ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯಕ್ಕೆ ಬುಧವಾರ ಬಂದ 54 ಅಡಿ ಎತ್ತರದ ರಥವನ್ನು ಗ್ರಾಮಸ್ಥರು, ಭಕ್ತರು ಮತ್ತು ದೇವಸ್ಥಾನ ಸಮಿತಿಯವರು ಅದ್ದೂರಿಯಾಗಿ ಸ್ವಾಗತಿಸಿದರು.
ಯೋಗ ನಂದೀಶ್ವರ ಮತ್ತು ಭೋಗನಂದೀಶ್ವರ ದೇವಾಲಯಗಳ ರಥವು ಮುರಿದಿತ್ತು. ಈ ಅಂಗವಾಗಿ ಕುಂದಾಪುರ ತಾಲ್ಲೂಕಿನ ಕೋಟೇಶ್ವರದ ಕುಂಭಾಶಿಯ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದ ರಥಶಿಲ್ಪಿಗಳಾದ ಲಕ್ಷ್ಮಿನಾರಾಯಣ ಆಚಾರ್ಯ ಮತ್ತು ಸೋದರರು ನಂದಿ ದೇಗುಲಕ್ಕೆ ನೂತನ ಬ್ರಹ್ಮರಥವನ್ನು ರೂಪಿಸಿದ್ದಾರೆ. 54 ಅಡಿ ಎತ್ತರದ ಈ ರಥಕ್ಕೆ ₹2.25 ಕೋಟಿ ವೆಚ್ಚವಾಗಿದೆ.
ಟ್ರಕ್‌ನಲ್ಲಿ ಬುಧವಾರ ರಥವನ್ನು ತರಲಾಯಿತು. ನಂದಿ ಕ್ರಾಸ್‌ನಲ್ಲಿ ಕೆಲ ಸಮಯ ಟ್ರಕ್ ನಿಲ್ಲಿಸಲಾಯಿತು. ಆಗ ಜನರು ಕುತೂಹಲದಿಂದ ವೀಕ್ಷಿಸಿದರು.
ದೇಗುಲದ ಬಳಿಗೆ ಬಂದ ರಥಕ್ಕೆ ನಂದಿ ಗ್ರಾಮದ ಗ್ರಾಮಸ್ಥರು ಹಾಗೂ ದೇವಸ್ಥಾನದ ಅರ್ಚಕರು ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ನಂದಿ ದೇವಾಲಯದ ಆವರಣಕ್ಕೆ ಬಂದ ಟ್ರಕ್‌ನಿಂದ ಕ್ರೇನ್‌ಗಳ ಮೂಲಕ ಕೆಳಕ್ಕೆ ಇಳಿಸಲಾಯಿತು.
ನ.25ರಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ ಎಂದು ಅರ್ಚಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.