ADVERTISEMENT

ಗೌರಿಬಿದನೂರು: ಅಲಕಾಪುರದಲ್ಲಿ ಜನರ ನೆಮ್ಮದಿಗೆ ಕಂಟಕವಾದ ಕಸದ ರಾಶಿ!

ಎ.ಎಸ್.ಜಗನ್ನಾಥ್
Published 27 ಅಕ್ಟೋಬರ್ 2023, 7:38 IST
Last Updated 27 ಅಕ್ಟೋಬರ್ 2023, 7:38 IST
ಅಲಕಾಪುರದ ರಸ್ತೆ ಬದಿಗಳಲ್ಲಿ ತ್ಯಾಜ್ಯದ ರಾಶಿ
ಅಲಕಾಪುರದ ರಸ್ತೆ ಬದಿಗಳಲ್ಲಿ ತ್ಯಾಜ್ಯದ ರಾಶಿ   

ಗೌರಿಬಿದನೂರು: ರಸ್ತೆ ಬದಿಯಲ್ಲೇ ಕೊಳೆಯುತ್ತಿರುವ ಕಸದ ರಾಶಿ, ದುರ್ನಾತ ಬೀರುವ ಚರಂಡಿ ತ್ಯಾಜ್ಯ, ರಸ್ತೆಯಲ್ಲಿಯೇ ಹರಿಯುವ ಚರಂಡಿ ನೀರು. ಇವೆಲ್ಲವೂ ಜನರ ನೆಮ್ಮದಿಗೆ ಕಂಟಕವಾಗಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ತೊಂಡೇಬಾವಿ ‌ಹೋಬಳಿ ಅಲಕಾಪುರ ಗ್ರಾಮ ಅನೈರ್ಮಲ್ಯದ ಕೊಂಪೆಯಾಗಿದೆ. ಇಲ್ಲಿನ ಅಧಿಕಾರಿಗಳು ಜನರಿಗೆ ಮೂಲ ಸೌಕರ್ಯ ಒದಗಿಸಲು ಮತ್ತು ಸ್ವಚ್ಛತೆ ಕಾಪಾಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಮನೆ–ಮನೆಗೆ ಕಸ ಸಂಗ್ರಹಕ್ಕಾಗಿ ಪ್ಲಾಸ್ಟಿಕ್ ಡಬ್ಬಗಳನ್ನು ನೀಡಲಾಗಿದೆ. ಆದರೆ, ಮನೆಯಲ್ಲಿ ಸಂಗ್ರಹವಾದ ಕಸ ಸಮರ್ಪಕವಾಗಿ ಸಂಸ್ಕರಣ ಘಟಕಕ್ಕೆ ತಲುಪಿಸಲು ಇಲ್ಲಿನ ಸಿಬ್ಬಂದಿ ‌ಮೀನಮೇಷ ಎಣಿಸುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು.

ಸರ್ಕಾರದ ಅನುದಾನದಡಿ ನಿರ್ಮಾಣ ಮಾಡಿರುವ ಚರಂಡಿಗಳು ಮಣ್ಣು ಮತ್ತು ತ್ಯಾಜ್ಯದಿಂದ ತುಂಬಿವೆ. ತ್ಯಾಜ್ಯ ನೀರು ಹರಿಯದಂತೆ ಮಡುಗಟ್ಟಿವೆ. ಮನೆಗಳಲ್ಲಿ ಸಂಗ್ರಹವಾಗುವ ಕಸ ರಸ್ತೆ ಬದಿ ಮತ್ತು ಚರಂಡಿಗಳಲ್ಲಿ ಸಂಗ್ರಹವಾಗುತ್ತಿದೆ. ಇದರಿಂದ ಸೊಳ್ಳೆಗಳ ಆವಾಸ ಸ್ಥಾನ ಹೆಚ್ಚಾಗುತ್ತಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ADVERTISEMENT

ಇಲ್ಲಿನ ಅವ್ಯವಸ್ಥೆ ಬಗ್ಗೆ ಅನೇಕ ಬಾರಿ ಸ್ಥಳೀಯ ಜನರು ಪಿಡಿಒ ಮತ್ತು ಇತರ ಅಧಿಕಾರಿಗಳ ಗಮನಕ್ಕೆ ತಂದು‌ ಮನವಿ‌ ಮಾಡಿದರೂ ಸೂಕ್ತಕ್ರಮ ವಹಿಸುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಕೃಷ್ಣಪ್ಪ.

ಹೋಬಳಿ‌ ಕೇಂದ್ರವಾದ ತೊಂಡೇಬಾವಿಯಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣವಾಗಿದೆ. ಸ್ಥಳೀಯ ‌ಗ್ರಾ.ಪಂಗೆ ತಾ.ಪಂ ಮತ್ತು ಜಿ.ಪಂ ಅನುದಾನದಡಿ ಪ್ರತಿ ಮನೆ–ಮನೆಯಿಂದ ಕಸ ಸಂಗ್ರಹಣೆ ಮಾಡಲು ಪ್ರತ್ಯೇಕ ವಾಹನ ನೀಡಲಾಗಿದೆ. ಆದರೆ, ಸಿಬ್ಬಂದಿ ಕೊರತೆಯಿಂದಾಗಿ ಸಾಗಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಇದರಿಂದಾಗಿ ರಸ್ತೆ ಎರಡೂ ಬದಿಯಲ್ಲಿ ಕಸದ ರಾಶಿ ತುಂಬಿದೆ.

ಇಲ್ಲಿನ ಅವ್ಯವಸ್ಥೆ ಬಗ್ಗೆ ಚರ್ಚಿಸುವುದು ನಾಚಿಕೆಗೇಡಿನ ಸ್ಥಿತಿಯಾಗಿದೆ ಎನ್ನುತ್ತಾರೆ ಇಲ್ಲಿನ ಗ್ರಾ.ಪಂ ಸದಸ್ಯರೊಬ್ಬರು.

'ಗ್ರಾ.ಪಂ ವ್ಯಾಪ್ತಿ ಪ್ರತಿ ಗ್ರಾಮದಲ್ಲಿ ಹಂತ–ಹಂತವಾಗಿ ಚರಂಡಿ ಮತ್ತು ತ್ಯಾಜ್ಯ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಪ್ಲಾಸ್ಟಿಕ್ ವಸ್ತು ಬಳಸದಿರಲು ಅರಿವು ಮೂಡಿಸಲಾಗಿದೆ. ಸಿಬ್ಬಂದಿ ಕೊರತೆಯಿಂದಾಗಿ ಮನೆ–ಮನೆಯಿಂದ ಕಸ ಸಂಗ್ರಹಣ ಮಾಡಲು ಸಾಧ್ಯವಾಗುತ್ತಿಲ್ಲ. ಕೂಡಲೇ ಪರಿಸ್ಥಿತಿ ಸರಿಪಡಿಸಿಕೊಳ್ಳಲಾಗುವುದು ' ಎನ್ನುತ್ತಾರೆ ಸ್ಥಳೀಯ ಗ್ರಾ.ಪಂ ಪಿಡಿಒ ಎನ್.ನರಸಿಂಹಯ್ಯ.

ಮೂಲೆಗುಂಪಾದ ತ್ಯಾಜ್ಯ ಸಂಗ್ರಹ‌ ವಾಹನ

ಕಸ ಸಂಗ್ರಹಿಸಿ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಕೊಂಡೊಯ್ಯಲು ಇಲಾಖೆ ವತಿಯಿಂದ ಪ್ರತ್ಯೇಕ ವಾಹನ ನೀಡಲಾಗಿದೆ. ಆದರೆ ಸಿಬ್ಬಂದಿ ಕೊರತೆಯಿಂದಾಗಿ ಬಳಸುತ್ತಿಲ್ಲ. ಶುಚಿತ್ವದ ಜತೆಗೆ ಪರಿಸರ ಸಂರಕ್ಷಣೆ ಮಾಡುವ ಸಲುವಾಗಿ ಲಕ್ಷಾಂತರ ರೂಪಾಯಿ ಅನುದಾನದಡಿ ನೀಡಿರುವ ವಾಹನ ಮೂಲೆಗುಂಪಾಗಿರುವುದು ನಿಜಕ್ಕೂ ಅವೈಜ್ಞಾನಿಕ. ಇದರಿಂದಾಗಿ ವಿವಿಧ ಗ್ರಾಮಗಳಲ್ಲಿ ತ್ಯಾಜ್ಯ ವಿಲೇವಾರಿಯಾಗದೆ ಮಡುಗಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಸ್ಥಳೀಯರು.

 ತ್ಯಾಜ್ಯದ ರಾಶಿ
ತ್ಯಾಜ್ಯದ ರಾಶಿ
ಅಲಕಾಪುರ ಗ್ರಾ.ಪಂ ಕಾರ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.