ADVERTISEMENT

ಗೌರಿಬಿದನೂರು | ಕೃಷಿಯಲ್ಲಿ ಬದುಕು ಬಂಗಾರವಾಗಿಸಿಕೊಂಡ ಹಂಪಸಂದ್ರ ಪುಟ್ಟಣ್ಣ

ಎ.ಎಸ್.ಜಗನ್ನಾಥ್
Published 19 ನವೆಂಬರ್ 2023, 6:35 IST
Last Updated 19 ನವೆಂಬರ್ 2023, 6:35 IST
ಗೌರಿಬಿದನೂರು ತಾಲ್ಲೂಕಿನ ಹಂಪಸಂದ್ರದಲ್ಲಿ ಉತ್ತಮ ಇಳುವರಿಯ ಏಲಕ್ಕಿ ಬಾಳೆ ಬೆಳೆದಿರುವ ಪುಟ್ಟಣ್ಣ
ಗೌರಿಬಿದನೂರು ತಾಲ್ಲೂಕಿನ ಹಂಪಸಂದ್ರದಲ್ಲಿ ಉತ್ತಮ ಇಳುವರಿಯ ಏಲಕ್ಕಿ ಬಾಳೆ ಬೆಳೆದಿರುವ ಪುಟ್ಟಣ್ಣ   

ಗೌರಿಬಿದನೂರು: ಇರುವ ಅತ್ಯಲ್ಪ ಭೂಮಿಯಲ್ಲೇ ಆಧುನಿಕ ವಿಧಾನದಲ್ಲಿ ಕೃಷಿ ಮಾಡುವ ಜತೆಗೆ ಹೈನುಗಾರಿಕೆ ಅಳವಡಿಸಿಕೊಂಡು ನೆಮ್ಮದಿಯ ಬದುಕು ರೂಪಿಸಿ ಇತರರಿಗೆ ಮಾದರಿಯಾಗಿ ಬದುಕುತ್ತಿದ್ದಾರೆ ಹಂಪಸಂದ್ರದ ಪ್ರಗತಿಪರ ರೈತ ಪುಟ್ಟಣ್ಣ.

ತಾಲ್ಲೂಕಿನ ಹೊಸೂರು ಹೋಬಳಿ ರಮಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿನ ಹಂಪಸಂದ್ರ ಗ್ರಾಮದ ಪುಟ್ಟಣ್ಣ ಓದಿದ್ದು ಬರೀ ಎರಡನೇ ತರಗತಿ. ಆದರೆ ಕೃಷಿ ಮತ್ತು ಹೈನುಗಾರಿಕಾ ಚಟುವಟಿಕೆಗಳಲ್ಲಿ ಸುಮಾರು ಮೂರು ದಶಕಗಳಿಗೂ ಅಧಿಕ ಅನುಭವ ಹೊಂದುವ ಮೂಲಕ ದೊಡ್ಡ ಪದವಿಯನ್ನೇ ಮಾಡಿದಷ್ಟು ಅನುಭವಿಗಳಾಗಿದ್ದಾರೆ. ಅವರು ಕೃಷಿ ಮಾಡುವ ವಿಧಾನ ಮತ್ತು ಶಿಸ್ತಿನ ಜೀವನವು ಈ‌ ಭಾಗದ ಜನಕ್ಕೆ ಮಾದರಿಯಾಗಿದೆ.

ತನಗಿರುವ ಒಂದು ಎಕರೆ ಸ್ವಂತ ಭೂಮಿಯ ಜತೆಗೆ ನೆರೆಯ ರೈತರ ಭೂಮಿಯನ್ನು ಗುತ್ತಿಗೆಗೆ ಪಡೆದು ಎರಡೂವರೆ ಎಕರೆ ಭೂಮಿಯಲ್ಲಿ ಸುಮಾರು 2,400 ಏಲಕ್ಕಿ ಬಾಳೆಗಿಡ ನಾಡಿ ಮಾಡಿದ್ದು, ಅದು ಬೆಳೆದು ಫಸಲು ಕೈಸೇರಿದೆ. ಕೇವಲ ಬಾಳೆ ಬೆಳೆಯಲ್ಲಿ ವರ್ಷಕ್ಕೆ ₹20 ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಾ ಬಡತನದಲ್ಲೂ ಶ್ರೀಮಂತಿಕೆಯ ಜೀವನ ನಡೆಸುತ್ತಿದ್ದಾರೆ ರೈತ ಪುಟ್ಟಣ್ಣ.

ADVERTISEMENT

ಕೃಷಿ ಕಾರ್ಯದ ಜತೆಗೆ ಟ್ರ್ಯಾಕ್ಟರ್ ಹೊಂದಿರುವ ಇವರು ಉತ್ತಮ ಚಾಲಕರೂ ಆಗಿದ್ದಾರೆ. ಸುತ್ತ ಮುತ್ತಲಿನ ಗ್ರಾಮಗಳ ರೈತರ ಜಮೀನು ಉಳುಮೆ ಮಾಡಿ ಹದ ಮಾಡುವಲ್ಲಿ ಕ್ರಿಯಾಶೀಲರಾಗಿದ್ದಾರೆ.

ಪುಟ್ಟಣ್ಣ ಕೃಷಿ ಚಟುವಟಿಕೆ ಜತೆಗೆ ಕುರಿ, ಮೇಕೆ, ಹಸು ಸಾಕಾಣಿಕೆ ಮಾಡುತ್ತಿದ್ದು, ಇದರಲ್ಲೂ ಸಾಕಷ್ಟು ಲಾಭಾಂಶ ಪಡೆಯುವ ಚತುರರಾಗಿದ್ದಾರೆ. ಇವರ ಎಲ್ಲ ಕಾರ್ಯಗಳಿಗೆ ಪತ್ನಿ ಬೆನ್ನೆಲುಬಾಗಿ ಕೆಲಸ ಮಾಡುತ್ತಾರೆ. ಒಟ್ಟಾರೆ ಬೇಸಾಯದ ‌ಜತೆಗೆ ಹೈನುಗಾರಿಕೆಯನ್ನು ಅಳವಡಿಸಿಕೊಂಡಿರುವ ಇವರ ಕುಟುಂಬವು ಪ್ರಸ್ತುತ ‌ದಿನಮಾನಗಳಲ್ಲಿ ಮಾದರಿ ಮತ್ತು ಪ್ರಗತಿಪರ ರೈತರಾಗಿರುವುದು ನಿಜಕ್ಕೂ ಶ್ಲಾಘನೀಯ.

‘ನಾನು ಹೇಳಿಕೊಳ್ಳುವಷ್ಟು ವಿದ್ಯಾವಂತನಲ್ಲ. ಆದರೆ ಸಮಾಜದಲ್ಲಿ ಕೃಷಿ ಚಟುವಟಿಕೆಗಳನ್ನು ಮತ್ತು ಹೈನುಗಾರಿಕೆಯನ್ನು ನಂಬಿದ್ದು ಆಸಕ್ತಿಯಿಂದ ಮಾಡುವ ಮ‌ೂಲಕ ಸ್ವಾವಲಂಬಿ ಬದುಕನ್ನು ರೂಢಿಸಿಕೊಂಡಿದ್ದೇನೆ. ಯಾವುದೇ ಉದ್ಯಮಿಗೆ ಕಡಿಮೆ ಇಲ್ಲದಂತೆ ವ್ಯವಸಾಯದಲ್ಲೇ ಸಂಪಾದನೆ ಮಾಡುವ ಆತ್ಮಸ್ಥೈರ್ಯ ನನ್ನಲ್ಲಿದೆ. ಇಡೀ ನಮ್ಮ ಕುಟುಂಬ ಕೃಷಿ ಮತ್ತು ಹೈನುಗಾರಿಕಾ ಚಟುವಟಿಕೆಯ ಮೂಲಕವೇ ನೆಮ್ಮದಿಯ ಬದುಕನ್ನು ರೂಪಿಸಿಕೊಂಡಿದ್ದೇವೆ. ರೈತರು ತಮ್ಮ ಕೆಲಸದಲ್ಲಿ ಆಸಕ್ತಿ ವಹಿಸಿ ಶ್ರಮಿಸಬೇಕು. ಯಾವುದೇ ಚಟಗಳಿಗೆ ದಾಸರಾಗದಿದ್ದಲ್ಲಿ ಶ್ರೀಮಂತಿಕೆಯಿಂದ ಬದುಕು ಸಾಗಿಸಬಹುದು’ ಎನ್ನುತ್ತಾರೆ ರೈತ ಪುಟ್ಟಣ್ಣ.

ಭೂಮಿಯನ್ನು ನಂಬಿ ಆಸಕ್ತಿಯಿಂದ ವ್ಯವಸಾಯ ಮಾಡಿದರೆ ರೈತರ ಬದುಕಿನಲ್ಲಿ ನಷ್ಟವಾಗುವುದಿಲ್ಲ. ನಿರೀಕ್ಷಿತ ‌ಮಟ್ಟದಲ್ಲಿ ಆದಾಯ ಪಡೆಯಲು ಸಾಧ್ಯ. ಜೀವನದಲ್ಲಿ ಎದುರಾಗುವ ಎಲ್ಲ‌ ಸವಾಲುಗಳನ್ನು ಸ್ವೀಕರಿಸಿ ಮುನ್ನಡೆಯಬೇಕು. ರೈತರು ಸಮಾಜದಲ್ಲಿ ಇತರ ಕ್ಷೇತ್ರದ ಜನರಿಗಿಂತ ಶ್ರೇಷ್ಠ ಕಾರ್ಯ ಎಂಬುದನ್ನು ಪುಟ್ಟಣ್ಣ ಅವರನ್ನು ನೋಡಿ ಕಲಿಯಬೇಕು. ಪ್ರಸ್ತುತ ಸಮಾಜದಲ್ಲಿ ನಿಜಕ್ಕೂ ಅವರು ಮಾದರಿ ರೈತರಾಗಿರುವುದೇ ಸಂತಸ ಎನ್ನುತ್ತಾರೆ‌ ಕುದುರೆಬ್ಯಾಲ್ಯದ ನಿವಾಸಿ ಕೆ.ವಿ.ಪ್ರಸನ್ನ ಕುಮಾರ್.

ಗೌರಿಬಿದನೂರು ತಾಲ್ಲೂಕಿನ ಹಂಪಸಂದ್ರದಲ್ಲಿನ ತನ್ನ ಜಮೀನಿನಲ್ಲಿ ಉತ್ತಮ ಇಳುವರಿಯ ಏಲಕ್ಕಿ ಬಾಳೆ ಬೆಳೆದಿರುವ ಪುಟ್ಟಣ್ಣ
ಉತ್ತಮ ಇಳುವರಿಯ ಏಲಕ್ಕಿ ಬಾಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.