ಚಿಕ್ಕಬಳ್ಳಾಪುರ: ದೇಶದ ಮೊದಲ ಉಚಿತ ವೈದ್ಯಕೀಯ ಶಿಕ್ಷಣ ಕಾಲೇಜು ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಕಾರ್ಯಾರಂಭ ಮಾಡಿದೆ.
ಪ್ರಸಕ್ತ (2023-24) ಶೈಕ್ಷಣಿಕ ಸಾಲಿನಿಂದಲೇ ವೈದ್ಯಕೀಯ ಕಾಲೇಜು ಆರಂಭಗೊಳ್ಳಲಿದ್ದು, ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಕಾಲೇಜಿನಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೇವೆ ಸಂಪೂರ್ಣವಾಗಿ ಉಚಿತ.
ಸತ್ಯಸಾಯಿ ಸರಳ ಸ್ಮಾರಕ ಆಸ್ಪತ್ರೆಯಲ್ಲಿ ಯಾವುದೇ ಚಿಕಿತ್ಸೆ ಇರಲಿ ಒಂದು ಪೈಸೆ ಶುಲ್ಕವನ್ನೂ ಪಡೆಯುವುದಿಲ್ಲ. ಇಲ್ಲಿ ಎಲ್ಲವೂ ಉಚಿತ. ‘ಇಲ್ಲಿ ಎಲ್ಲ ಸೇವೆಗಳು ಉಚಿತ. ಹಾಗಾಗಿ ಬಿಲ್ ಕೌಂಟರ್ ಇಲ್ಲ’ ಎಂದೇ ಫಲಕಗಳನ್ನು ಹಾಕಲಾಗಿದೆ.
ಸತ್ಯಸಾಯಿ ಗ್ರಾಮದಲ್ಲಿ ₹400 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಲೋಕಾರ್ಪಣೆ ಮಾಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2022ರ ಏ. 1ರಂದು ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. 3,25,000 ಚದರ ಅಡಿ ವಿಸ್ತಾರದಲ್ಲಿ ಆಸ್ಪತ್ರೆ, ಬೋಧನಾ ವಿಭಾಗ, ವಿದ್ಯಾರ್ಥಿ ನಿಲಯ, ಸಭಾಭವನ, ನೌಕರರ ವಸತಿಗೃಹಗಳು ಮತ್ತು ಕ್ರೀಡಾ ಸೌಲಭ್ಯ ಒಳಗೊಂಡಿದೆ.
ವೈದ್ಯಕೀಯ ಪದವಿ ಕೋರ್ಸ್ ಪ್ರವೇಶ ಅರ್ಹತೆ ನಿರ್ಧರಿಸುವ ಎನ್‌ಇಇಟಿ (ನೀಟ್) ಅರ್ಹತೆಗಳಿಸಿದ ವಿದ್ಯಾರ್ಥಿಗಳು ಉಟ್ಟ ಬಟ್ಟೆಯಲ್ಲಿ ಕಾಲೇಜಿಗೆ ಬಂದರೆ ಸಾಕು. ಉಳಿದೆಲ್ಲ ಅವಶ್ಯಕತೆಗಳನ್ನೂ ಕಾಲೇಜಿನ ಸ್ಥಾಪಕ ಸಂಸ್ಥೆಯಾದ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ನೋಡಿಕೊಳ್ಳುತ್ತದೆ.
ಇದಕ್ಕೆ ತಗುಲಿದ ಎಲ್ಲ ವೆಚ್ಚವನ್ನೂ ಪ್ರಪಂಚದಾದ್ಯಂತ ಇರುವ ಸಮಾನಮನಸ್ಕರ ಬೆಂಬಲದಿಂದ ಭರಿಸಲಾಗುತ್ತದೆ. ಯಾವುದೇ ಲಾಭದ ಒತ್ತಡ ಇಲ್ಲದಿರುವುದರಿಂದ, ಇದೊಂದು ಮಾದರಿಯ ವೈದ್ಯಕೀಯ ಶಿಕ್ಷಣ ಸಂಸ್ಥೆಯಾಗಿದೆ.
ಕಾಲೇಜು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ‘ಸತ್ಯಸಾಯಿ ಗ್ರಾಮವು ದೇಶಕ್ಕೆ ಸೇವೆಯ ಒಂದು ಅದ್ಭುತ ಮಾದರಿಯನ್ನು ಕೊಟ್ಟಿದೆ. ಪೌಷ್ಟಿಕತೆ, ಶಿಕ್ಷಣ ಹಾಗೂ ಆರೋಗ್ಯ ಸೇವಾ ಕ್ಷೇತ್ರಗಳಲ್ಲಿ ಇಲ್ಲಿ ನಡೆಯುತ್ತಿರುವ ನಿಸ್ವಾರ್ಥ ಸೇವೆಗಳು ನಿಜಕ್ಕೂ ಪ್ರಶಂಸಾರ್ಹ ’ ಎಂದು ಆಶಿಸಿದರು.
ವೈದ್ಯಳಾಗುವ ವಿದ್ಯಾರ್ಥಿನಿಯ ಹಂಬಲವೇ ಈ ಕಾಲೇಜಿಗೆ ಮುನ್ನುಡಿ
‘ಏಳು ವರ್ಷಗಳ ಹಿಂದೆ ನಮ್ಮ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಹುಡುಗಿಯೊಬ್ಬಳು ಹಳ್ಳಿಯ ಜನರಿಗೆ ಸೇವೆ ಮಾಡಬೇಕು. ಇದಕ್ಕಾಗಿ ವೈದ್ಯಳಾಗಬೇಕು ಎಂದು ಆಸೆ ವ್ಯಕ್ತಪಡಿಸಿದ್ದಳು. ನಾವು ಅವಳ ಪ್ರಾಮಾಣಿಕ ಉದ್ದೇಶ ಮೆಚ್ಚಿದೆವು. ಅವಳಿಗೆ ವೈದ್ಯಕೀಯ ಶಿಕ್ಷಣ ಕೊಡಿಸಿದೆವು.
ಇಂದು ಅವಳು ಒಬ್ಬ ವೈದ್ಯೆಯಾಗಿ ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಳೆ’ ಎಂದು ಸತ್ಯಸಾಯಿ ಗ್ರಾಮದ ಸದ್ಗುರು ಮಧುಸೂದನ ಸಾಯಿ ಹೇಳುತ್ತಾರೆ.
ಹಾಗಾಗಿ ವೈದ್ಯಕೀಯ ಶಿಕ್ಷಣ ಮತ್ತು ಸೇವೆಯ ಆಸಕ್ತಿಯುಳ್ಳ, ಶಿಕ್ಷಣ ವೆಚ್ಚ ಭರಿಸಲು ಸಾಧ್ಯವಾಗದ ಗ್ರಾಮೀಣ ವಿದ್ಯಾರ್ಥಿಗಳಿಗೂ ಉಚಿತ ವೈದ್ಯಕೀಯ ಶಿಕ್ಷಣ ಸೌಲಭ್ಯ ವಿಸ್ತರಿಸಲು ನಿರ್ಧರಿಸಿದೆವು. ಅದರ ಫಲವಾಗಿ ಉಚಿತ ವೈದ್ಯಕೀಯ ಕಾಲೇಜು ನಿರ್ಮಾಣವಾಗಿದೆ. ಸರ್ಕಾರ, ಸಮಾಜ ಮತ್ತು ಸಂಸ್ಥೆ ಜೊತೆಯಾದರೆ ಏನನ್ನು ಬೇಕಾದರೂ ಸಾಧಿಸಬಹುದು. ಇದಕ್ಕೆ ಕಾಲೇಜು ನಿದರ್ಶನ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.