ಶಿಡ್ಲಘಟ್ಟ: ‘ಬೀದಿ ನೆಂಟ’ ಎಂದೇ ಪರಿಗಣಿಸುವ ಬುಡುಬುಡಿಕೆಯವರು ಈಗ ಸಂತೆಯ ದಿನಗಳಲ್ಲಿ ಕಂಡು ಬರುತ್ತಾರೆ. ಸಂತೆ ದಿನವಾದ ಸೋಮವಾರ ನಗರದಲ್ಲಿ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದ ವೆಂಕಟೇಶ ಬುಡುಬುಡಿಕೆ ವೇಷ ಧರಿಸಿ ಸುತ್ತಾಡಿದರು.
ಹಣೆಗೆ ಕಾಶೀ ಭಂಡಾರ, ಕೆಂಪು ಪೇಟ, ತಲೆಯಿಂದ ಗಡ್ಡದವರೆಗೆ ಅಡ್ಡಪಟ್ಟಿ, ಕಚ್ಚೆ ಪಂಚೆ, ಷರಟು, ಕೋಟು ಧರಿಸಿದ್ದಾರೆ. ಹೆಗಲ ಮೇಲೆ ವಿವಿಧ ಬಣ್ಣದ ವಸ್ತ್ರ ಹಾಕಿಕೊಂಡು, ಸೊಂಟಕ್ಕೆ ಕೆಂಪು ವಸ್ತ್ರವನ್ನು ಕಟ್ಟಿಕೊಂಡು ಬರುವ ವೆಂಕಟೇಶ, ‘ಜಯವಾಗಲಿ ಸ್ವಾಮಿ ಜಯವಾಗಲಿ’ ಎನ್ನುತ್ತಾ ಶಕುನ ನುಡಿಯುವರು.
‘ಶ್ರೀಕೃಷ್ಣನ ಅನುಗ್ರಹದವರು ಸ್ವಾಮಿ ನಾವು, ರಾಕ್ಷಸರ ಸಂಹರಿಸಲು ಒಮ್ಮೆ ಶ್ರೀಕೃಷ್ಣ ಬುಡುಬುಡಿಕೆ ವೇಷ ಧರಿಸಿದ್ದ. ಅವನ ಕಾರ್ಯ ಮುಗಿದ ಮೇಲೆ ನಮ್ಮ ಕುಲದವರಿಗೆ ಜೀವನ ನಡೆಸಲು ಬುಡುಬುಡಿಕೆ ಕೊಟ್ಟನಂತೆ. ಈ ವೃತ್ತಿ ನಿಲ್ಲಿಸಿದರೆ ಕೆಡುಕಾಗುತ್ತದೆ ಎಂದಿದ್ದನಂತೆ. ನಮ್ಮ ಕುಟುಂಬದಲ್ಲಿ ಈ ವೃತ್ತಿ ಉಳಿಸಿಕೊಂಡವನು ನಾನೊಬ್ಬನೇ, ಇತರರು ಬೇರೆ ವೃತ್ತಿ ಮಾಡುವರು. ಮಕ್ಕಳಿಗೆ ಇದು ಬೇಕಿಲ್ಲ. ನಾನೂ ಜಮೀನಿನ ಮೇಲೆ ಅವಲಂಬಿತನಾಗಿರುವೆ. ಬಿಡಬಾರದು ಎಂದು ಸಂತೆಯ ದಿನ ಕಾಯಕ ಮಾಡುತ್ತೇನೆ’ ಎಂದು ವೆಂಕಟೇಶ ವಾಸ್ತವವನ್ನು ಬಿಚ್ಚಿಟ್ಟರು.
ಬುಡುಬುಡಿಕೆ ಒಂದು ಚರ್ಮವಾದ್ಯ. ಅದನ್ನು ‘ಕಿರಿ ಡಮರುಗ’ ಎನ್ನಬಹುದು. ಮೂರು ನಾಲ್ಕು ಅಂಗುಲ ಉದ್ದದ ಮರದ ಹೊಳಲಿನ ಎರಡು ಪಕ್ಕಗಳಿಗೂ ಹದ ಮಾಡಿದ ತೆಳು ಚರ್ಮವನ್ನು ಬಿಗಿದು ಕಟ್ಟಿ ರೂಪಿಸಿರುತ್ತಾರೆ. ಹೊಳಲಿನ ನಡು ಸಣ್ಣದಾಗಿರುತ್ತದೆ. ಚರ್ಮ ಬಿಗಿಯಲು ಕಟ್ಟಿದ ದಾರಗಳ ಸಂಗಮ ಮಾಡುವುದು ಇಲ್ಲೇ. ಈ ನಡುವನ್ನು ಹಿಡಿದು ಬುಡುಬುಡಿಕೆ ಬಾರಿಸುವುದು. ಈ ನಡುವಿಗೆ ತಲಾ ಸುಮಾರು ಮೂರ೦ಗುಲ ಉದ್ದದ ಎರಡು ಗಟ್ಟಿ ದಾರಗಳನ್ನು ಕಟ್ಟಿ ಬಿಟ್ಟಿರುತ್ತಾರೆ. ಈ ದಾರಗಳ ತುದಿಯನ್ನು ಗುಂಡಾಗಿರುವಂತೆ ಗಂಟು ಹಾಕಿರಲಾಗುತ್ತದೆ. ನಡುವಿಗೆ ಸರಿಯಾಗಿ ಬಣ್ಣದ ಒಂದು ಕರವಸ್ತ್ರ ಇಳಿ ಬಿದ್ದಿರುತ್ತದೆ. ಬುಡುಬುಡಿಕೆ ಬಾರಿಸುವವನು ಈ ನಡುವನ್ನು ಹಿಡಿದು ಕೈ ಸ್ವಲ್ಪ ಮೇಲೆತ್ತಿ ಅಲ್ಲಾಡಿಸುತ್ತಿದ್ದರೆ ಮಧ್ಯೆ ಇಲ್ಲಿ ಬಿಟ್ಟ ದಾರದ ಗಂಟುಗಳು ಎರಡು ಪಕ್ಕದ ಚರ್ಮಕ್ಕೆ ಬಡಿದು ಸೊಗಸಾದ ನಾದ ಹೊರ ಹೊಮ್ಮಿಸುತ್ತವೆ.
‘ಹಳ್ಳಿಗಳಲ್ಲಿ ನಾವು ನುಡಿಯುವ ಶಕುನದ ಬಗ್ಗೆ ನಂಬಿಕೆಯಿತ್ತು. ದವಸ, ಧಾನ್ಯ, ಬಟ್ಟೆ ಬರೆ, ಹಣ ನೀಡುತ್ತಿದ್ದರು. ಆದರೆ, ಈಗ ಹಿಂದಿನಂತಿಲ್ಲ. ಇದನ್ನು ನಂಬಿ ಜೀವನ ಸಾಗದು. ಶಕುನದ ಕಲ್ಲಿ ಹಾಲಕ್ಕಿ ಭಾಷೆಯನ್ನು ಅರಿತು ಶುಭಾಶುಭಗಳನ್ನು ಹೇಳುವುದು, ಶಾಂತಿ ಪರಿಹಾರವನ್ನು ಸೂಚಿಸುವ ಪವಿತ್ರ ವೃತ್ತಿ ನಮ್ಮದು. ಕಾಲದ ಮಾತನ್ನು ನಾವೂ ಕೇಳಬೇಕಲ್ಲ. ಎಲ್ಲರ ಭವಿಷ್ಯ ನುಡಿಯುವ ನಮ್ಮ ಭವಿಷ್ಯ ಅಷ್ಟೇನೂ ಚೆನ್ನಾಗಿಲ್ಲ’ ಎಂದು ವೆಂಕಟೇಶ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.