ಗೌರಿಬಿದನೂರು: ತಾಲ್ಲೂಕಿನ ಗಡಿಭಾಗವಾದ ಜಿ.ಕೊತ್ತೂರು ಚೆಕ್‌ಪೋಸ್ಟ್ ಬಳಿ ಶುಕ್ರವಾರ ರಾತ್ರಿ ಸುಮಾರು 400 ಬಾಟಲ್ ವಿದೇಶಿ ಮದ್ಯವನ್ನು ವಶಪಡಿಸಿಕೊಳ್ಳುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಚುನಾವಣಾ ನೀತಿಸಂಹಿತೆ ಜಾರಿ ಇರುವ ಕಾರಣ ತಾಲ್ಲೂಕಿನ ಗಡಿಭಾಗವಾದ ಜಿ.ಕೊತ್ತೂರು ಸಮೀಪದಲ್ಲಿ ನಿರ್ಮಾಣ ಮಾಡಿದ್ದ ಚೆಕ್‌ಪೋಸ್ಟ್ ಬಳಿ ಶುಕ್ರವಾರ ರಾತ್ರಿ ಮನೆಯ ಸಾಮಾನುಗಳನ್ನು ಸಾಗಿಸುವ ಮಧ್ಯೆ ಬುಲೆರೋ ವಾಹನದಲ್ಲಿ 360 ಮಿ.ಲೀ ಸಾಮರ್ಥ್ಯದ ಸುಮಾರು 400 ಮದ್ಯದ ಬಾಟಲಿಗಳನ್ನು ಸಾಗಿಸುತ್ತಿದ್ದು, ಅದರ ಮೌಲ್ಯ ₹3.30 ಲಕ್ಷ ಎಂದು ಅಂದಾಜಿಸಲಾಗಿದೆ.
ತಪಾಸಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದಿಲೀಪ್ ಅವರು ಸ್ಥಳಕ್ಕೆ ಆಗಮಿಸಿದ ವಾಹನವನ್ನು ತಪಾಸಣೆ ಮಾಡುವ ವೇಳೆ ಮದ್ಯ ದೊರೆತಿದೆ. ಕೂಡಲೇ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದು, ಪಿಎಸೈ ಭಾಸ್ಕರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ವಾಹನ ಚಾಲಕ ದೇವರಾಜ್ (48) ಅವರನ್ನು ಹಾಗೂ ವಾಹನದ ಸಮೇತ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.