ಚಿಕ್ಕಬಳ್ಳಾಪುರ: ಈ ಬಾರಿ ಬಿಸಿಲ ಝಳ ನಾಗರಿಕರನ್ನು ಹೈರಾಣು ಮಾಡಿತು. ಜಿಲ್ಲೆಯಲ್ಲಿ 40 ಡಿಗ್ರಿಯವರೆಗೆ ಉಷ್ಣಾಂಶ ದಾಖಲಾಯಿತು. ನಿತ್ಯವೂ ಸರಾಸರಿ 37ರಿಂದ 38 ಡಿಗ್ರಿ ಉಷ್ಣಾಂಶ ದಾಖಲಾಗುತ್ತಿತ್ತು.
ಬಿಸಿಲ ಧಗೆಯಿಂದ ತತ್ತರಿಸಿದ ಜನರು ರಾತ್ರಿ ಬೆಳಿಗ್ಗೆ ಎನ್ನದೆ ಪ್ಯಾನ್, ಕೂಲರ್ ಗಳನ್ನು ದಿನಪೂರ್ಣ ಬಳಸಿದರು. ತಣ್ಣನೆಯ ವಾತಾವರಣದಲ್ಲಿ ಇರಲು ಬಯಸಿದರು. ತಣ್ಣನೆಯ ಕುಡಿಯುವ ನೀರು, ತಣ್ಣನೆಯ ಪಾನಿಯಗಳ ಮೊರೆ ಹೋದರು.
ಆ ಪರಿಣಾಮ ಗೃಹಜ್ಯೋತಿ ವಿದ್ಯುತ್ ಬಳಕೆಯೂ ಗಣನೀಯವಾಗಿ ಹೆಚ್ಚಿತು. ಮನೆಗಳಲ್ಲಿ ನಿತ್ಯ ವಿದ್ಯುತ್ ಬಳಕೆ ಹೆಚ್ಚಿತು. ಬೇಸಿಗೆಯಲ್ಲಿ ವಿದ್ಯುತ್ ಇಲ್ಲ ಎಂದರೆ ಮನೆಗಳ ಒಳಗೆ ಇರಲು ಕಷ್ಟ ಸಾಧ್ಯ ಎನ್ನುವ ಸ್ಥಿತಿ ಎದುರಾಯಿತು.
ಜಿಲ್ಲೆಯ ಬೆಸ್ಕಾಂ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಬಿಸಿಲ ಧಗೆ ತಾರಕವಾಗಿದ್ದ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಗರಿಷ್ಠ ಮಟ್ಟದಲ್ಲಿ ಜನರು ವಿದ್ಯುತ್ ಬಳಸಿದ್ದಾರೆ.
ಅದರಲ್ಲಿಯೂ ಮಾರ್ಚ್ ಗೆ ಹೋಲಿಸಿದರೆ ಏಪ್ರಿಲ್ ನಲ್ಲಿ ಬಿಸಿಲು ತೀವ್ರವಾಗಿತ್ತು. ಏಪ್ರಿಲ್ ನಲ್ಲಿ ಗೃಹಜ್ಯೋತಿ ವಿದ್ಯುತ್ ಬಳಕೆ ಸಹ ಹೆಚ್ಚಿತು.
2004ರ ಮಾರ್ಚ್ ನಲ್ಲಿ ಜಿಲ್ಲೆಯಲ್ಲಿ ಒಟ್ಟು 15.66 ಮಿಲಿಯನ್ ಯುನಿಟ್ ವಿದ್ಯುತ್ ಬಳಕೆ ಆಗಿತ್ತು. ಏಪ್ರಿಲ್ ನಲ್ಲಿ ಬಿಸಿಲು ಹೆಚ್ಚಿದಂತೆ ವಿದ್ಯುತ್ ಬಳಕೆ ಸಹ ಹೆಚ್ಚಿತು. ಈ ತಿಂಗಳಲ್ಲಿ 15.66 ಮಿಲಿಯನ್ ಯುನಿಟ್ ಗಳು ಗೃಹಜ್ಯೋತಿ ಯೋಜನೆಯ ವಿದ್ಯುತ್ ಬಳಕೆ ಆಯಿತು. ಮಾರ್ಚ್ ಮತ್ತು ಏಪ್ರಿಲ್ ನಡುವಿನ ಬಳಕೆ ಅಂತರ 3.79 ಮಿಲಿಯನ್ ಯುನಿಟ್ ಗಳಾದವು.
ಜಿಲ್ಲೆಯಲ್ಲಿ 3.33 ಲಕ್ಷ ಕುಟುಂಬಗಳು ಗೃಹಜ್ಯೋತಿ ವಿದ್ಯುತ್ ಬಳಕೆಗೆ ಅರ್ಹವಾಗಿವೆ. 3.12 ಲಕ್ಷಗಳು ಕುಟುಂಬಗಳು ಈ ಸೌಲಭ್ಯಕ್ಕೆ ನೋಂದಾಯಿಸಿಕೊಂಡಿವೆ.
ಬೇಸಿಗೆಯ ದಿನಗಳಲ್ಲಿ ಗೃಹಜ್ಯೋತಿ ಬಳಕೆಯ ಗರಿಷ್ಠ ಮನೆಗಳಲ್ಲಿ ವಿದ್ಯುತ್ ಬಳಕೆ ಸಹ ಹೆಚ್ಚಿದೆ. ತಂಪಾದ ನೀರು ಬಳಸಲು, ಐಸ್ ಕ್ರೀಂ ತಯಾರಿಸಲು ಹೀಗೆ ನಾನಾ ರೀತಿಯಲ್ಲಿ ಪ್ರಿಡ್ಜ್ ಬಳಕೆ ಆಗಿದೆ. ಧಗೆಯಿಂದ ಪಾರಾಗಲು ಜನರು. ಕೂಲರ್ ಗಳನ್ನು ಖರೀದಿಸಿದ್ದಾರೆ. ಕೆಲವರು ಹವಾನಿಯಂತ್ರಿತ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿದ್ದಾರೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಮನೆಗಳಲ್ಲಿ ದಿನದ 24 ಗಂಟೆಯೂ ಪ್ಯಾನ್ ಗಳು ಓಡಿವೆ.
ಬೇಸಿಗೆಯ ಅವಧಿಯಲ್ಲಿ ಮಳೆ ಇಲ್ಲದಿದ್ದರೂ ಜಿಲ್ಲೆಯಲ್ಲಿ ವಿದ್ಯುತ್ ಗೆ ತೀವ್ರ ಭಂಗವೇನೂ ಆಗಿರಲಿಲ್ಲ. ಬೆಸ್ಕಾಂ ಸಮರ್ಪಕವಾಗಿ ಗೃಹಜ್ಯೋತಿ ವಿದ್ಯುತ್ ಪೂರೈಕೆ ಮಾಡಿತು. ಈ ಎಲ್ಲ ಕಾರಣದಿಂದ ವಿದ್ಯುತ್ ಬಳಕೆ ಸಹ ಹೆಚ್ಚಿತು.
ಬೇಸಿಗೆ ಕಾರಣದಿಂದ ಬಳಕೆ ಹೆಚ್ಚಿದೆ. ಪ್ಯಾನ್ ಕೂಲರ್ ಪ್ರಿಡ್ಜ್ ಎಸಿ ಸೇರಿದಂತೆ ಹವಾನಿಯಂತ್ರಿತ ವ್ಯವಸ್ಥೆಯನ್ನಯ ಜನರು ಗಣನೀಯವಾಗಿ ಬಳಸಿದ್ದಾರೆ. ಇದರಿಂದ ಸಹಜವಾಗಿ ವಿದ್ಯುತ್ ಬಳಕೆ ಗರಿಷ್ಠವಾಗಿದೆ. ಬಹಳಷ್ಟು ಕಡೆಗಳಲ್ಲಿ ಮಳೆಯೂ ಇರಲಿಲ್ಲ. ಇದರಿಂದಾಗಿ ವಿದ್ಯುತ್ ಗೆ ಬೇಡಿಕೆ ಸಹ ಇತ್ತು.–ಕೆ.ಆನಂದ ಕುಮಾರ್, ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಚಿಕ್ಕಬಳ್ಳಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.