ADVERTISEMENT

ಚಿಕ್ಕಬಳ್ಳಾಪುರ: ಗಂಟ್ಲಮಲ್ಲಮ್ಮ ಡ್ಯಾಂ ನಿರ್ಮಾಣಕ್ಕೆ ಕಾಲ ಸನ್ನಿಹಿತ

ಚೇಳೂರು, ಪಾತಪಾಳ್ಯ ಭಾಗಕ್ಕೆ ಅನುಕೂಲ; ₹ 120 ಕೋಟಿ ವೆಚ್ಚದಲ್ಲಿ ಡಿಪಿಆರ್

​ಪ್ರಜಾವಾಣಿ ವಾರ್ತೆ
Published 29 ಮೇ 2024, 6:19 IST
Last Updated 29 ಮೇ 2024, 6:19 IST
ಬಾಗೇಪಲ್ಲಿ ತಾಲ್ಲೂಕಿನ ಗಂಟ್ಲಮಲ್ಲಮ್ಮ ಕಣಿವೆಯ ನೋಟ
ಬಾಗೇಪಲ್ಲಿ ತಾಲ್ಲೂಕಿನ ಗಂಟ್ಲಮಲ್ಲಮ್ಮ ಕಣಿವೆಯ ನೋಟ   

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲ್ಲೂಕಿನ ವಿಶೇಷವಾಗಿ ಪಾತಪಾಳ್ಯ ಮತ್ತು ಚೇಳೂರು ಭಾಗದ ಜನರ ಬಹುಕಾಲದ ಬೇಡಿಕೆಯಾದ ಗಂಟ್ಲಮಲ್ಲಮ್ಮ ಅಣೆಕಟ್ಟೆ ನಿರ್ಮಾಣಕ್ಕೆ ಕಾಲ ಸನ್ನಿಹಿತವಾಗಿದೆ.

ಅಣೆಕಟ್ಟೆ ನಿರ್ಮಾಣಕ್ಕೆ ₹ 120 ಕೋಟಿಯ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗಿದೆ. ವಿಶ್ವೇಶ್ವರಯ್ಯ ಜಲ ನಿಗಮದಿಂದ ಈ ಡಿಪಿಆರ್ ಸಿದ್ಧವಾಗಿದ್ದು ಡಿಪಿಆರ್‌ಗಾಗಿಯೇ  ₹ 48 ಲಕ್ಷವನ್ನು ವ್ಯಯಿಸಲಾಗಿದೆ. 

ಲೋಕಸಭೆ  ಚುನಾವಣೆಯ ನೀತಿ ಸಂಹಿತೆ ತೆರವಾದ ತಕ್ಷಣವೇ ಸರ್ಕಾರದಿಂದ ಈ ಯೋಜನೆಗೆ ಅನುಮೋದನೆ ದೊರೆಯುವುದು ಖಚಿತ. ನಿಗಮದ ಮೊದಲ ಸಭೆಯಲ್ಲಿ ಈ ವಿಚಾರ ಅನುಮೋದನೆಗೊಳ್ಳಲಿದೆ ಎನ್ನುತ್ತವೆ ಮೂಲಗಳು. 

ADVERTISEMENT

ಪಾತಪಾಳ್ಯ ಮಾರ್ಗವಾಗಿ ಬಾಗೇಪಲ್ಲಿಗೆ ಸಂಚರಿಸುವಾಗ ಪಾತಕೋಟೆ ಗ್ರಾಮವಿದೆ. ಈ ಗ್ರಾಮದ ಬಳಿಯ ಗಂಟ್ಲಮಲ್ಲಮ್ಮ ಕಣಿವೆಯಲ್ಲಿ ನೀರು ವ್ಯರ್ಥವಾಗಿ ಹರಿಯುತ್ತಿದೆ. ಕಣಿವೆ ಮಧ್ಯದಲ್ಲಿ ಎರಡು ಕಡೆ ಬೆಟ್ಟಗುಡ್ಡಗಳು ಇವೆ. ಬೆಟ್ಟಗುಡ್ಡಗಳಿಂದ ಹರಿದು ನೀರು ಕಣಿವೆ ಸೇರುತ್ತಿವೆ.

ಇಲ್ಲಿ ಅಣೆಕಟ್ಟು ನಿರ್ಮಿಸಿದರೆ ಸಂಗ್ರಹವಾಗುವ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಪಾತಪಾಳ್ಯಕ್ಕೆ ನೀಡಬಹುದು. ಅಂತರ್ಜಲ ಸಹ ಅಭಿವೃದ್ಧಿಗೊಳ್ಳುತ್ತದೆ. ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ಅವರು ಈ ಹಿಂದಿನಿಂದಲೂ ಗಂಟ್ಲಮಲ್ಲಮ್ಮ ಅಣೆಕಟ್ಟೆ ನಿರ್ಮಾಣದ ಬಗ್ಗೆ ಆಸಕ್ತರಾಗಿದ್ದರು. ಚುನಾವಣೆಯ ಸಂದರ್ಭದಲ್ಲಿ ಈ ಯೋಜನೆಯ ಬಗ್ಗೆ ಮಾತನಾಡುತ್ತಿದ್ದರು.

ಅಣೆಕಟ್ಟೆ ನಿರ್ಮಾಣಕ್ಕೆ ಕೆಲವು ವರ್ಷಗಳ ಹಿಂದೆ ₹ 20 ಕೋಟಿ ವೆಚ್ಚದಲ್ಲಿ ಡಿಪಿಆರ್ ಸಹ ಸಿದ್ಧಪಡಿಸಲಾಗಿತ್ತು. ಮೊದಲ ಡಿಪಿಆರ್ ಪ್ರಕಾರ ಕಣಿವೆಯ ಆರಂಭದಲ್ಲಿಯೇ ಅಣೆಕಟ್ಟೆ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಅರಣ್ಯ ಇಲಾಖೆಯ ಜಮೀನು ಹೆಚ್ಚು ಬಳಕೆ ಆಗುತ್ತಿತ್ತು. ಇಲಾಖೆ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡಲು ಮೀನಮೇಷ ಎಣಿಸಿತು. ಈ ಎಲ್ಲ ಕಾರಣದಿಂದ ಯೋಜನೆಗೆ ಗ್ರಹಣ ಹಿಡಿಯಿತು. 

ಈಗ ಎರಡನೇ ಬಾರಿಗೆ ಡಿಪಿಆರ್ ಸಿದ್ಧವಾಗಿದೆ. ಶಾಸಕ ಸುಬ್ಬಾರೆಡ್ಡಿ ಯೋಜನೆ ಕಾರ್ಯಗತದ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿದ್ದಾರೆ. 

ತಣಿಯಲಿದೆ ಹಾಹಾಕಾರ: ಪಾತಪಾಳ್ಯ, ಚೇಳೂರು ಭಾಗದಲ್ಲಿ ಅಂತರ್ಜಲ ಅಭಿವೃದ್ಧಿಗೆ ಅಣೆಕಟ್ಟೆಯು ಕಾರಣವಾಗಲಿದೆ. ಗಂಟ್ಲಮಲ್ಲಮ್ಮ ಅಣೆಕಟ್ಟೆಯನ್ನು ಎತ್ತಿನಹೊಳೆ ನೀರು ಸಂಗ್ರಹಕ್ಕೂ ಬಳಸಿಕೊಳ್ಳಲು ಸುಬ್ಬಾರೆಡ್ಡಿ ಅವರು ಚಿಂತಿಸಿದ್ದಾರೆ. ಆ ಮೂಲಕ ಇಡೀ ತಾಲ್ಲೂಕಿನ ಜನರಿಗೆ ಕುಡಿಯುವ ನೀರು ಪೂರೈಕೆಯು ಇಲ್ಲಿಂದ ಸಾಧ್ಯವಾಗಲಿದೆ. 

ಪಾತಪಾಳ್ಯ, ಚೇಳೂರು, ಬಾಗೇಪಲ್ಲಿ ವ್ಯಾಪ್ತಿಯ ಜನರು ಪ್ಲೋರೈಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ರೈತರಿಗೆ ಬೆಳೆಗಳು ಬೆಳೆಯಲು ನೀರಿನ ಕೊರತೆ ಇದೆ. ಈ ಎಲ್ಲ ಕಾರಣಗಳಿಂದ ಗಂಟ್ಲಮಲ್ಲಮ್ಮ ಅಣೆಕಟ್ಟೆಯು ಬಾಗೇಪಲ್ಲಿ ತಾಲ್ಲೂಕಿಗೆ ಮಹತ್ವದ ಯೋಜನೆಯಾಗಿದೆ. 

ತೀವ್ರ ಬರ ಮತ್ತು ನೀರಿನ ಹಾಹಾಕಾರದಿಂದ ಬಳಲುತ್ತಿರುವ ಈ ಭಾಗದ ಜನರಿಗೆ ಗಂಟ್ಲಮಲ್ಲಮ್ಮ ಯೋಜನೆಯು ನೀರಿನ ಸಿರಿ ತರಲಿದೆ ಎನ್ನುವ ನಿರೀಕ್ಷೆ ಸಹ ಇಲ್ಲಿನ ಜನರದ್ದಾಗಿದೆ. 

ಗಂಟ್ಲಮಲ್ಲಮ್ಮ ಕಣಿವೆ ಸುತ್ತಲಿನ ಬೆಟ್ಟಗುಡ್ಡಗಳ ಸಾಲು
ಶಾಸಕ ಸುಬ್ಬಾರೆಡ್ಡಿ

ಅಣೆಕಟ್ಟು ನಿರ್ಮಿಸದಿದ್ದರೆ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಅಣೆಕಟ್ಟು ನಿರ್ಮಿಸಿಯೇ ಚುನಾವಣೆಗೆ ಹೋಗುವೆ. 

-ಸುಬ್ಬಾರೆಡ್ಡಿ ಶಾಸಕ ಬಾಗೇಪಲ್ಲಿ

‘ಒಮ್ಮೆ ತುಂಬಿದರೆ ಮೂರು ವರ್ಷ ನೀರಿನ ಸಮಸ್ಯೆ ಇಲ್ಲ’

‘ಈ ಮೊದಲು ₹ 20 ಕೋಟಿಗೆ ಡಿಪಿಆರ್ ಮಾಡಿದ್ದೆವು. ಆದರೆ ಕಟ್ಟೆಯ ಆರಂಭದಿಂದ ಸುಮಾರು ಭಾಗ ಅರಣ್ಯ ಪ್ರದೇಶವಾಗಿತ್ತು. ಅರಣ್ಯ ಇಲಾಖೆಯಿಂದ ಅನುಮತಿ ಕಷ್ಟವಾಯಿತು. ಈಗ ಕಣೆವೆಯ ಮತ್ತಷ್ಟು  ತಳಭಾಗದಿಂದ ಡಿಪಿಆರ್ ಸಿದ್ಧವಾಗಿದೆ. ಇಲ್ಲಿ ರೈತರ ಒಂದಿಷ್ಟು ಜಮೀನು ಪಡೆಯಬೇಕಾಗುತ್ತದೆ. ಉಳಿದಂತೆ ಸರ್ಕಾರಿ ಜಾಗವೇ ಗರಿಷ್ಠ ಪ್ರಮಾಣದಲ್ಲಿ ಇದೆ’ ಎಂದು ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.  ಎರಡು ಬೆಟ್ಟದ ತೊರೆಯ ನೀರು ಅಣೆಕಟ್ಟೆಯಲ್ಲಿ ಸಂಗ್ರಹವಾಗುತ್ತದೆ.  ಈ ಹಿಂದಿನ ಯೋಜನೆ ಪ್ರಕಾರ ನೀರು ಹೆಚ್ಚು ಸಂಗ್ರಹವಾಗುತ್ತಿರಲಿಲ್ಲ. ವಿಶ್ವೇಶ್ವರಯ್ಯ ಜಲ ನಿಗಮದ ಮೊದಲ ಸಭೆಯಲ್ಲಿಯೇ ಯೋಜನೆಗೆ ಅನುಮೋದನೆ ದೊರೆಯಲಿದೆ ಎಂದು ಹೇಳಿದರು. ಅಧಿಕಾರಿಗಳು ಚಿತ್ರಾವತಿ ಜಲಾಶಯದಲ್ಲಿ ಎತ್ತಿನಹೊಳೆ ನೀರು ಸಂಗ್ರಹಿಸಲು ಯೋಜಿಸಿದ್ದಾರೆ. ಆದರೆ ಚಿತ್ರಾವತಿ ತುಂಬಿದರೆ ಆಂಧ್ರಕ್ಕೆ ನೀರು ಹರಿದು ಹೋಗುತ್ತದೆ. ಅದೇ ಗಂಟ್ಲಮಲ್ಲಮ್ಮ ಅಣೆಕಟ್ಟೆಯಲ್ಲಿ ನೀರು ಇದ್ದರೆ ತಾಲ್ಲೂಕಿನಿಂದ ಹೊರಗೆ ಹೋಗುವುದೇ ಇಲ್ಲ ಎಂದರು.  ಅಧಿಕಾರಿಗಳಿಗೆ ಜ್ಞಾನ ಇಲ್ಲದ ಕಾರಣ ಎತ್ತಿನಹೊಳೆ ನೀರು ಸಂಗ್ರಹಕ್ಕೆ ಚಿತ್ರಾವತಿ ಅಣೆಕಟ್ಟೆ ಆಯ್ಕೆ ಮಾಡಿದ್ದಾರೆ. ಗಂಟ್ಲಮಲ್ಲಮ್ಮ ಅಣೆಕಟ್ಟೆ ನಿರ್ಮಿಸಿ ಅಲ್ಲಿಯೇ ಎತ್ತಿನಹೊಳೆ ನೀರು ಸಂಗ್ರಹಕ್ಕೆ ಕ್ರಮವಹಿಸಲಾಗುವುದು ಎಂದು ಹೇಳಿದರು. ‘ನನಗೆ ಬೇರೆ ಯೋಜನೆಗಳು ಬೇಡ. ಗಂಟ್ಲಮಲ್ಲಮ್ಮ ಅಣೆಕಟ್ಟೆ ನಿರ್ಮಾಣಕ್ಕೆ ಹಣ ಕೊಡಿ ಕೈಗಾರಿಕೀಕರಣಕ್ಕೆ ಒತ್ತು ನೀಡಿ ಎಂದು ಸಿ.ಎಂ ಮತ್ತು ಡಿಸಿಎಂ ಅವರನ್ನು ಕೋರಿದ್ದೇನೆ. ಅವರು ಸ್ಪಂದಿಸಿದ್ದಾರೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.