ಗುಡಿಬಂಡೆ: ಕಳೆದ 20 ವರ್ಷಗಳಿಂದ ಪರಿಶಿಷ್ಟ ಜಾತಿಯ ಮಹಿಳೆಯು ಉಳುಮೆ ಮಾಡುತ್ತಿರುವ ಜಮೀನಿಗೆ ಈಗ ತಾಲ್ಲೂಕು ಆಡಳಿತ ಪ್ರವೇಶ ನಿರ್ಬಂಧಿಸಿ ಫಲಕ ಹಾಕಿರುವುದು ತಾಲ್ಲೂಕಿನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಪರಿಶಿಷ್ಟ ಮಹಿಳೆಗೆ ಅನ್ಯಾಯ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ನಡೆದಿರುವುದು ಏನು: ತಾಲ್ಲೂಕಿನ ಹಂಪಸಂದ್ರ ಗ್ರಾಮ ಪಂಚಾಯಿತಿಯ ಕಡೇಹಳ್ಳಿ ಗ್ರಾಮದ ಸರ್ವೆ ನಂಬರ್ 131ರಲ್ಲಿ ಇರುವ 2.31 ಎಕರೆ ಸರ್ಕಾರಿ ಜಮೀನನ್ನು ಸುಮಾರು 20 ವರ್ಷಗಳಿಂದ ಪರಿಶಿಷ್ಟ ಜಾತಿಯ ಆದಿಲಕ್ಷ್ಮಮ್ಮ ಉಳುಮೆ ಮಾಡುತ್ತಿದ್ದಾರೆ.
2019ರಲ್ಲಿ ಬಗರ್‌ಹುಕುಂ ಅಕ್ರಮ ಸಕ್ರಮ ಯೋಜನೆಯಡಿ ಈ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಡುವಂತೆ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹೀಗಿದ್ದರೂ ತಾಲ್ಲೂಕು ಅಡಳಿತ ರಾಜಕೀಯ ಒತ್ತಡಗಳಿಗೆ ಮಣಿದು ಈ ಜಮೀನಿನಲ್ಲಿ ಆಶ್ರಯ ಯೋಜನೆಯ ನಿವೇಶನಗಳನ್ನು ರೂಪಿಸಲು ಮುಂದಾಗಿತ್ತು.
ಇದನ್ನು ಪ್ರಶ್ನಿಸಿ ಆದಿಲಕ್ಷ್ಮಮ್ಮ ಹೈಕೋರ್ಟ್ ಮೊರೆ ಹೋಗಿದ್ದರು. ತಡೆಯಾಜ್ಞೆ ತಂದು ಜಮೀನು ಸಾಗುವಳಿ ಮಾಡುತ್ತಿದ್ದಾರೆ. 22 ತಿಂಗಳ ನಂತರ ತಾಲ್ಲೂಕು ಅಡಳಿತ ‘ಯಾರು ಪ್ರವೇಶ ಮಾಡಬಾರದು’ ಎಂದು ಬುಧವಾರ ನಾಮಫಲಕ ಹಾಕಿದೆ.
‘ಸರ್ವೆ 131ರ ಜಮೀನಿನನ್ನು ಆಶ್ರಯ ಯೋಜನೆಗೆ ಮಂಜೂರು ಮಾಡಿದ್ದಾರೆ. ಈ ಬಗ್ಗೆ ನಾವು ಹೈಕೋರ್ಟ್ ಮೊರೆ ಹೋಗಿದ್ದೆವು. ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ನಿಯಮಾನುಸಾರ ಪರಿಶೀಲಿಸುವಂತೆ ತಹಶೀಲ್ದಾರ್‌ಗೆ ಆದೇಶಿಸಿದೆ’ ಎಂದು ಆದಿಲಕ್ಷ್ಮಮ್ಮ ತಿಳಿಸಿದರು.
ಆದರೆ ಅಧಿಕಾರಿಗಳು ರಾಜಕಾರಣಿಗಳ ಒತ್ತಡಗಳಿಗೆ ಮಣಿದು ನಮ್ಮ ಸ್ವಾಧೀನ ಅನುಭವಕ್ಕೆ ಪದೇ ಪದೇ ತೊಂದರೆ ಮಾಡುತ್ತಿದ್ದಾರೆ. ಗ್ರಾಮದ ಕೆಲವು ರಾಜಕೀಯ ಮುಖಂಡರು ತಮ್ಮ ವೈಯಕ್ತಿಕ ಪ್ರತಿಷ್ಠೆಗೆ ಮತ್ತು ರಾಜಕೀಯ ಲಾಭಕ್ಕಾಗಿ ದಲಿತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ದಲಿತರನ್ನು ನಮ್ಮ ವಿರುದ್ಧ ಎತ್ತಿಕಟ್ಟಿ ದಬ್ಬಾಳಿಕೆ ಮಾಡುವಂತೆ ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಜಮೀನು ನಂಬಿ ಜೀವನ ಮಾಡುತ್ತಿದ್ದೇವೆ. ಇದನ್ನು ಸಹಿಸದೆ ಸಂಬಂಧವಿಲ್ಲದ ಮೂರನೇ ವ್ಯಕ್ತಿಗಳು ಪದೇ ಪದೇ ನಮ್ಮ ವ್ಯವಸಾಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಸ್ವಾಧೀನ ಅನುಭವದಿಂದ ಹೊರ ಹಾಕಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.
ಅಕ್ರಮ ಸಕ್ರಮದಲ್ಲಿ ಜಾಮೀನು ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಲಾಗಿದೆ. ಆದರೆ ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮದ ಕೆಲವು ರಾಜಕೀಯ ಮುಖಂಡರ ಒತ್ತಡಗಳಿಗೆ ವಸ್ತುನಿಷ್ಠ ವರದಿಯನ್ನು ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸದೆ ಸುಳ್ಳು ಕಡತಗಳನ್ನು ಸಿದ್ದಪಡಿಸಿದ್ದಾರೆ ಎಂದರು.
ಕಂದಾಯ ಇಲಾಖೆ ಅಧಿಕಾರಿಗಳ ವರದಿಯಂತೆ. ಜಿಲ್ಲಾಧಿಕಾರಿ ಆಶ್ರಯ ಯೋಜನೆಗೆ ಜಮೀನು ಮಂಜೂರು ಮಾಡಿದ್ದಾರೆ. ಇದನ್ನು ನಾವು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ತಡೆಯಾಜ್ಞೆ ತಂದಿದ್ದೇವೆ ಎಂದು ತಿಳಿಸಿದರು.
ಕಡೇಹಳ್ಳಿ ಸರ್ವೆ ನಂಬರ್ 131ರ ಜಮೀನಿನ ವಿಚಾರವಾಗಿ ಹೈಕೋರ್ಟ್ ತಡೆಯಾಜ್ಞೆ ಇದ್ದರೂ ಗ್ರಾಮದ ನಿವೇಶನ ರಹಿತರು ಈ ಜಮೀನಲ್ಲಿ ಗುಡಿಸಲು ಹಾಕುವುದಾಗಿ ಮನವಿ ನೀಡಿದ್ದಾರೆ. ಅರ್ಜಿದಾರರು ಹಾಗೂ ನಿವೇಶನರಹಿತರು ಪ್ರವೇಶಿಸದಂತೆ ಮತ್ತು ಕಾನೂನು ಭಂಗ ಉಂಟಾಗಬಹುದು ಎಂದು ನಾಮ ಫಲಕ ಆಳವಡಿಸಿದ್ದೇವೆ ಎಂದು ತಹಶೀಲ್ದಾರ್ ಸಿಗ್ಬತುಲ್ಲಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.