ADVERTISEMENT

ಚಿಂತಾಮಣಿ | ಹಸಿರ ಸಿರಿಯಲಿ ದೊಡ್ಡಬೊಮ್ಮನಹಳ್ಳಿ ಶಾಲೆ

ಎಂ.ರಾಮಕೃಷ್ಣಪ್ಪ
Published 11 ನವೆಂಬರ್ 2023, 4:31 IST
Last Updated 11 ನವೆಂಬರ್ 2023, 4:31 IST
ಚಿಂತಾಮಣಿ ತಾಲ್ಲೂಕಿನ ದೊಡ್ಡಬೊಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಪರಿಸರದ ದೃಶ್ಯ
ಚಿಂತಾಮಣಿ ತಾಲ್ಲೂಕಿನ ದೊಡ್ಡಬೊಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಪರಿಸರದ ದೃಶ್ಯ   

ಚಿಂತಾಮಣಿ: ತಾಲ್ಲೂಕಿನ ದೊಡ್ಡಬೊಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಾತಾವರಣ ಮಲೆನಾಡು ಶಾಲೆಯ ಅನುಭವವಾಗುತ್ತದೆ. 6 ಎಕರೆ ವಿಸ್ತೀರ್ಣದ ಶಾಲಾ ಆವರಣದಲ್ಲಿ ಹಸಿರು ಹೊದ್ದು ಮಲಗಿದೆ. ಮರಗಳ ಕೆಳಗೆ ವಿದ್ಯಾರ್ಥಿ ಮತ್ತು ಶಿಕ್ಷಕರ ಪಾಠ ಪ್ರವಚನಗಳ ಚಟುವಟಿಕೆಗಳು ಪುರಾತನ ಗುರುಕುಲ ಪದ್ಧತಿಯ ಮಾದರಿಯನ್ನು ನೆನಪಿಸುತ್ತದೆ.

ಪ್ರಸಕ್ತ ಸಾಲಿನಲ್ಲಿ 8, 9 ಮತ್ತು 10 ನೇ ತರಗತಿಯ 93 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮೂರು ಮಂದಿ ಕಾಯಂ ಶಿಕ್ಷಕರು ಹಾಗೂ 3 ಮಂದಿ ಅತಿಥಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ರಷ್ಟು ಫಲಿತಾಂಶ ಪಡೆಯುತ್ತಿದೆ ಈ ಶಾಲೆ.

ಶಾಲೆಯ ಮುಂಭಾಗ ವಿಶಾಲವಾದ ಮೈದಾನವಿದ್ದು, ಮಕ್ಕಳ ಆಟಕ್ಕೆ ಕೊರತೆ ಇಲ್ಲ. ಶಾಲೆಯಲ್ಲಿ ಗ್ರಂಥಾಲಯ, ಪ್ರಯೋಗಾಲಯ, ಗಣಕಯಂತ್ರ ಕೊಠಡಿ, ಅಡುಗೆ ಮನೆ ಇದೆ. ವಿದ್ಯಾರ್ಥಿಗಳು ಶಾಲೆಯ ಪ್ರಶಾಂತ ವಾತಾವರಣದಲ್ಲಿ ಕಲಿಯುತ್ತಿದ್ದಾರೆ.

ADVERTISEMENT

ಶಾಲೆಯ ಆವಣದಲ್ಲಿ ವಿವಿಧ ಜಾತಿಯ ಮರಗಳಿದ್ದು, ವಿದ್ಯಾರ್ಥಿಗಳು ಮರಗಳ ಕೆಳಗೆ ಕುಳಿತು ಪಾಠ ಕೇಳುತ್ತಾರೆ. ಶಾಲಾ ಸಮಯದಲ್ಲಿ ಆವರಣಕ್ಕೆ ಹೋದರೆ ಗುರುಕುಲ ಶಿಕ್ಷಣ ಪದ್ಧತಿ ನೆನಪಾಗುತ್ತದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಗುಂಪು ಅಧ್ಯಯನ, ರಸಪ್ರಶ್ನೆ ಕಾರ್ಯಕ್ರಮ, ಬೆಳಿಗ್ಗೆ ಮತ್ತು ಸಂಜೆ ವಿಶೇಷ ತರಗತಿಗಳು, ದತ್ತು ಯೋಜನೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಡೆ ವಿಶೇಷ ಗಮನ ಹರಿಸುವುದು, ಘಟಕ ಪರೀಕ್ಷೆ, ಲಘು ಪರೀಕ್ಷೆ, ಪೂರಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ದಾನಿಗಳು ಉಚಿತ ಬ್ಯಾಗ್‌, ನೋಟ್ ಪುಸ್ತಕ, ಸಮವಸ್ತ್ರ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸುವರು. ವಿದ್ಯಾರ್ಥಿಗಳಿಗೆ ಎಸ್ಎಸ್‌ಎಲ್‌ಸಿ ಮತ್ತು ಪಿಯುಸಿ ನಂತರದ ಶಿಕ್ಷಣದ ಕುರಿತು ಅರಿವು ಮೂಡಿಸಲಾಗುತ್ತಿದೆ.

ಶಾಲೆಯಲ್ಲಿ ಅನ್ನದಾಸೋಹ, ಶುದ್ಧ ಕುಡಿಯುವ ನೀರು, ಉತ್ತಮ ರಂಗಮಂದಿರ, ಶೌಚಾಲಯ ವ್ಯವಸ್ಥೆ, ಆಟದ ಮೈದಾನ, ವಿದ್ಯಾರ್ಥಿನಿಲಯವಿದೆ. 

2002-03 ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಾಲೆ ಪ್ರಶಸ್ತಿ ಲಭಿಸಿದೆ. ಪ್ರಸಕ್ತ ಸಾಲಿನಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯು ಹಮ್ಮಿಕೊಂಡಿದ್ದ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಭಾಗಮಟ್ಟದಲ್ಲೂ ಜಯಗಳಿಸಲು ಉತ್ತಮವಾಗಿ ಅಭ್ಯಾಸ ಮಾಡುತ್ತಿದ್ದಾರೆ ಎಂದು ಮುಖ್ಯ ಶಿಕ್ಷಕಿ ಎಂ.ಭಾಗ್ಯಲಕ್ಷ್ಮಿ ಮಾಹಿತಿ ನೀಡಿದರು.

ಬೆಂಗಳೂರಿನ ರಾಘವೇಂದ್ರ ಸೇವಾ ಟ್ರಸ್ಟ್ ಶಾಲೆಯನ್ನು ದತ್ತು ಪಡೆದುಕೊಂಡಿದ್ದು, ₹50 ಲಕ್ಷ ವೆಚ್ಚದ 5 ವರ್ಷಗಳ ಯೋಜನೆ ರೂಪಿಸಿದೆ. ಒಂದು ವರ್ಷದಲ್ಲಿ ₹ 5 ಲಕ್ಷ ವೆಚ್ಚದಲ್ಲಿ ಗುಣಮಟ್ಟದ ಶೌಚಾಲಯವನ್ನು ನಿರ್ಮಿಸಲಾಗಿದೆ. 

Cut-off box - ಶಿಕ್ಷಕರ ಕೊರತೆ ಶಾಲೆಯಲ್ಲಿ ದೈಹಿಕ ಶಿಕ್ಷಣ ಕನ್ನಡ ಹಿಂದಿ ಇಂಗ್ಲಿಷ್ ಭಾಷೆಯ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಪ್ರಸ್ತುತ ಅತಿಥಿ ಶಿಕ್ಷಕರು ಕೊರತೆ ನೀಗಿಸಿದ್ದರೂ ಕಾಯಂ ಶಿಕ್ಷಕರ ಅವಶ್ಯಕತೆ ಇದೆ. ಕೆಲವು ಶಾಲಾ ಕೊಠಡಿಗಳ ದುರಸ್ತಿಯಾಗಬೇಕು. ಆವರಣದ ಗೋಡೆ ಇದ್ದರೂ ನಾಲ್ಕು ಕಡೆ ಗೇಟ್ ಶಿಥಿಲವಾಗಿವೆ. ಶಾಲಾ ಸಮಯದ ನಂತರ  ಜಾನುವಾರುಗಳು ನುಗ್ಗುತ್ತದೆ. ರಾತ್ರಿ ಸಂದರ್ಭದಲ್ಲಿ ಬೇರೆ ಬೇರೆ ರೀತಿಯ ಚಟುವಟಿಕೆಗಳಿಗೂ ಅವಕಾಶವಾಗಿದೆ. ಹೀಗಾಗಿ ಗೇಟ್ ಭದ್ರಪಡಿಸಬೇಕು ಎಂಬುದು ಶಿಕ್ಷಕರ ಮನವಿಯಾಗಿದೆ.

ಅನೇಕ ಕೊರತೆಗಳ ನಡುವೆಯೂ ವಿದ್ಯಾರ್ಥಿಗಳ ಕಲಿಕೆ ಉತ್ತಮಗೊಳಿಸಲು ಶ್ರಮಿಸುತ್ತಿದ್ದೇವೆ. ಸಹ ಶಿಕ್ಷಕರು ಎಸ್.ಡಿ.ಎಂ.ಸಿ ಪರಸ್ಪರ ಸಮನ್ವಯದಿಂದ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ಶಾಲೆಗೆ ವಿಶಾಲ ಮೈದಾನ ಆವರಣ ಗೋಡೆ ಇದೆ. ಆದರೆ ನಾಲ್ಕು ಕಡೆ ಗೇಟ್ ಇಲ್ಲದಿರುವುದರಿಂದ ತೊಂದರೆಯಾಗಿದೆ. ಗ್ರಾಮ ಪಂಚಾಯಿತಿ ಅಥವಾ ಯಾರಾದರೂ ದಾನಿಗಳು ಮುಂದೆ ಬಂದು ಆವರಣ ಗೋಡೆಯ ನಾಲ್ಕು ಕಡೆ ಗೇಟ್ ನಿರ್ಮಿಸಿ ಭದ್ರಪಡಿಸಿಕೊಟ್ಟರೆ ಶೈಕ್ಷಣಿಕ ವಾತಾವರಣಕ್ಕೆ ಅನುಕೂಲವಾಗುತ್ತದೆ.
ಎಂ.ಭಾಗ್ಯಲಕ್ಷ್ಮಿ, ಮುಖ್ಯ ಶಿಕ್ಷಕಿ
ದೈಹಿಕ ಶಿಕ್ಷಣ ಶಿಕ್ಷಕರಿಲ್ಲದಿದ್ದರೂ ಸಾಧನೆ ಸರ್ಕಾರಿ ಶಾಲೆಗಳ ಬಗ್ಗೆ ತಿರಸ್ಕಾರ ತೋರುತ್ತಾರೆ. ಆದರೆ ನಮ್ಮ ಶಾಲೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 5.30ರವರೆಗೂ ಶಿಕ್ಷಕರು ವಿದ್ಯಾರ್ಥಿಗಳಿಗಾಗಿ ಶ್ರಮವಹಿಸುತ್ತಾರೆ. ಶಾಲೆಯಲ್ಲಿ ದೈಹಿಕ ಶಿಕ್ಷಕರು ಇಲ್ಲದಿದ್ದರೂ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ವಿಭಾಗ ಹಂತಕ್ಕೆ ತಂಡ ಆಯ್ಕೆಯಾಗಿದೆ.
ತ್ರಿಶಾ, 10 ನೇ ತರಗತಿ ವಿದ್ಯಾರ್ಥಿನಿ
ಕಾಡಿನ ನಡುವಿನ ಅನುಭವ ಶಿಕ್ಷಕರು ಮಕ್ಕಳ ಜತೆಯಲ್ಲಿ ಸೇರಿ ಆಟಪಾಠಗಳಲ್ಲಿ ಭಾಗವಹಿಸುತ್ತಾರೆ. ಶಾಲೆ ನಮಗೆ ಆಕರ್ಷಣೀಯವಾಗಿದೆ. ಪ್ರತಿನಿತ್ಯ ಶಾಲೆಗೆ ಬರಲು ಕಾಯುತ್ತಿರುತ್ತೇವೆ. ಕಾಡಿನ ನಡುವೆ ಕಲಿಯುವ ಅನುಭವ ಆಗುತ್ತದೆ.
ಲಿಖಿತ್ ರೆಡ್ಡಿ, 9 ನೇ ತರಗತಿ
ಉತ್ತಮ ಗುಣಮಟ್ಟದ ಶಿಕ್ಷಣ ಗ್ರಾಮೀಣ ಭಾಗದ ಶಾಲೆಗಳಲ್ಲಿ ಸರ್ಕಾರಿ ಶಾಲೆಯು ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಮುಖ್ಯ ಶಿಕ್ಷಕಿ ಹಾಗೂ ಸಹ ಶಿಕ್ಷಕರು ಬದ್ಧತೆಯಿಂದ ಮಕ್ಕಳ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ. ಪ್ರತಿ ವರ್ಷ ಅತಿಥಿ ಶಿಕ್ಷಕರ ನೇಮಕ ನಿಯೋಜನೆ ಮಾಡುವುದರಿಂದ ತೊಂದರೆಯಾಗಿದೆ. ಕಾಯಂ ಶಿಕ್ಷಕರನ್ನು ನೇಮಿಸಬೇಕು.
ರಮೇಶ್ ಪೋಷಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.