ಗೌರಿಬಿದನೂರು:ತಾಲ್ಲೂಕಿನ ಕೋಟಾಲದಿನ್ನೆ ಗ್ರಾಮದಲ್ಲಿ ನಾಯಿ ಕಡಿತಕ್ಕೆ ಸೂಕ್ತ ಚಿಕಿತ್ಸೆ ದೊರೆಯದೆ ಐದುವರ್ಷದ ಬಾಲಕನೊಬ್ಬ ಎರಡು ದಿನಗಳ ಹಿಂದೆ ಮೃತಪಟ್ಟಿದ್ದಾನೆ.
ಇದರಿಂದ ರೊಚ್ಚಿಗೆದ್ದ ಬಾಲಕನ ಪೋಷಕರು ಸೋಮವಾರ ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.
ಕೋಟಾಲದಿನ್ನೆಯ ಫೈರೋಜ್ ಹಾಗೂ ಫಾಮೀದಾ ದಂಪತಿ ಪುತ್ರ ಸಮೀರ್‌ಗೆ ಅ.30ರಂದು ನಾಯಿ ಕಚ್ಚಿತ್ತು. ಪೋಷಕರು ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚುಚ್ಚುಮದ್ದು ಕೊಡಿಸಿದ್ದರು. ಐದು ದಿನಗಳ ನಂತರ ಬಾಲಕನಿಗೆತೀವ್ರ ಜ್ವರ ಕಾಣಿಸಿಕೊಂಡಿದ್ದು ಗೌರಿಬಿದನೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ಇದೇ ಭಾನುವಾರ (ನ.13ರಂದು) ಮೃತಪಟ್ಟಿದ್ದಾನೆ.
ನಾಯಿ ಕಡಿತಕ್ಕೆ ಸರಿಯಾದ ಚುಚ್ಚುಮದ್ದು ನೀಡದ ಕಾರಣ ಮೆದುಳಿಗೆ ವಿಷವೇರಿ ಸಮೀರ್ ಮೃತಪಟ್ಟಿದ್ದಾನೆ ಎಂದುಇಂದಿರಾಗಾಂಧಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಹಾಗಾಗಿಮಗವಿಗೆ ನೀಡಿದ ಚುಚ್ಚುಮದ್ದಿನ ಮಾಹಿತಿ ನೀಡುವಂತೆ ಪೋಷಕರು ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಸಿಬ್ಬಂದಿಯನ್ನು ಕೇಳಿದರು. ಆಸ್ಪತ್ರೆಯ ದಾಖಲೆ ಪುಸ್ತಕದಲ್ಲಿ ಬಾಲಕನಿಗೆ ನೀಡಿದ ಚುಚ್ಚುಮದ್ದಿನ ಬಗ್ಗೆ ಮಾಹಿತಿಯನ್ನೇ ದಾಖಲಿಸಿಲ್ಲ.
ಇದರಿಂದ ಕೆರಳಿದ ಪೋಷಕರು ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಓ.ರತ್ನಮ್ಮ ಪೋಷಕರ ಮನವೊಲಿಸಿ, ಸಿಬ್ಬಂದಿ ವಿರುದ್ದ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.