ADVERTISEMENT

ಗೌರಿಬಿದನೂರು: ಪಾಳು ಬಿದ್ದಿವೆ ಇಲ್ಲಿನ ಸಂತೆ ಮಾರುಕಟ್ಟೆಗಳು

ಕೆ.ಎನ್‌.ನರಸಿಂಹಮೂರ್ತಿ
Published 31 ಅಕ್ಟೋಬರ್ 2024, 7:14 IST
Last Updated 31 ಅಕ್ಟೋಬರ್ 2024, 7:14 IST
ಗೌರಿಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ನಿರ್ಮಿಸಿರುವ ಸಂತೆ ಮಾರುಕಟ್ಟೆ
ಗೌರಿಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ನಿರ್ಮಿಸಿರುವ ಸಂತೆ ಮಾರುಕಟ್ಟೆ   

ಗೌರಿಬಿದನೂರು: ಹೋಬಳಿ ಕೇಂದ್ರದಲ್ಲಿ ರೈತರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗಲಿ ಎಂದು ಕೆಆರ್‌ಡಿಐಎಲ್ ಹೊಸೂರು, ವಾಟದಹೊಸಹಳ್ಳಿಯಲ್ಲಿ ನಿರ್ಮಿಸಿರುವ ಸಂತೆ ಮಾರುಕಟ್ಟೆಗಳು ಪಾಳು ಬಿದ್ದಿವೆ.

ಹೊಸೂರು, ವಾಟದಹೊಸಹಳ್ಳಿ ಗ್ರಾಮಗಳಲ್ಲಿ ₹ 48 ಲಕ್ಷ ವೆಚ್ಚದಲ್ಲಿ ಈ ಸಂತೆ ಮಾರುಕಟ್ಟೆಗಳನ್ನು ನಿರ್ಮಿಸಲಾಗಿದೆ. ಇವು ಈಗ ಕೇವಲ ಕುಡುಕರಿಗೆ ಮತ್ತು ಅನೈತಿಕ ಚಟುವಟಿಕೆಗಳನ್ನು ನಡೆಸುವವರಿಗೆ ಮಾತ್ರ ಹೇಳಿ ಮಾಡಿಸಿದ ತಾಣಗಳಾಗಿವೆ.

 ಹೋಬಳಿ ಕೇಂದ್ರಗಳಲ್ಲಿ ನಿರ್ಮಿಸಿರುವ ಈ ಸಂತೆಮಾರುಕಟ್ಟೆಗಳು, ಕೇಂದ್ರ ಸ್ಥಾನದಿಂದ ಹೆಚ್ಚು ದೂರದಲ್ಲಿವೆ. ಸರಿಯಾದ ರಸ್ತೆಗಳಿಲ್ಲ. ಮಳೆ ಬಂದರೆ ಮಣ್ಣಿನ ರಸ್ತೆಯಲ್ಲಾ ಕೆಸರು ತುಂಬುತ್ತದೆ. ನಡೆದು ಹೋಗಲು ಸಹ ಸಾಧ್ಯವಿಲ್ಲ. ಇಂತಹ ಜಾಗಗಳಲ್ಲಿ ನಿರ್ಮಿಸಿರುವುದರಿಂದ ರೈತರು, ಗ್ರಾಹಕರು ಅತ್ತ ಕಡೆ ಸುಳಿಯುತ್ತಿಲ್ಲ.

ADVERTISEMENT

ಜನರ ಓಡಾಟವಿಲ್ಲದ ಕಾರಣ  ಪ್ರತಿ ದಿನ ಅನೈತಿಕ ಚಟುವಟಿಕೆ ನಡೆಯುತ್ತವೆ.  ಮಳೆ ಬಂದಾಗ ಮದ್ಯ ಪ್ರಿಯರಿಗೆ ನೆಚ್ಚಿನ ತಾಣಗಳಾಗಿವೆ. ಇದು ಕೇವಲ ಗುತ್ತಿಗೆದಾರರಿಗೆ ಹಣ ಮಾಡಿಕೊಡುವ ಯೋಜನೆಯಾಗಿದೆ ಎಂದು ವಾಟದಹೊಸಹಳ್ಳಿ ಕೃಷ್ಣ ಮೂರ್ತಿ ಆರೋಪಿಸಿದರು.

ವಾಟದಹೊಸಹಳ್ಳಿಯಲ್ಲಿ ಮತ್ತು ಹೊಸೂರಿನಲ್ಲಿ ನಿರ್ಮಿಸಿರುವ ಈ ಸಂತೆ ಮಾರುಕಟ್ಟೆಗಳ ಸುತ್ತ ಗಿಡ ಗಂಟಿಗಳು ಬೆಳೆದಿವೆ. ಪಾಳು ಬಿದ್ದಿವೆ. ಎಲ್ಲಿ ನೋಡಿದರು ಕುಡಿದು ಬಿಸಾಡಿರುವ ಮದ್ಯದ ಬಾಟಲಿಗಳು, ಒಡೆದ ಮದ್ಯದ ಬಾಟಲಿಯ ಚೂರುಗಳು, ಗುಟ್ಕಾ ಕಲೆಗಳು, ಮದ್ಯ ಪ್ರಿಯರು ಅಲ್ಲಿಯೇ ಅಡುಗೆ ಮಾಡಲು ಇಟ್ಟಿರುವ ಒಲೆಗಳು, ಬಿಸಾಡಿರುವ ಮಾಂಸದ ತ್ಯಾಜ್ಯ ಎದ್ದು ಕಾಣುತ್ತದೆ. ವಿದ್ಯುತ್ ಸಂಪರ್ಕ ಇಲ್ಲದೆ ವಿದ್ಯುತ್ ತಂತಿಗಳು ಕಿತ್ತು ಹೋಗಿವೆ.

ಕಟ್ಟಡದಲ್ಲಿ ನಾಮಫಲಕಗಳನ್ನು ಸಹ ಅಳವಡಿಸಿಲ್ಲ. ಇದರಿಂದ ಇದು ಯಾವ ಕಾಮಗಾರಿ, ಇದರ ಉದ್ದೇಶ ಏನು ಎಂಬುದು ಯಾರಿಗೂ ತಿಳಿಯುತ್ತಿಲ್ಲ. 

‘ಅಧಿಕಾರಿಗಳು ಮತ್ತು ಗುತ್ತಿಗೆದಾರರ ಹೊಂದಾಣಿಕೆಯಿಂದ ಎಲ್ಲಾ ಕಾಮಗಾರಿಗಳನ್ನು ಅರೆ ಬರೆಯಾಗಿ ಮಾಡಲಾಗಿದೆ. ಸಾರ್ವಜನಿಕರ ಹಣ ಪೋಲು ಮಾಡಲಾಗಿದೆ’ ಎಂದು ಹೊಸೂರು ಗ್ರಾಮದ ನಾಗೇಶ್ ಆರೋಪಿಸಿದರು.

ಹೋಬಳಿ ಕೇಂದ್ರಗಳಲ್ಲಿ ಇಂದಿಗೂ ರಸ್ತೆ ಬದಿಗಳಲ್ಲಿ ತರಕಾರಿ ಮತ್ತು ಅಗತ್ಯ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದರು.

ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿ ಗ್ರಾಮದಲ್ಲಿ ಪಾಳು ಬಿದ್ದಿರುವ ಸಂತೆ ಮಾರುಕಟ್ಟೆ

ವರ್ಷದ ಹಿಂದೆಯೇ ಹಸ್ತಾಂತರ

ಪಂಚಾಯಿತಿಯವರು ಸೂಚಿಸಿದ ಸ್ಥಳದಲ್ಲಿ ಸಂತೆ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. ಅವರಿಗೆ ವರ್ಷದ ಹಿಂದೆ ಹಸ್ತಾಂತರಿಸಲಾಗಿದೆ.

-ಅಮೂಲ್ಯ ಎಇಇ ಕೆಆರ್‌ಡಿಐಎಲ್

ಉತ್ಸಾಹವಿಲ್ಲ

ವ್ಯಾಪಾರಿಗಳಿಗೆ ಒಂದು ವರ್ಷ ಯಾವುದೇ ಸುಂಕವಿಲ್ಲದೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಮಾರುಕಟ್ಟೆಯು ಗ್ರಾಮದ ಕೇಂದ್ರ ಸ್ಥಾನದಿಂದ ದೂರ ಇರುವುದರಿಂದ ವ್ಯಾಪಾರಿಗಳು ಗ್ರಾಹಕರಾಗಲಿ ಅಲ್ಲಿಗೆ ಹೋಗಲು ಉತ್ಸಾಹ ತೋರುತ್ತಿಲ್ಲ.

-ಶ್ರೀನಿವಾಸ್ ಪಿಡಿಒ ವಾಟದಹೊಸಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.