ಶಿಡ್ಲಘಟ್ಟ: ಪ್ರೀತಿಸಿದ ಯುವತಿಯನ್ನು ವಿವಾಹವಾಗಲು ನಿರಾಕರಿಸಿದ್ದಕ್ಕೆ ಯುವಕನ್ನು ಥಳಿಸಿ ಮದುವೆ ಮಾಡಿಸಿದ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ. ಶಿಡ್ಲಘಟ್ಟದ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ಘಟನೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಚಿಕ್ಕಬಳ್ಳಾಪುರ ತಾಲ್ಲೂಕು ಇಟ್ಟಪ್ಪನಹಳ್ಳಿಯ ಪರಿಶಿಷ್ಟ ಜಾತಿಯ ಯುವತಿ ಹಾಗೂ ಚಿಕ್ಕಕಿರುಗಂಬಿ ಗ್ರಾಮದ ಪರಿಶಿಷ್ಟ ಪಂಗಡದ ಚೇತನ್ ಎರಡು ವರ್ಷದಿಂದ ಪ್ರೀತಿಸುತ್ತಿದ್ದರು. ಯುವತಿ ಈಗ ಗರ್ಭಿಣಿ ಆಗಿದ್ದಾಳೆ.
ವಿವಾಹ ಮಾಡಿಕೊಳ್ಳುವಂತೆ ಚೇತನ್‌ಗೆ ಯುವತಿ ಕಡೆಯವರು ಹೇಳುತ್ತಿದ್ದರೂ ಆತ ನಿರಾಕರಿಸಿದ್ದ. ಶುಕ್ರವಾರ ಮಾತುಕತೆಗೆ ಎಂದು ಎರಡೂ ಕಡೆಯವರು ಪ್ರವಾಸಿ ಮಂದಿರದ ಬಳಿ ಸೇರಿದ್ದರು. ಯುವತಿಯನ್ನು ಬೆಂಬಲಿಸಿ ವಿವಿಧ ಸಂಘಟನೆಗಳ ಸದಸ್ಯರೂ ಸ್ಥಳದಲ್ಲಿ ಇದ್ದರು.
ಈ ವೇಳೆ ಚೇತನ್, ‘ನನ್ನಿಂದಲೆ ಗರ್ಭಿಣಿ ಆಗಿದ್ದಾಳೆ ಎನ್ನುವುದಕ್ಕೆ ಆಧಾರ ಏನಿದೆ’ ಎಂದು ಕೇಳಿದ್ದಾನೆ. ಆಗ ಯುವತಿ ಹಾಗೂ ಜೊತೆಯಲ್ಲಿದ್ದ ಮಹಿಳೆಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ ಯುವತಿ ಚೇತನ್ ಮೇಲೆ ಹಲ್ಲೆ ನಡೆಸಿದ್ದಾರೆ.
ನಂತರ ಸ್ಥಳದಲ್ಲಿದ್ದ ವಿವಿಧ ಸಂಘಟನೆಗಳ ಮುಖಂಡರು ಇಬ್ಬರ ಮನವೊಲಿಸಿ ಸ್ಥಳದಲ್ಲೇ ವಿವಾಹ ಮಾಡಿಸಿದ್ದಾರೆ. ಈ ಎಲ್ಲ ಘಟನೆಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು ಆ ವಿಡಿಯೊಗಳು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.