ADVERTISEMENT

ಚಿಕ್ಕಬಳ್ಳಾಪುರ: ದೂಳು ಹಿಡಿಯುವವೇ ತಹಶೀಲ್ದಾರರ ದೂರುಗಳು?

ಭೂ ಕಬಳಿಕೆಗೆ ಸಂಬಂಧಿಸಿದಂತೆ 7 ದೂರುಗಳನ್ನು ದಾಖಲಿಸಿರುವ ತಹಶೀಲ್ದಾರ್ ಗಣಪತಿ ಶಾಸ್ತ್ರಿ

ಡಿ.ಎಂ.ಕುರ್ಕೆ ಪ್ರಶಾಂತ
Published 2 ಆಗಸ್ಟ್ 2023, 6:04 IST
Last Updated 2 ಆಗಸ್ಟ್ 2023, 6:04 IST
ಗಣಪತಿ ಶಾಸ್ತ್ರಿ
ಗಣಪತಿ ಶಾಸ್ತ್ರಿ   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲ್ಲೂಕಿನ ತಹಶೀಲ್ದಾರರಾಗಿ ಎರಡೂ ಕಾಲು ವರ್ಷ ಕೆಲಸ ನಿರ್ವಹಿಸಿ ವರ್ಗಾವಣೆ ಆಗಿದ್ದಾರೆ ತಹಶೀಲ್ದಾರ್ ಗಣಪತಿ ಶಾಸ್ತ್ರಿ. ತಮ್ಮ ಅಧಿಕಾರದ ಅವಧಿಯಲ್ಲಿ ಅವರು ಸರ್ಕಾರಿ ಜಮೀನು ಕಬಳಿಕೆಗೆ ಸಂಬಂಧಿಸಿದಂತೆ 7 ದೂರುಗಳನ್ನು ನೀಡಿದ್ದಾರೆ. ಕಬಳಿಕೆ ಆಗಿರುವ ಸರ್ಕಾರಿ ಜಮೀನು ಕೋಟ್ಯಂತರ ರೂಪಾಯಿ ಮೌಲ್ಯದ್ದಾಗಿದೆ. 

ಹೀಗೆ ತಹಶೀಲ್ದಾರರು ನೀಡಿರುವ ದೂರುಗಳು ಇನ್ನೂ ದೂರುಗಳಾಗಿವೇ ಹೊರತು ಕ್ರಮಗಳಾಗಿಲ್ಲ. ಭೂಕಬಳಿಕೆಗೆ ಸಂಬಂಧಿಸಿದಂತೆ ತಹಶೀಲ್ದಾರರು ನೀಡಿರುವ ದೂರುಗಳ ಮೇಲೆ ಕ್ರಮವಹಿಸಲಾಗುತ್ತದೆಯೇ ಅಥವಾ ದೂಳು ಹಿಡಿಯುವವೇ ಎನ್ನುವ ಚರ್ಚೆ ನಡೆಯುತ್ತಿದೆ. 

ಯಾವ ಯಾವ ದೂರು: ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಹೋಬಳಿ ಕುಡುವತಿ ಗ್ರಾಮದ ಸಂ.170ರ ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳುವಂತೆ ಜು.19ರಂದು ತಹಶೀಲ್ದಾರ್ ಗಣಪತಿ ಶಾಸ್ತ್ರಿ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

ಸರ್ವೆ ನಂ 170ಕ್ಕೆ ಸಂಬಂಧಿಸಿದಂತೆ 1965–66ನೇ ಸಾಲಿನಿಂದ 2000–2021ನೇ ಸಾಲಿನವರೆಗಿನ ಕೈ ಬರಹದ ಪಹಣಿ ನಕಲು, ಮೂಲ ಮಂಜೂರಾತಿ ಕಡತದ ನಕಲು ಪ್ರತಿಯನ್ನು ದೂರಿನ ಜೊತೆ ಲಗತ್ತಿಸಿದ್ದಾರೆ. ನಕಲಿ ದಾಖಲೆಗಳನ್ನು ತಾಲ್ಲೂಕು ಕಚೇರಿಯ ಅಭಿಲೇಖಾಲಯದಲ್ಲಿ ಸೇರ್ಪಡೆ ಮಾಡಿರುವವರ ಪತ್ತೆಗೂ ಕ್ರಮವಹಿಸುವಂತೆ ದೂರಿನಲ್ಲಿ ಕೋರಿದ್ದಾರೆ. ಗ್ರಾಮ ಆಡಳಿತ ಅಧಿಕಾರಿಯ ಮೇಲೆಯೂ ಸಂಶಯ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿ ಬಳಗೆರೆ ಗ್ರಾಮದ ಸ.ನಂ 19ರಲ್ಲಿ ಅಕ್ರಮ ದಾಖಲೆಗಳ ಆಧಾರದ ಮೇಲೆ ಖಾತೆ ಬದಲಾವಣೆ ಕೋರಿರುವ ಕುರಿತು 2022ರ ಫೆಬ್ರುವರಿಯಲ್ಲಿ ನಗರ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಪ್ರತಿಯ ಜೊತೆಗೆ ಸರ್ವೆ ದಾಖಲೆಗಳು, ಆಕಾರ್ ಬಂದ್ ಪ್ರತಿ, ಕೈಬರಹದ ಪಹಣಿ ಪತ್ರಿಗಳು, ಅರ್ಜಿದಾರರು ಸಾಗುವಳಿ ಚೀಟಿಯಂತೆ ಖಾತೆ ಮಾಡಲು ಕೋರಿ ಸಲ್ಲಿಸಿರುವ ಅರ್ಜಿ, ಕುಡುವತಿ ಗ್ರಾಮದ ಸರ್ವೆ ನಂ 168ರ ಸಾಗುವಳಿ ಪ್ರತಿಗಳನ್ನು ಸಹ ದೂರಿನ ಜೊತೆ ದಾಖಲೆಗಳಾಗಿ ನೀಡಿದ್ದಾರೆ.

ಚಿಕ್ಕಬಳ್ಳಾಪುರ ತಾಲ್ಲೂಕು ಮಂಡಿಕಲ್ಲು ಹೋಬಳಿ ಯರ್ರಮಾರೇನಹಳ್ಳಿ ಗ್ರಾಮದ ಸ.ನಂ 243ರಲ್ಲಿ ನಡೆದಿರುವ ಅಕ್ರಮ, ಬೈಪ್ಪನಹಳ್ಳಿ ಗ್ರಾಮದ ಸರ್ವೆ ನಂ 29ರಲ್ಲಿ ಜಮೀನು ಮಂಜೂರು ಆಗಿರುವ ಬಗ್ಗೆ ನಕಲಿ ದಾಖಲಾತಿ ಸೃಷ್ಟಿಸಿರುವವರ ಬಗ್ಗೆ ಕಾನೂನು ಕ್ರಮಕೈಗೊಳ್ಳುವಂತೆ ಸಹ ದೂರು ನೀಡಿದ್ದಾರೆ.

ಚಿಕ್ಕಬಳ್ಳಾಪುರ ತಾಲ್ಲೂಕು ಮಂಡಿಕಲ್ಲು ಹೋಬಳಿ ಅರೂರು ಗ್ರಾಮದ ಸರ್ವೆ ನಂ 262 ಮತ್ತು ಸರ್ವೆ ನಂ 206ರ ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಗಣಪತಿ ಶಾಸ್ತ್ರಿ ದೂರು ನೀಡಿದ್ದಾರೆ. ಈ ಪ್ರಕರಣಗಳಲ್ಲಿ ಆರು ಮಂದಿಯ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ದಾಖಲೆಗಳನ್ನು ಸಹ ಲಗತ್ತಿಸಿದ್ದಾರೆ.

ಚಿಕ್ಕಬಳ್ಳಾಪುರ ತಾಲ್ಲೂಕು ಮಂಡಿಕಲ್ಲು ಹೋಬಳಿ ಬಂಡಹಳ್ಳಿ ಗ್ರಾಮದ ಸರ್ವೆ ನಂ 22 ಮತ್ತು ಸರ್ವೆ ನಂ 29ರಲ್ಲಿ ಜಮೀನು ಮಂಜೂರು ಆಗಿರುವ ಬಗ್ಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸಹ ದೂರು ನೀಡಿದ್ದಾರೆ. ಈ ಪ್ರಕರಣಗಳಲ್ಲಿ ಆರು ಮಂದಿಯ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ದಾಖಲೆಗಳನ್ನು ಸಹ ಲಗತ್ತಿಸಿದ್ದಾರೆ.

ಚಿಕ್ಕಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿ ಬಳಗೆರೆ ಗ್ರಾಮದ ಸರ್ವೆ ನಂ 11ರಲ್ಲಿ ಅಕ್ರಮ ದಾಖಲೆಗಳ ಆಧಾರದ ಮೇಲೆ ಖಾತೆ ಬದಲಾವಣೆ ಬಗ್ಗೆ ಸಹ ದೂರು ನೀಡಿದ್ದಾರೆ. 

ತಹಶೀಲ್ದಾರರು ಹೀಗೆ ನೀಡಿರುವ 7 ದೂರುಗಳಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಸಹ ಸಲ್ಲಿಸಿದ್ದಾರೆ. ಈ ಪ್ರಕರಣಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನುಗಳನ್ನು ಅಕ್ರಮವಾಗಿ ಪಡೆದಿರುವ ಬಗ್ಗೆಯೂ ಉಲ್ಲೇಖಿಸಿದ್ದಾರೆ. 

ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಭೂ ಅಕ್ರಮಗಳಿಗೆ ಸಂಬಂಧಿಸಿದಂತೆ ತಹಶೀಲ್ದಾರರು ದೊಡ್ಡ ಕುಳಗಳನ್ನೇ ಪತ್ತೆ ಮಾಡಿದ್ದಾರೆ. ಕೆಲವರು ರಾಜಕೀಯ ಪ್ರಭಾವಿಗಳು ಸಹ ಇದ್ದಾರೆ. ಹೀಗೆ ಭೂ ಅಕ್ರಮಗಳಿಗೆ ಸಂಬಂಧಿಸಿದಂತೆ ತಹಶೀಲ್ದಾರರ ದಿಟ್ಟ ಕ್ರಮಗಳು ಅವರನ್ನು ಜನಪ್ರಿಯರನ್ನಾಗಿಸಿತು.

ಗಣಪತಿ ಶಾಸ್ತ್ರಿ ಅವರು ನೀಡಿದ ದೂರುಗಳಿಗೆ ಸಂಬಂಧಿಸಿದಂತೆ ಬಹುತೇಕ ಪ್ರಕರಣಗಳಲ್ಲಿ ಇಲ್ಲಿಯವರೆಗೂ ಯಾವುದೇ ಕ್ರಮಗಳು ಸಹ ಆಗಿಲ್ಲ. ಈಗ ಗಣಪತಿ ಶಾಸ್ತ್ರಿ ಅವರ ವರ್ಗಾವಣೆ ಆಗಿದೆ. ಮುಂದೆ ಈ ಪ್ರಭಾವಿಗಳ ಭೂ ಕಬಳಿಕೆ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣುತ್ತವೆಯೇ ಅಥವಾ ಹಳ್ಳ ಹಿಡಿಯುತ್ತವೆಯೇ ಎನ್ನುವ ಕುತೂಹಲ ಮತ್ತು ಚರ್ಚೆ ಚಿಕ್ಕಬಳ್ಳಾಪುರದ ಪ್ರಜ್ಞಾವಂತ ವಲಯದಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.