ADVERTISEMENT

‘ಮುಖ್ಯಶಿಕ್ಷಕನಿಂದ ವಂಚನೆ, ಲೈಂಗಿಕ ಕಿರುಕುಳ’

ಚಿಂತಾಮಣಿ ಡಿಲಿಜೆನ್ಸ್‌ ಸಂಯುಕ್ತ ಅನುದಾನಿತ ಶಾಲೆಯ ಮುಖ್ಯಶಿಕ್ಷಕ ಕೆ.ಎಂ.ಸುಬ್ಬಾರೆಡ್ಡಿ ವಿರುದ್ಧ ಸಹಶಿಕ್ಷಕಿ ಕಲ್ಪನಾ ಆರೋಪ, ಆರೋಪ ಅಲ್ಲಗಳೆದ ಶಿಕ್ಷಕ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 9:56 IST
Last Updated 5 ಜುಲೈ 2018, 9:56 IST

ಚಿಕ್ಕಬಳ್ಳಾಪುರ: ‘ಚಿಂತಾಮಣಿ ತಾಲ್ಲೂಕಿನ ಡಿಲಿಜೆನ್ಸ್‌ ಸಂಯುಕ್ತ (ಅನುದಾನಿತ) ಪ್ರೌಢಶಾಲೆಯ ಮುಖ್ಯಶಿಕ್ಷಕ ಕೆ.ಎಂ.ಸುಬ್ಬಾರೆಡ್ಡಿ ಅವರು ನನ್ನ ಹುದ್ದೆಯನ್ನು ವೇತನ ಅನುದಾನಕ್ಕೆ ಒಳಪಡಿಸುವುದಾಗಿ ಹೇಳಿ ₨5 ಲಕ್ಷ ಹಣ ಪಡೆದುಕೊಂಡು ವಂಚನೆ ಮಾಡಿದ್ದಾರೆ. ಜತೆಗೆ ಲೈಂಗಿಕ ಕಿರುಕುಳ ಸಹ ನೀಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಜಾತಿ ನಿಂದನೆ ಮಾಡಿದ್ದಾರೆ’ ಎಂದು ಶಾಲೆಯ ಸಹಶಿಕ್ಷಕಿ ಕಲ್ಪನಾ ಆರೋಪಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2016ರ ಫೆಬ್ರುವರಿ 10 ರಿಂದ ನಾನು ಡಿಲಿಜೆನ್ಸ್ ಶಾಲೆಯಲ್ಲಿ ಕೆಲಸಕ್ಕೆ ಸೇರಿದೆ. ಈ ವೇಳೆ ಸುಬ್ಬಾರೆಡ್ಡಿ ಅವರು ನನ್ನ ಹುದ್ದೆಯನ್ನು ವೇತನಾನುದಾನಕ್ಕೆ ಒಳಪಡಿಸುವುದಾಗಿ ಹೇಳಿ ಅದಕ್ಕಾಗಿ ₨10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಆ ಪೈಕಿ ಮುಂಗಡವಾಗಿ ಕೆಲಸ ಸೇರುವಾಗ ₨1 ಲಕ್ಷ ಬಳಿಕ 2017ರ ಸೆಪ್ಟೆಂಬರ್‌ 6 ರಂದು ₨4 ಲಕ್ಷವನ್ನು ಸುಬ್ಬಾರೆಡ್ಡಿ ಅವರಿಗೆ ನೀಡಿದ್ದೇನೆ’ ಎಂದು ಹೇಳಿದರು.

‘ಕೆಲಸಕ್ಕೆ ಸೇರುತ್ತಿದ್ದಂತೆ ಸುಬ್ಬಾರೆಡ್ಡಿ ಅವರು ನನಗೆ ಪ್ರೌಢಶಾಲೆಯಲ್ಲಿ ಕೆಲ ಶಿಕ್ಷಕರು ಕೆಲವೇ ದಿನಗಳಲ್ಲಿ ನಿವೃತ್ತಿಯಾಗಲಿದ್ದಾರೆ. ಆ ಸ್ಥಾನಗಳಿಗೆ ನಿಮ್ಮನ್ನು ನೇಮಕ ಮಾಡಲಾಗುವುದು. ಅಲ್ಲಿಯವರೆಗೆ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕೆಲಸ ಮಾಡುವಂತೆ ಸೂಚಿಸಿದರು. ಜತೆಗೆ ಕಚೇರಿ ಕೆಲಸಗಳನ್ನು ಮಾಡಿಸಿಕೊಂಡರು’ ಎಂದು ದೂರಿದರು.

ADVERTISEMENT

‘ಆರಂಭದ ಮೂರು ತಿಂಗಳು ಕೇವಲ ₨2 ಸಾವಿರ ಸಂಬಳ ನೀಡಿದರು. ಬಳಿಕ ಅದನ್ನು ₨3 ಸಾವಿರಕ್ಕೆ ಹೆಚ್ಚಳ ಮಾಡಿದರು. ಅಲ್ಲದೇ ಉದ್ದೇಶ ಪೂರ್ವಕವಾಗಿ ಕಚೇರಿ ಕೆಲಸಕ್ಕೆ ಕರೆಯಿಸಿಕೊಂಡು ನಾನು ಒಂಟಿಯಾಗಿ ಸಂದರ್ಭದಲ್ಲಿ ನನ್ನ ಬಳಿ ಬಂದು ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಅದಕ್ಕೆ ನಾನು ಸಹಕರಿಸದೆ ಹೋದ ಕಾರಣಕ್ಕೆ ನನ್ನ ಕಡತವನ್ನು ಶಿಕ್ಷಣ ಇಲಾಖೆಗೆ ಕಳುಹಿಸಿ ಕೊಡಲಿಲ್ಲ’ ಎಂದು ಆರೋಪಿಸಿದರು.

‘ಸುಬ್ಬಾರೆಡ್ಡಿ ಅವರು ಕೆಲವೇ ತಿಂಗಳಲ್ಲಿ ನಿವೃತ್ತಿಯಾಗುತ್ತಿದ್ದಾರೆ ಎನ್ನುವುದು ತಿಳಿಯುತ್ತಿದ್ದಂತೆ, ಕಳೆದ ಜೂನ್‌ 18 ರಂದು ಅವರನ್ನು ₨5 ಲಕ್ಷವನ್ನು ವಾಪಸ್ ನೀಡುವಂತೆ ಕೇಳಿದರೆ, ಹಣ ನೀಡಿರುವ ಬಗ್ಗೆ ನಿಮ್ಮಲ್ಲಿ ಏನು ಸಾಕ್ಷಿ ಇದೆ ಎಂದು ಪ್ರಶ್ನಿಸುವ ಜತೆಗೆ ಜಾತಿನಿಂದನೆಯನ್ನು ಸಹ ಮಾಡಿ, ಕೆಲಸದಿಂದ ತೆಗೆದು ಹಾಕಿದರು. ಇದರಿಂದ ಮನನೊಂದು ನಾನು ಆತ್ಮಹತ್ಯೆಗೆ ಸಹ ಯತ್ನಿಸಿದ್ದೆ. ಸಕಾಲಕ್ಕೆ ನನ್ನ ಪತಿ ರಕ್ಷಿಸಿದ ಕಾರಣ ಬದುಕಿಕೊಂಡೆ’ ಎಂದು ತಿಳಿಸಿದರು.

‘ಸುಬ್ಬಾರೆಡ್ಡಿ ಅವರ ವಂಚನೆ ವಿರುದ್ಧ ಈಗಾಗಲೇ ಚಿಂತಾಮಣಿ ನಗರ ಪೊಲೀಸ್‌ ಠಾಣೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದರೂ ಯಾರೊಬ್ಬರೂ ಕ್ರಮ ಕೈಗೊಂಡಿಲ್ಲ. ಇದೀಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿ, ನನಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದೇನೆ. ಅವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ಕಲ್ಪನಾ ಪತಿ ಚಂದ್ರಶೇಖರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.