನುಗಳು ಇಲ್ಲಿವೆ. ಟೆಂಡರ್ ಆಗಿದೆ ಎನ್ನುತ್ತಾರೆ. ಹಿಡಿದ ಮೀನುಗಳನ್ನು ವಾಹನದಲ್ಲಿ ಕೊಂಡೊಯ್ದು ಮಾರಾಟ ಮಾಡುತ್ತಾರೆ ಎಂದು ಉಪನ್ಯಾಸಕ ಎನ್.ಚಂದ್ರಶೇಖರ್ ತಿಳಿಸಿದರು. ಈ ಮೀನುಗಳು ಎಲ್ಲೆಲ್ಲಿ ಮಾರಾಟವಾಗುತ್ತವೆಯೋ ತಿಳಿಯದು. ಯಾರ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆಯೋ ಗೊತ್ತಿಲ್ಲ. ಆದರೆ ಇಂತ ನೀರಿನಲ್ಲಿ ಬೆಳೆದ ಮೀನುಗಳ ಮನುಷ್ಯರ ಸೇವನೆಗೆ ಎಷ್ಟು ಸುರಕ್ಷಿತ ಎಂಬುದು ಪ್ರಶ್ನೆಯಾಗಿದೆ. ಈ ಮೀನುಗಳನ್ನು ತಿನ್ನಬಹುದೇ ಅಥವಾ ಬೇಡವೇ ಎಂಬುದನ್ನು ಸಂಬಂಧಿಸಿದ ಅಧಿಕಾರಿಗಳು ಖಚಿತಪಡಿಸಬೇಕು ಎನ್ನುತ್ತಾರೆ.

‘ಮೀನುಗಾರಿಕೆಗೆ ಅವಕಾಶವಿಲ್ಲ’

ಕಂದವಾರ ಕೆರೆಯಲ್ಲಿ ಮೀನುಗಾರಿಕೆಗೆ ಅವಕಾಶ ನೀಡಿಲ್ಲ. ಗುತ್ತಿಗೆಗೆ ಸಂಬಂಧಿಸಿದಂತೆ ಯಾವುದೇ ಟೆಂಡರ್‌ಗಳೂ ಆಗಿಲ್ಲ. ಮೀನು ಹಿಡಿಯುವುದು ಅಕ್ರಮ. ಆದರೆ ಅದನ್ನು ಕಾಯಲು ನಮ್ಮಲ್ಲಿ ಸಿಬ್ಬಂದಿಯೂ ಇಲ್ಲ ಎನ್ನುತ್ತವೆ ಮೀನುಗಾರಿಕೆ ಇಲಾಖೆ ಮೂಲಗಳು. ಎಚ್‌.ಎನ್.ವ್ಯಾಲಿ ನೀರಾವರಿ ಯೋಜನೆಯಡಿ 45 ಕೆರೆಗಳಿವೆ.  ನಿಯಮಗಳು ಸರಿಯಾಗಿ ಅನುಷ್ಠಾನವಾಗಿದ್ದರೆ ಮೀನುಗಾರಿಕೆ ಮಾಡಲು ಅವಕಾಶವಿದೆ. ಆದರೆ ಈ ಅನುಷ್ಠಾನ ನಮ್ಮ ಕೈಯಲ್ಲಿ ಇಲ್ಲ. ಎಚ್‌.ಎನ್.ವ್ಯಾಲಿ ಕೆರೆಗಳಲ್ಲಿ ಮೀನುಗಾರಿಕೆ ನಡೆಸಲು ಎರಡು ವರ್ಷಗಳಿಂದ ಯಾವುದೇ ಟೆಂಡರ್ ಅಥವಾ ಗುತ್ತಿಗೆ ಆಗಿಲ್ಲ. ಈ ಹಿಂದೆ ಗುತ್ತಿಗೆ ಆಗಿರುವ 15 ಕೆರೆಗಳಲ್ಲಿ ಮಾತ್ರ ಮೀನುಗಾರಿಕೆ ನಡೆಯುತ್ತಿದೆ ಎನ್ನುತ್ತವೆ ಮೀನುಗಾರಿಕೆ ಇಲಾಖೆ ಮೂಲಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.