ಬಾಗೇಪಲ್ಲಿ: ಶಿಥಿಲವಾಗಿರುವ ಕೊಠಡಿಗಳು, ನೆಲಕ್ಕೆ ಉದುರಿ ಬೀಳುವ ಸಿಮೆಂಟ್ ಪದರಗಳು, ಸಣ್ಣ ಮಳೆ ಬಿದ್ದರೂ ಮಕ್ಕಳ ತಲೆಯ ಮೇಲೆ ತೊಟ್ಟಿಕ್ಕುವ ಹನಿಗಳು... ಇದರ ನಡುವೆಯ ಭಯ–ಆತಂಕದಿಂದ ಪಾಠ ಕೇಳುವ ಮಕ್ಕಳು...
ಇದು ತಾಲ್ಲೂಕಿನ ಪೂಲವಾರಿಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವ್ಯವಸ್ಥೆ.
ತಾಲ್ಲೂಕಿನ ಪರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಪೂಲವಾರಿಪಲ್ಲಿ ಕ್ರಾಸ್‌ನಲ್ಲಿ ಶಾಲೆ ಇದೆ. ಗ್ರಾಮಕ್ಕೆ 2 ಕಿಲೋಮೀಟರ್‌ನಷ್ಟು ಕಾಲುನಡಿಗೆಯಲ್ಲಿ ಸಂಚರಿಸಬೇಕು. ಗ್ರಾಮದ ವಿದ್ಯಾರ್ಥಿಗಳಿಗೆ ಹತ್ತಿರದಲ್ಲಿರುವ ಶಾಲೆ ಇದು. ಒಂದರಿಂದ ಏಳನೇ ತರಗತಿವರೆಗಿನ ಸುಮಾರು 23 ಮಕ್ಕಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಾರೆ. ಆದರೆ, ಪಾಠ ಮಾಡುವುದಕ್ಕೂ ಈ ಶಾಲೆಯಲ್ಲಿ ಅನುಕೂಲಗಳಿಲ್ಲ.
ಶಾಲೆಯ ಕಟ್ಟಡ ಬಹಳ ಹಳೆಯದಾಗಿದ್ದು, ಶಿಥಿಲಾವ್ಯಸ್ಥೆ ತಲುಪಿ ವರ್ಷಗಳೇ ಕಳೆದಿವೆ. ಇರುವುದೇ ಬೆರಳೆಣಿಕೆಯಷ್ಟು ಕೊಠಡಿಗಳು, ಅವೂ ಸಂಪೂರ್ಣ ಹಾಳಾಗಿವೆ. ಶಾಲಾ ಕಟ್ಟಡವನ್ನು ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲಾಗಿದೆ. ಇದರಿಂದ ಮಳೆಯ ನೀರು ಹೊರಹೋಗಲು ಸಾಧ್ಯವಾಗದೇ, ಕಟ್ಟಡದ ಮಧ್ಯದಲ್ಲಿ ನೀರು ನಿಲ್ಲುತ್ತದೆ. ಮಳೆಗಾಲದಲ್ಲಿ ಕೊಠಡಿಯೊಳಗೆ ನಿತ್ಯ ನೀರು ಸೋರುತ್ತದೆ. ಮೇಲ್ಛಾವಣೆ, ಗೋಡೆಗಳ ಸಿಮೆಂಟ್ ಪದರಗಳು ಉದುರಿ ಬೀಳುತ್ತಿದೆ. ಕಂಬಿಗಳು ಕಾಣಿಸುತ್ತಿವೆ.
ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನಿತ್ಯ ಕೊಠಡಿಯಲ್ಲಿ ಸೋರುವುದು ತಪ್ಪಿಲ್ಲ. ನೆಲದಲ್ಲಿ ತೇವಾಂಶ ಹೆಚ್ಚಾಗಿದ್ದು, ಮಕ್ಕಳಿಗೆ ಕುಳಿತು ಪಾಠ ಕೇಳಲು ಕಷ್ಟವಾಗುತ್ತಿದೆ. ಶೌಚಾಲಯಗಳೂ ಬಳಸಲು ಯೋಗ್ಯವಾಗಿಲ್ಲದ ಕಾರಣ ವಿದ್ಯಾರ್ಥಿನಿಯರೂ ಬಯಲು ಶೌಚವನ್ನೇ ಅವಲಂಬಿಸುವಂತಾಗಿದೆ. ಕುಡಿಯುವ ನೀರಿಗೂ ಇಲ್ಲಿ ತತ್ವಾರವಿದೆ.
‘ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಕೃಷಿಕರು, ಕೂಲಿಕಾರ್ಮಿಕರು, ಹಿಂದುಳಿದವರು ಹಾಗೂ ಬಡವರು. ಬೇರೆ ದಾರಿ ಇಲ್ಲದೇ ಪೋಷಕರು ಈ ಸರ್ಕಾರಿ ಶಾಲೆಗಳನ್ನೇ ನಂಬಿ ತಮ್ಮ ಮಕ್ಕಳನ್ನು ಇಲ್ಲಿಗೆ ಕಳಿಸುತ್ತಾರೆ. ಆದರೆ, ಶಾಲೆಯಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳೂ ಇಲ್ಲ. ಯಾವಾಗ ಗೋಡೆ ಕುಸಿದು ಬೀಳುತ್ತದೆ ಎನ್ನುವ ಆತಂಕದ ನಡುವೆಯೇ ಮಕ್ಕಳು ಪಾಠ ಕೇಳುತ್ತಾರೆ’ ಎಂದು ಗ್ರಾಮದ ಮುಖಂಡ ನರಸಿಂಹಪ್ಪ ಬೇಸರ ವ್ಯಕ್ತಪಡಿಸಿದರು.
‘ಒಂದಡೆ ಶಿಕ್ಷಕ, ಶಿಕ್ಷಕಿಯರ ಕೊರತೆ, ಮತ್ತೊಂದಡೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಇದರಿಂದ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ತಾಲ್ಲೂಕಿನ ಎಲ್ಲಾ ಶಿಥಿಲಗೊಂಡ ಸರ್ಕಾರಿ ಶಾಲೆಗಳ ಬಗ್ಗೆ ಪರಿಶೀಲನೆ ಮಾಡಬೇಕು. ಶಿಥಿಲ ಕಟ್ಟಡಗಳನ್ನು ನೆಲಸಮ ಮಾಡಿ, ನೂತನ ಕಟ್ಟಡಗಳನ್ನು ನಿರ್ಮಾಣ ಮಾಡಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಭಾರತ ವಿದ್ಯಾರ್ಥಿ ಸಂಘಟನೆಯ(ಎಸ್‍ಎಫ್ ಐ) ಸೋಮಶೇಖರ ಒತ್ತಾಯಿಸಿದ್ದಾರೆ.
‘ಶಾಲಾ ಕೊಠಡಿಗಳು ಸೋರುತ್ತಿವೆ. ಮೇಲ್ಛಾವಣಿಯ ಸಿಮೆಂಟ್ ಪದರಗಳು ಉದುರುತ್ತಿದೆ. ಶಾಲಾ ಕಟ್ಟಡ ರಿಪೇರಿ ಹಾಗೂ ದುರಸ್ಥಿ ಮಾಡಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಶಾಲಾ ಸುತ್ತಲೂ ಸ್ವಚ್ಛತೆ ಮಾಡಿಸಲಾಗಿದೆ' ಎಂದು ಶಾಲಾ ಮುಖ್ಯಶಿಕ್ಷಕ ಬಿ.ವಿ.ಶಿವಯ್ಯ 'ಪ್ರಜಾವಾಣಿ' ಗೆ ಪ್ರತಿಕ್ರಿಯಿಸಿದ್ದಾರೆ.
‘ಮಕ್ಕಳ ಸುರಕ್ಷತೆಯ ಹಿತದೃಷ್ಠಿಯಿಂದ ಸುರಕ್ಷತೆಯ ಬಗ್ಗೆ ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ಶಾಲೆಗಳ ಸುತ್ತಲೂ ಸ್ವಚ್ಛತೆ ಕಾಪಾಡಬೇಕು. ಕೆಲ ಕಡೆ ಮಕ್ಕಳ ಕಡಿಮೆ ಇರುತ್ತಾರೆ. ಶಿಥಿಲ ಕಟ್ಟಡದಲ್ಲಿ ಪಾಠಗಳು ಮಾಡುವಂತಿಲ್ಲ. ಶಿಥಿಲ ಕಟ್ಟಡಗಳನ್ನು ರಿಪೇರಿ ಮಾಡಿಸುವಂತೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ‘ ಎಂದು ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.