ಗೌರಿಬಿದನೂರು: ನಗರದ ಬಿ.ಎಚ್. ರಸ್ತೆಯನ್ನು ಕಳೆದ 4-5 ವರ್ಷಗಳ ಹಿಂದೆ ಸುಸಜ್ಜಿತ ರಸ್ತೆಯಾಗಿಸಿ ಮಧ್ಯಭಾಗದಲ್ಲಿ ಬೃಹತ್ ವಿಭಜಕ ಅಳವಡಿಸಿ ಪಾದಚಾರಿಗಳ ಸಂಚಾರಕ್ಕೆ ಸಹಕಾರಿಯಾಗುವಂತೆ ಅಧಿಕಾರಿಗಳು ಫುಟ್‌ಪಾತ್ ನಿರ್ಮಾಣ ಮಾಡಿದ್ದಾರೆ. ಆದರೆ, ರಸ್ತೆಬದಿಯ ಕಟ್ಟಡದ ಮಾಲೀಕರು ಹಾಗೂ ಕೆಲವು ಅಂಗಡಿಗಳ ಮಾಲೀಕರು ಫುಟ್‌ಪಾತ್ ಅನ್ನು ಒತ್ತುವರಿ ಮಾಡಿಕೊಂಡು ನಾಗರಿಕರ ಸಂಚಾರಕ್ಕೆ ಸಂಚಕಾರ ತಂದಿದ್ದಾರೆ.
ಬಿ.ಎಚ್. ರಸ್ತೆಯ ಎರಡೂ ಬದಿಯಲ್ಲಿ ನಗರಸಭೆಯಿಂದ ವ್ಯವಸ್ಥಿತವಾದ ಫುಟ್‌ಪಾತ್ ನಿರ್ಮಾಣದ ಜತೆಗೆ ಕಬ್ಬಿಣದ ತಡೆಗೋಡೆ ನಿರ್ಮಾಣ ಮಾಡಿ ಪಾದಚಾರಿಗಳ ಸಂಚಾರಕ್ಕೆ ರಕ್ಷಣೆ ಒದಗಿಸಿದ್ದಾರೆ. ಆದರೆ, ಅಲ್ಲಿನ ಅಂಗಡಿ ಮಾಲೀಕರು ಸ್ವಹಿತಾಸಕ್ತಿಯಿಂದ ಕಬ್ಬಿಣದ ತಡೆಗೋಡೆಯನ್ನು ಮನಬಂದಂತೆ ತೆರವುಗೊಳಿಸಿ ತಮ್ಮ ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಫುಟ್‌ಪಾತ್‌ನಲ್ಲೇ ಸರಕು ಸಾಮಗ್ರಿಗಳನ್ನು ಇಟ್ಟುಕೊಂಡು ವ್ಯಾಪಾರಕ್ಕೆ ಮುಂದಾಗಿದ್ದಾರೆ.
ಇವೆಲ್ಲದರ ನಡುವೆ ನಗರದ ಶ್ರೀಕೃಷ್ಣ ಗ್ರ್ಯಾಂಡ್ ಹೋಟೆಲ್ ಮುಂಭಾಗದ ಪಾದಚಾರಿ ರಸ್ತೆಬದಿಯಲ್ಲಿ ಬೆಸ್ಕಾಂ ಇಲಾಖೆ ಅಳವಡಿಸಿರುವ ವಿದ್ಯುತ್ ಪರಿವರ್ತಕವನ್ನು ರಕ್ಷಣೆ ಮಾಡುವ ನೆಪದಲ್ಲಿನ ಇಲ್ಲಿನ ಕಟ್ಟಡದ ಮಾಲೀಕರು ಪಾದಚಾರಿ ರಸ್ತೆಯನ್ನು ಅತಿಕ್ರಮಿಸಿಕೊಂಡು ತಂತಿಬೇಲಿ ನಿರ್ಮಿಸಿದ್ದಾರೆ. ಇದರಿಂದ ನಾಗರಿಕರು ಸಂಚರಿಸಲು ಸಾಧ್ಯವಾಗದೆ ರಸ್ತೆಯಲ್ಲೇ ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ರಸ್ತೆಯುದ್ದಕ್ಕೂ ನಿತ್ಯ ಕಬ್ಬಿಣದ ಕಂಬಿ ತುಂಬಿದ ಲಾರಿಗಳು ಸಾಲುಗಟ್ಟಿ ನಿಂತಿರುತ್ತವೆ. ಇದರಿಂದಾಗಿ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಸಂಕಷ್ಟ ತಪ್ಪಿದ್ದಲ್ಲ ಎನ್ನುತ್ತಾರೆ ನಾಗರಿಕರು.
‘ಫುಟ್‌ಪಾತ್ ಪಕ್ಕದಲ್ಲಿರುವ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬೆಸ್ಕಾಂ ಇಲಾಖೆ ಅಳವಡಿಸಿರುವ ವಿದ್ಯುತ್ ಪರಿವರ್ತಕದ ಸಮೀಪದಲ್ಲಿ ಯಾವುದೇ ಅವಘಡ ನಡೆಯದಿರಲಿ ಹಾಗೂ ನಾಗರಿಕರಿಗೆ ತೊಂದರೆಯಾಗದಿರಲಿ ಎಂದು ಕಟ್ಟಡದ ಮಾಲೀಕರು ಸ್ಥಳದಲ್ಲಿ ತಂತಿಬೇಲಿ ನಿರ್ಮಾಣ ಮಾಡಿರುವುದಾಗಿ ತಿಳಿದುಬಂದಿದೆ. ಇದರಿಂದ ಪಾದಚಾರಿ ರಸ್ತೆಗೆ ತೊಂದರೆಯಾಗಿದ್ದರೆ ಕೂಡಲೇ ತೆರವುಗೊಳಿಸಲು ಮುಂದಾಗುತ್ತೇವೆ’ ಎಂದು ನಗರಸಭೆ ಪೌರಾಯುಕ್ತ ವಿ. ಸತ್ಯನಾರಾಯಣ
ತಿಳಿಸಿದರು.
‘ಕಟ್ಟಡ ಮಾಲೀಕರ ಮನವಿ ಮೇರೆಗೆ ಇಲಾಖೆಯಿಂದ ವಿದ್ಯುತ್ ಪರಿವರ್ತಕ ಅಳವಡಿಸಿದ್ದೇವೆ. ಆದರೆ, ಅದರ ರಕ್ಷಣೆಗಾಗಿ ತಂತಿಬೇಲಿ ನಿರ್ಮಿಸುವ ಕಾರ್ಯ ನಮ್ಮದಲ್ಲ. ಇದರ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಳ್ಳಲಾಗುವುದು’ ಎಂದುಬೆಸ್ಕಾಂ ಎಇಇ ವಿನಯ್ ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.