ಗೌರಿಬಿದನೂರು: ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಮಹಾತ್ಮ ಗಾಂಧೀಜಿಯವರ ಹೆಜ್ಜೆ ಗುರುತುಗಳು ಗೌರಿಬಿದನೂರಿನಲ್ಲಿ ಇವೆ. 1934ರ ಜ. 4 ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನೆರೆಯ ಹಿಂದೂಪುರದಲ್ಲಿ ದೇಣಿಗೆ ಸಂಗ್ರಹಿಸಿದ್ದ ಗಾಂಧೀಜಿ ಅವರು ಬೆಂಗಳೂರಿಗೆ ತೆರಳುತ್ತಿದ್ದರು. ಆಗ ಮಾರ್ಗಮಧ್ಯದ ಗೌರಿಬಿದನೂರಿಗೂ ಭೇಟಿ ನೀಡಿದ್ದರು.
ವಿದುರಾಶ್ವತ್ಥದ ರೈಲ್ವೆ ನಿಲ್ದಾಣದಲ್ಲಿ ಕೆಲ ನಿಮಿಷಗಳ ಕಾಲ ಭಾಷಣ ಮಾಡಿ ನಂತರ ನಗರಕ್ಕೆ ಬಂದು ಒಂದು ವೃತ್ತದಲ್ಲಿ ಭಾಷಣ ಮಾಡಿದ್ದರು. ಆ ನೆನಪಿಗಾಗಿ ಆ ವೃತ್ತವನ್ನು ಈಗ ಮಹಾತ್ಮ ಗಾಂಧೀಜಿ ವೃತ್ತ ಎನ್ನಲಾಗುತ್ತಿದೆ. ಗಾಂಧೀಜಿ ಅವರನ್ನು ಎತ್ತಿನ ಬಂಡಿಯಲ್ಲಿ ಮುಖ್ಯ ವೃತ್ತಕ್ಕೆ ಕರೆತರಲಾಗಿತ್ತು.
ಗೌರಿಬಿದನೂರು ಪಟ್ಟಣದ ಜನರು ಹರಿಜನ ನಿಧಿಗಾಗಿ ₹ 560 ನೀಡಿ ಗಾಂಧೀಜಿ ಅವರನ್ನು ಸನ್ಮಾನಿಸಿದರು.
ಗಾಂಧೀಜಿ ಅವರು ಒಮ್ಮೆ ರೈಲಿನಲ್ಲಿ ಬೆಂಗಳೂರಿಗೆ ಸಾಗುವಾಗ ಗೌರಿಬಿದನೂರು ನಿಲ್ದಾಣದಲ್ಲಿ ಇಳಿದು ಕೆಲ ಕಾಲ ಗೌರಿಬಿದನೂರು ನಾಗರಿಕರೊಂದಿಗೆ ಸ್ವಾತಂತ್ರ್ಯ ಚಳವಳಿಯ ಬಗ್ಗೆ ಚರ್ಚೆ ನಡೆಸಿದ್ದರು. ಆಗ ನನಗೆ 13 ವರ್ಷ ವಯಸ್ಸಾಗಿತ್ತು. ನಾನು ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದೆ, ಬ್ರಿಟಿಷರು ಒಂದು ತಿಂಗಳಿಗೂ ಹೆಚ್ಚು ಕಾಲ ನನ್ನನ್ನು ಜೈಲಿನಲ್ಲಿ ಇರಿಸಿದ್ದರು ಎಂದು ಸ್ವಾತಂತ್ರ್ಯ ಹೋರಾಟಗಾರ ಗೌರಿಬಿದನೂರಿನ ಎಂ.ಜೆ ಬ್ರಹ್ಮಯ್ಯ ನೆನಪಿಸಿಕೊಳ್ಳುವರು.
ಈ ಸಂದರ್ಭದಲ್ಲಿ ಸ್ಥಳೀಯ ವರ್ತಕರಿಂದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ದೇಣಿಗೆ ಸಂಗ್ರಹಿಸಿದ್ದರು. ತಾಲ್ಲೂಕು ಪಂಚಾಯಿತಿ ಆವರಣದಲ್ಲಿದ್ದ ಸರ್ಕಾರಿ ಕಚೇರಿಯ ಆವರಣದಲ್ಲಿ ಹೋರಾಟಗಾರರೊಂದಿಗೆ ಮಜ್ಜಿಗೆ ಕುಡಿದು ಸ್ವಾತಂತ್ರ್ಯ ಹೋರಾಟದ ಕೆಲವು ವಿಚಾರಗಳನ್ನು ಚರ್ಚಿಸಿ ಬಳಿಕ ಬೆಂಗಳೂರಿನತ್ತ ಸಾಗಿದ್ದರು ಎನ್ನಲಾಗಿದೆ.
1934ರ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಸ್ಥಳೀಯವಾಗಿ ನಡೆದ ಘಟನೆಗಳು ಮತ್ತು ರಾಷ್ಟ್ರೀಯ ವಿಷಯಗಳ ಅಧ್ಯಯನಕ್ಕೆ ವಿದುರಾಶ್ವತ್ಥದ ವೀರಸೌಧದಲ್ಲಿನ ಗ್ರಂಥಾಲಯದಲ್ಲಿ ದೊಡ್ಡ ಮಟ್ಟದಲ್ಲಿ ಗ್ರಂಥಗಳಿವೆ.
ವಿದುರಾಶ್ವತ್ಥದಲ್ಲಿ 1938 ಏ.25 ರಂದು ಬ್ರಿಟಿಷರು ಹತ್ಯಾಕಾಂಡ ನಡೆಸಿದ್ದರು. ಈ ಹತ್ಯಾಕಾಂಡದಲ್ಲಿ 32 ಮಂದಿ ಸ್ವಾತಂತ್ರ್ಯ ಹೋರಾಟಗಾರರು, ನಾಗರಿಕರು ಹುತಾತ್ಮರಾಗಿದ್ದಾರೆ. ಈ ವಿಷಯ ತಿಳಿದ ಮಹಾತ್ಮ ಗಾಂಧಿ ಅವರು ರಾಮ ರಾಜ್ಯವಾಗಿದ್ದ ಮೈಸೂರು ಸಂಸ್ಥಾನದಲ್ಲಿ ಇಂತಹ ರಾಕ್ಷಸ ಕೃತ್ಯ ನಡೆಯಬಾರದಾಗಿತ್ತು ಎಂದು ವಿಷಾದ ವ್ಯಕ್ತಪಡಿಸಿದ್ದರು. ಈ ಘಟನೆಯ ಬಗ್ಗೆ ಹರಿಜನ ಪತ್ರಿಕೆಯಲ್ಲಿಯೂ ಪ್ರಸ್ತಾಪಿಸಿದ್ದರು.
ಇಲ್ಲಿನ ಪರಿಸ್ಥಿತಿ ತಿಳಿದುಕೊಳ್ಳಲು ಮಹಾತ್ಮಗಾಂಧಿ ಅವರು ಸರ್ದಾರ್ ವಲ್ಲಭಾಯಿ ಪಟೇಲ್ ಹಾಗೂ ಆಚಾರ್ಯ ಕೃಪಲಾನಿ ಅವರನ್ನು ವಿದುರಾಶ್ವತ್ಥಕ್ಕೆ ಕಳುಹಿಸಿದ್ದರು. ಇವರ ವರದಿಯ ಆದರದ ಮೇಲೆ ವಿಚಾರಣೆಗಾಗಿ ವೇಪಾರಾಮೇಶಂ ಕಮಿಟಿಯನ್ನು ಬ್ರಿಟಿಷ್ ಸರ್ಕಾರ ರಚಿಸಿತು.
ಹೀಗೆ ಮಹಾತ್ಮರ ಗುರುತುಗಳು ಗೌರಿಬಿದನೂರಿನಲ್ಲಿಯೂ ಪುಟ್ಟದಾಗಿವೆ. ಆದರೆ ಅವರಿಂದ ಪ್ರಭಾವಿತರಾದ ಅಂದಿನ ಜನ ಸಮೂಹ ತಾಲ್ಲೂಕಿನಲ್ಲಿ ದೊಡ್ಡ ಮಟ್ಟದ್ದಾಗಿತ್ತು. ಅದಕ್ಕೆ ನಿದರ್ಶನ ವಿದುರಾಶ್ವತ್ಥದ ಘಟನೆ.
ಬಾಪೂ ಜೊತೆ ಎಚ್.ಎನ್
ತಾಲ್ಲೂಕಿಗೆ ಗಾಂಧಿ ಅವರ ಜೊತೆಗಿನ ನಂಟುಗಳನ್ನು ಸ್ಮರಿಸುವಾಗ ಮುಖ್ಯವಾಗಿ ಗುರುತಾಗುವುದು ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ಅವರು. ಗೌರಿಬಿದನೂರು ತಾಲ್ಲೂಕಿನ ಹೊಸೂರಿನ ಅವರು ಗಾಂಧೀವಾದಿ ಎಂದೇ ಅವರು ನಾಡಿಗೆ ಪರಿಚಿತರು.
ಎಚ್. ನರಸಿಂಹಯ್ಯ ಅವರು ಬಾಲಕನಿದ್ದಾಗ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಒಮ್ಮೆ ಗಾಂಧೀಜಿ ಬೆಂಗಳೂರಿಗೆ ಬಂದಿರುತ್ತಾರೆ. ಹಿಂದಿಯಲ್ಲಿ ಗಾಂಧೀಜಿ ಅವರು ಭಾಷಣ ಮಾಡುವಾಗ ಅಲ್ಲಿರುವವರಿಗೆ ಹಿಂದಿ ಅರ್ಥವಾಗುವುದಿಲ್ಲ. ಆಗ ಬಾಲಕ ಎಚ್. ನರಸಿಂಹಯ್ಯ ಕನ್ನಡಕ್ಕೆ ತರ್ಜುಮೆ ಮಾಡುತ್ತಾರೆ. ಆಗ ಗಾಂಧೀಜಿ ಅವರು ನರಸಿಂಹಯ್ಯ ನವರ ಭುಜದ ಮೇಲೆ ಕೈ ಹಾಕಿ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಗಾಂಧೀಜಿ ಅವರ ಪ್ರಭಾವಕ್ಕೆ ಒಳಗಾದ ನರಸಿಂಹಯ್ಯ ಅವರು ಬದುಕಿನ ಕೊನೆಯವರೆಗೂ ಸರಳ ಉಡುಗೆ, ಸರಳ ಬಟ್ಟೆ, ವಾಸಿಸಲು ಸಣ್ಣ ಕೋಣೆ ಹೀಗೆ ಸರಳ ಬದುಕನ್ನು ರೂಢಿಕೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.