ಗೌರಿಬಿದನೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಳೆದ ಒಂದು ತಿಂಗಳಿನಿಂದ ಆಹಾರ ಧಾನ್ಯ ಪೂರೈಕೆಯಾಗದ ಕಾರಣ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವುದನ್ನು ಬಿಟ್ಟು ನೆರೆಯ ಶಾಲೆಗಳ ಬಳಿ ಅಕ್ಕಿ, ಬೇಳೆ, ಎಣ್ಣೆ, ಗೋದಿ ಮತ್ತು ಸಿಲಿಂಡರ್ ಎರವಲು ಪಡೆಯಲು ನಿತ್ಯ ಸಾಲುಗಟ್ಟಿ ಕಾಯುವ ದುಸ್ಥಿತಿ ಒದಗಿದೆ.
ತಾಲ್ಲೂಕಿನಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ, ಅನುದಾನಿತ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಈ ಶಾಲೆಗಳಲ್ಲಿನ ಎಲ್ಲ ವಿದ್ಯಾರ್ಥಿಗಳಿಗೆ ಸರ್ಕಾರವು ನಿತ್ಯ ಬೆಳಿಗ್ಗೆ ಹಾಲು, ಮಧ್ಯಾಹ್ನ ಬಿಸಿಯೂಟ ಮತ್ತು ಕೋಳಿಮೊಟ್ಟೆ ವ್ಯವಸ್ಥೆ ಮಾಡಿದೆ. ಆದರೆ ತಾಲ್ಲೂಕಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಜುಲೈ ತಿಂಗಳು ಮುಗಿದರೂ ಇನ್ನೂ ಆಹಾರ ಧಾನ್ಯ ಮತ್ತು ಹಾಲಿನ ಪೌಡರನ್ನು ಪೂರೈಕೆ ಮಾಡದ ಕಾರಣ ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದ ವ್ಯವಸ್ಥೆ ಮಾಡುವುದೇ ಶಿಕ್ಷಕರಿಗೆ ದೊಡ್ಡ ಸವಾಲಾಗಿದೆ.
ಸರ್ಕಾರದಿಂದ ತಾಲ್ಲೂಕು ಅಕ್ಷರ ದಾಸೋಹ ಇಲಾಖೆಗೆ ಸಮರ್ಪಕವಾದ ಆಹಾರ ಧಾನ್ಯಗಳು ನಿಯಮಿತ ಅವಧಿಯಲ್ಲಿ ಪೂರೈಕೆಯಾಗುತ್ತಿದ್ದರೂ ಅವುಗಳನ್ನು ಸಂಬಂಧಪಟ್ಟ ಶಾಲೆಗಳಿಗೆ ನಿಗದಿತ ವೇಳೆಯಲ್ಲಿ ಪೂರೈಕೆ ಮಾಡಲು ಸಹಾಯಕ ನಿರ್ದೇಶಕರ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ.
ಇದರಿಂದಾಗಿ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲು ಶಿಕ್ಷಕರು ಹರಸಾಹಸ ಪಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ನೆರೆಯ ಶಾಲೆಗಳು ಮತ್ತು ಅಂಗನವಾಡಿಗಳಿಂದ ಎರವಲು ಪಡೆಯಿರಿ, ನಾವು ಪೂರೈಕೆ ಮಾಡಿದ ಬಳಿಕ ಪುನಃ ಅವರಿಗೆ ನೀಡಿ ಎಂಬ ಹಾರಿಕೆ ಉತ್ತರಗಳನ್ನು ಹೇಳುತ್ತಿದ್ದಾರೆ ಎಂಬ ಆರೋಪಗಳು ಶಿಕ್ಷಕರಿಂದ ಕೇಳಿ ಬರುತ್ತಿವೆ.
‘ಆಹಾರ ಧಾನ್ಯಗಳ ಪೂರೈಕೆ ವಿಳಂಬವಾಗುವ ಜತೆಗೆ ತರಕಾರಿ, ಸಾಂಬಾರು ಪೌಡರ್, ಸೇರಿದಂತೆ ಇನ್ನಿತರ ಪರಿಕರಗಳನ್ನು ಕೊಳ್ಳಲು ಸರ್ಕಾರ ನೀಡುವ ಸಿ.ಜಿ ಹಣವು ಕಳೆದ ಜನವರಿ ತಿಂಗಳಿನಿಂದ ಇಲಾಖೆಯಿಂದ ನೀಡಿಲ್ಲ. 6 ತಿಂಗಳಿನಿಂದ ಕಿರಾಣಿ ಅಂಗಡಿ ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಸಾಲದ ರೂಪದಲ್ಲಿ ತರಕಾರಿ ಮತ್ತು ಇತರ ಅಗತ್ಯ ವಸ್ತುಗಳನ್ನು ಪಡೆಯುವ ಸಾಹಸ ಮಾಡುತ್ತಿದ್ದೇವೆ. ನಿತ್ಯ ಅಕ್ಷರ ದಾಸೋಹ ನಿರ್ವಹಣೆಯ ಅಧಿಕಾರಿಗಳಿಗೆ ದುಂಬಾಲು ಬಿದ್ದರೂ ಕೂಡ ನಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಬಾಳೆಹಣ್ಣು, ಸೀಬೆ ಹಣ್ಣು, ಬಿಸ್ಕೇಟ್ ಸೇರಿದಂತೆ ಇತರ ಆಹಾರ ನೀಡುವ ಮೂಲಕ ಮಕ್ಕಳ ಮಧ್ಯಾಹ್ನದ ಹಸಿವನ್ನು ನೀಗಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ’ ಎನ್ನುತ್ತಾರೆ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು.
ಕಳೆದ ಒಂದೂವರೆ ತಿಂಗಳಿನಿಂದಲೂ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆಗೆ ಅಗತ್ಯವಿರುವ ಆಹಾರ ಸಾಮಗ್ರಿಗಳನ್ನು ಒದಗಿಸುವುದೇ ದೊಡ್ಡ ಸಾಹಸವಾಗಿದೆ. ಇದರ ಬಗ್ಗೆ ಅನೇಕ ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದರಿಂದಾಗಿ ಸರ್ಕಾರಿ ಶಾಲೆಗಳ ಮೇಲೆ ಪೋಷಕರಿಗಿರುವ ನಂಬಿಕೆ ಮತ್ತು ವಿಶ್ವಾಸ ಮರೆಯಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಶಾಲೆಗಳಿಗೆ ನಿಗದಿತ ಸಮಯದಲ್ಲಿ ಅಗತ್ಯ ಆಹಾರ ಸಾಮಗ್ರಿ ಪೂರೈಕೆ ಮಾಡಬೇಕು ಎನ್ನುತ್ತಾರೆ ಮುಖ್ಯ ಶಿಕ್ಷಕಿ ವೈ.ಎನ್.ಅಂಬಿಕಾ.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಶ್ರೀನಿವಾಸಮೂರ್ತಿ ಪ್ರತಿಕ್ರಿಯೆ ನೀಡಿ, ‘ಈ ಸಮಸ್ಯೆ ಕಳೆದ ಎರಡು ತಿಂಗಳಿನಿಂದ ಶಾಲಾ ಶಿಕ್ಷಕರಿಂದ ಕೇಳಿ ಬರುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಿ ಶಾಲೆಗಳಿಗೆ ಆಹಾರ ಪೂರೈಕೆ ಮಾಡದಿರುವ ಬಗ್ಗೆ ಸೂಕ್ತ ಕಾರಣ ಪಡೆದು ಶೀಘ್ರದಲ್ಲೇ ಸಮಸ್ಯೆಗೆ ಪರಿಹಾರ ಕಲ್ಪಿಸಲು ಪ್ರಯತ್ನಿಸುತ್ತೇವೆ’ ಎನ್ನುತ್ತಾರೆ.
‘ತಾಲ್ಲೂಕಿನಲ್ಲಿ ಹೆಚ್ಚು ಮಕ್ಕಳಿರುವ ಶಾಲೆಗಳಲ್ಲಿ ಮುಂದಿನ 2-3 ತಿಂಗಳಿಗಾಗುವಷ್ಟು ಆಹಾರ ಧಾನ್ಯ ಹೆಚ್ಚಾಗಿ ಉಳಿದಿವೆ. ಅವುಗಳಲ್ಲಿ ಹುಳು ಬೀಳುವ ಆತಂಕ ಎದುರಾಗಿದೆ. ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಹೆಚ್ಚುವರಿಯಾಗಿ ಇರುವ ಶಾಲೆಗಳಿಂದ ಎರವಲು ಪಡೆದು ಮಕ್ಕಳಿಗೆ ಬಿಸಿಯೂಟ ನೀಡುವಂತೆ ನಿರ್ದೇಶನ ನೀಡಲಾಗಿದೆ. ಕೆಲವೊಂದು ತಾಂತ್ರಿಕ ದೋಷಗಳಿಂದಾಗಿ ಸಿ.ಜಿ ಹಣ ಬಿಡುಗಡೆ ವಿಳಂಬವಾಗಿದೆ. ಮುಂದಿನ ವಾರದಿಂದ ಎಲ್ಲವೂ ಸಮರ್ಪಕವಾಗಿ ನಡೆಯಲಿವೆ’ ಎನ್ನುತ್ತಾರೆ ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎನ್.ನರಸಿಂಹಪ್ಪ.
ಬಿಸಿಯೂಟ ಬದಲಿಗೆ ಬಾಳೆಹಣ್ಣು: ಮೊಟ್ಟೆಗಳ ದರ ಏರಿಕೆಯಾಗಿರುವ ಕಾರಣ ಅವುಗಳನ್ನು ಖರೀದಿ ಮಾಡಲು ಸರ್ಕಾರ ನೀಡುವ ಹಣ ಸಾಕಾಗುತ್ತಿಲ್ಲ. ನಿತ್ಯ ಮಕ್ಕಳಿಗೆ ಪಾಠ ಮಾಡುವುದಕ್ಕಿಂತ ಮಧ್ಯಾಹ್ನದ ಹಸಿವನ್ನು ನೀಗಿಸುವುದೇ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಶಿಕ್ಷಕರೊಬ್ಬರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.