ADVERTISEMENT

ಚಿಕ್ಕಬಳ್ಳಾಪುರ | ಇಳಿಯದ ಬೆಳ್ಳುಳ್ಳಿ ಬೆಲೆ

ಕಳೆದ ವರ್ಷ ಇದೇ ಅವಧಿಯಲ್ಲಿಯೂ ಕೆ.ಜಿಗೆ ₹ 400 ತಲುಪಿದ್ದ ಬೆಳ್ಳುಳ್ಳಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 13:12 IST
Last Updated 15 ನವೆಂಬರ್ 2024, 13:12 IST
ಬೆಳ್ಳುಳ್ಳಿ
ಬೆಳ್ಳುಳ್ಳಿ   

ಚಿಕ್ಕಬಳ್ಳಾಪುರ: ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ನಾಟಿ ಬೆಳ್ಳುಳ್ಳಿಯ ಬೆಲೆ ₹550 ಮತ್ತು ಸಾಮಾನ್ಯ ಬೆಳ್ಳುಳ್ಳಿ ದರವು ₹400 ತಲುಪಿ ಒಂದೂವರೆ ತಿಂಗಳ ಮೇಲಾಗಿದೆ. ಬೆಳ್ಳುಳ್ಳಿ ದರವು ಇಳಿಕೆಯಾಗುವ ಲಕ್ಷಣಗಳು ಸದ್ಯಕ್ಕೆ ಕಾಣುತ್ತಿಲ್ಲ.

ಇದೇ ಬೆಲೆ ಒಂದೂವರೆ ತಿಂಗಳಿನಿಂದ ಸ್ಥಿರವಾಗಿದೆ. ನಿತ್ಯ ಅಡುಗೆ ಮನೆಯಲ್ಲಿ ಬಳಕೆಯಾಗುವ ಬೆಳ್ಳುಳ್ಳಿ ದರದ ಹೆಚ್ಚಳದ ಪರಿಣಾಮ ವಾರ, ಎರಡು ವಾರಕ್ಕೆ ಕಾಲು ಕೆ.ಜಿ ಬೆಳ್ಳುಳ್ಳಿ ಖರೀದಿಸುತ್ತಿದ್ದ ಮನೆಗಳಲ್ಲಿ ಈಗ ನೂರು ಗ್ರಾಂಗೆ ಖರೀದಿ ಇಳಿಕೆಯಾಗಿದೆ. ಕೆಲವರಂತೂ ಖರೀದಿಯನ್ನು ನಿಲ್ಲಿಸಿದ್ದಾರೆ.

ಕಳೆದ ವರ್ಷ ಇದೇ ಅವಧಿಯಲ್ಲಿಯೂ ಬೆಳ್ಳುಳ್ಳಿ ಬೆಲೆ ಒಂದು ಕೆ.ಜಿಗೆ ₹400 ಇತ್ತು. ಈ ವರ್ಷವೂ ಇದೇ ಧಾರಣೆ ಮುಟ್ಟಿದೆ. 

ADVERTISEMENT

‘ಬೆಳಗಾವಿ ಭಾಗದಲ್ಲಿ ಬೆಳೆಯುತ್ತಿದ್ದ ಬೆಳ್ಳುಳ್ಳಿಯು ಅಕ್ಟೋಬರ್, ನವೆಂಬರ್‌ನಲ್ಲಿ ಜಿಲ್ಲೆಗೆ ಪೂರೈಕೆ ಆಗುತ್ತಿತ್ತು. ಆದರೆ ಆ ಭಾಗದಲ್ಲಿ ಮಳೆ ಕಾರಣದಿಂದ ಬೆಳೆ ಹಾಳಾಗಿದೆಯಂತೆ. ಇದರಿಂದ ನಮ್ಮ ಭಾಗಕ್ಕೆ ಪೂರೈಕೆ ಕಡಿಮೆ ಆಗಿದೆ. ಬೆಲೆ ಹೆಚ್ಚಳವಾಗಿದೆ’ ಎನ್ನುತ್ತಾರೆ ಚಿಕ್ಕಬಳ್ಳಾಪುರದ ಬಜಾರ್ ರಸ್ತೆಯ ಈರುಳ್ಳಿ, ಬೆಳ್ಳುಳ್ಳಿ ವ್ಯಾಪಾರಿ ವೆಂಕಟಮ್ಮ.

ಮುಂದಿನ ತಿಂಗಳು ರಾಮನಗರ ಭಾಗದ ಬೆಳ್ಳುಳ್ಳಿ ಮಾರುಕಟ್ಟೆಗೆ ಬರುತ್ತದೆ. ಆಗ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ಬೆಲೆ ಹೆಚ್ಚಳದ ಕಾರಣ ಗ್ರಾಹಕರು ಸಹ ಖರೀದಿ ಕಡಿಮೆ ಮಾಡಿದ್ದಾರೆ. ಉತ್ತರ ಭಾರತದಿಂದ ಬಂದು ಚಿಕ್ಕಬಳ್ಳಾಪುರದ ಇಟ್ಟಿಗೆ ಕಾರ್ಖಾನೆ ಮತ್ತಿತರ ಕಡೆಗಳಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರು ವಾರಾಂತ್ಯದ ದಿನಗಳಲ್ಲಿ ಖರೀದಿಗೆ ಬರುತ್ತಾರೆ. ಅಂತಹವರಿಗೆ ಬೆಲೆ ಹೆಚ್ಚಳದ ಪರಿಣಾಮ ದೊಡ್ಡದಾಗಿಯೇ ತಟ್ಟಿದೆ ಎಂದು ಹೇಳಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.