ಶಿಡ್ಲಘಟ್ಟ: ದಸರಾ ರಜಾ ಮುಗಿಯುತ್ತಾ ಬಂದಿದೆ. ರಜೆಯಲ್ಲಿ ತಾಲ್ಲೂಕಿನ ಹಳ್ಳಿಗಳಲ್ಲಿ ಮಕ್ಕಳು ಕುರುಚಲು ಪೊದೆಗಳ ನಡುವೆ ಕಾಡು ಹಣ್ಣುಗಳನ್ನು ಹುಡುಕಿ ತಿನ್ನುವುದು ಕಂಡುಬರುತ್ತಿತ್ತು. ಕಾರೆ ಹಣ್ಣು ಮತ್ತು ಮಿಂಡಿ (ಮಿಲ್ಡಿ) ಹಣ್ಣು ಅಂದರೆ ಮಕ್ಕಳ ಬಾಯಲ್ಲಿ ನೀರೂರುತ್ತದೆ. ಎರಡೂ ಮುಳ್ಳು ಗಿಡಗಳಾದರೂ ಮಕ್ಕಳು ಅವುಗಳನ್ನು ಉಪಾಯವಾಗಿ ಬಿಡಿಸಿಕೊಂಡು ಹಣ್ಣು ಮಾಡಿಕೊಂಡು ತಿನ್ನುವುದನ್ನು ಹಿರಿಯರಿಂದ ಕಲಿತಿದ್ದಾರೆ.
ಕಾರೆ, ಚೂಪಾದ ಮುಳ್ಳಿನ ಪೊದೆ. ಎಚ್ಚರ ತಪ್ಪಿದರೆ ಕೈ ಕಾಲಿಗೆ ಮುಳ್ಳು ಚುಚ್ಚುತ್ತದೆ. ಹಸಿರು ಕಾಯಿ, ಹಳದಿ ಬಣ್ಣಕ್ಕೆ ತಿರುಗಿ, ಕಾಫಿ ಬಣ್ಣದಲ್ಲಿ ಹಣ್ಣಾದಾಗ ತಿನ್ನಲು ಬಲು ರುಚಿಕರ. ಹಣ್ಣು ಹೆಚ್ಚು ಮೃದುವಾದ್ದರಿಂದ ಕಿತ್ತು ಮನೆಗೆ ತರಲಾಗದು ಎಂದು ಅಲ್ಲಲ್ಲೇ ಕಿತ್ತು ಬಾಯಿಗೆ ಹಾಕಿಕೊಳ್ಳುವುದು ರೂಢಿ.
ಮಕ್ಕಳು ಹಳದಿ ಬಣ್ಣದ ದೋರೆಕಾಯಿಗಳನ್ನು ಬಿಡಿಸಿ ತಮ್ಮ ಜಾಮಿಟ್ರಿ ಬಾಕ್ಸ್‌ನಲ್ಲಿ ತುಂಬಿಕೊಂಡು ಮನೆಗೆ ತರುತ್ತಾರೆ. ಮುಚ್ಚಿಟ್ಟು ಹಣ್ಣು ಮಾಡಿಕೊಂಡು ಚಪ್ಪರಿಸುತ್ತಾರೆ. ಕಾರೆಹಣ್ಣು ತಿನ್ನಲು ರುಚಿಯಾಗಿರುತ್ತದೆ. ಕೆಲವರು ಗೊರಜು ಕಲ್ಲು ಸೇರಿಸಿ ಅವನ್ನು ಹಣ್ಣು ಮಾಡುತ್ತಾರೆ. ಮನೆ ಸೇರಿದ ಹಣ್ಣನ್ನು ಹಿರಿಯರೂ ಸವಿಯುತ್ತಾರೆ.
ಕಾರೆಗಿಡದ ಸೊಪ್ಪೆಂದರೆ ಮೇಕೆಗಳಿಗೆ ಬಲು ಇಷ್ಟ. ಮುಳ್ಳುಗಳ ನಡುವಿನ ಸೊಪ್ಪನ್ನು, ಮುಳ್ಳು ಸೋಕದಂತೆ ಆಡುಗಳು ತಿನ್ನುವುದಂತೂ ಅಚ್ಚರಿ ಮೂಡಿಸುತ್ತದೆ.
ಮಿಂಡಿ (ಮಿಲ್ಡಿ) ಹಣ್ಣು ನೇರಳೆಗೆಂಪು ಬಣ್ಣವಿದ್ದಾಗ ಹುಳಿಯಾಗಿದ್ದರೆ, ನೇರಳೆ ಕಪ್ಪು ಬಣ್ಣವಾದಾಗ ಸಿಹಿ ಮತ್ತು ಸ್ವಲ್ಪ ಹುಳಿಯಿರುತ್ತದೆ. ಈ ಹಣ್ಣನ್ನು ತಿನ್ನುವಾಗ ಹುರಿದ ಹುರಳಿ ತಿನ್ನುವಂತೆ ಶಬ್ದ ಬರುತ್ತದೆ. ಬೊಗಸೆ ತುಂಬ ಹಣ್ಣನ್ನು ತುಂಬಿಕೊಂಡು ಬಾಯಿಗೆ ಹಾಕಿಕೊಂಡು ಮಕ್ಕಳು ಇದರೊಳಗಿನ ಸಣ್ಣ ಬೀಜವನ್ನೂ ಸೇರಿಸಿಕೊಂಡು ಕರಕರನೆ ತಿನ್ನುವರು. ಮಿಂಡಿಹಣ್ಣಿನ ಗಿಡಕ್ಕೆ ಹುಳುಗಳ ಕಾಟ ಹೆಚ್ಚು. ಅದಕ್ಕಾಗಿ ಈ ಹಣ್ಣುಗಳನ್ನು ಉಪ್ಪುನೀರಿನಲ್ಲಿ ನೆನೆಸಿ ನಂತರ ತಿನ್ನುವ ರೂಢಿಯಿದೆ.
ಅಪರೂಪವಾದ ಹಣ್ಣುಗಳು
‘ಎತ್ತರವಾಗಿ ಬೆಳೆದ ಕಾರೆ ಗಿಡದ ಕೊಂಬೆಗಳನ್ನು ಕತ್ತರಿಸಿ ಕಣದಲ್ಲಿ ರಾಗಿ ಹುಲ್ಲು ಸವರಲು ಬಳಸುತ್ತಿದ್ದೆವು. ಗುಬ್ಬನ್ನು ತೆಗೆದು ಕಾಳು ವಿಂಗಡಿಸಲೂ ಕಾರೆ ಮುಳ್ಳುಕಡ್ಡಿ ಉಪಯುಕ್ತ. ಹಿಂದೆ ಎಲ್ಲೆಲ್ಲೂ ಕಂಡುಬರುತ್ತಿದ್ದ ಕಾರೆ ಪೊದೆಗಳ ಸಂಖ್ಯೆ ಇಳಿಮುಖವಾಗಿವೆ. ಅಲ್ಲಲ್ಲಿ ಹಸಿರು ಬೇಲಿಗಳಲ್ಲಿ ಮಾತ್ರ ತಮ್ಮ ಅಸ್ತಿತ್ವ ಕಂಡುಕೊಂಡಿವೆ. ಕಾರೆ ಹಣ್ಣು ಒತ್ತಾಗಿ ಬಿಟ್ಟರೆ ಭತ್ತ ಸಮೃದ್ಧವಾಗಿ ಎಂಬ ನಂಬಿಕೆ ಹಿಂದೆ ಕೃಷಿ ವಲಯದಲ್ಲಿತ್ತು. ಆದರೆ ಈಗ ಮಳೆ ಕೊರತೆಯಿಂದಾಗಿ ಗದ್ದೆ ಬಯಲಿನ ಬೇಸಾಯ ಸಂಪೂರ್ಣ ನಿಂತಿದೆ. ಮಿಂಡಿಹಣ್ಣುಗಳ ಪೊದೆಗಳೂ ಈಗ ಅಪರೂಪವಾಗಿವೆ’ ಎಂದು ತಾದೂರು ಮಂಜುನಾಥ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.