ಪ್ರಜಾವಾಣಿ ವಾರ್ತೆ
ಚಿಂತಾಮಣಿ (ಚಿಕ್ಕಬಳ್ಳಾಪುರ): ನಗರದ ಹೊರವಲಯದ ತಿಮ್ಮಸಂದ್ರ ಗ್ರಾಮದ ವಕ್ಫ್ ವಿವಾದಿತ ಜಮೀನಿಗೆ ಭಾನುವಾರ ಭೇಟಿ ನೀಡಲು ಮುಂದಾದ ಮಾಜಿ ಸಂಸದ ಮುನಿಸ್ವಾಮಿ ನೇತೃತ್ವದ ಬಿಜೆಪಿ ಕಾರ್ಯಕರ್ತರ ತಂಡ ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು.
ಕನಂಪಲ್ಲಿ ದೇವಾಲಯ ಬಳಿ ರೈತರ ಸಭೆ ನಡೆಸಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ತಿಮ್ಮಸಂದ್ರದ ವಿವಾದಿತ ಜಮೀನಿಗೆ ಭೇಟಿ ನೀಡಲು ಮುಂದಾದಾಗ ಪೊಲೀಸರು ಅವರನ್ನು ತಡೆದರು.
ಆಗ ಮಾಜಿ ಸಂಸದ ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ನಾಲ್ವರನ್ನು ಮಾತ್ರ ತಾವೇ ಸ್ಥಳಕ್ಕೆ ಕರೆದುಕೊಂಡು ಹೋಗುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದರು.
ರೈತರ ಜೊತೆಯಲ್ಲೇ ಸ್ಥಳಕ್ಕೆ ಹೋಗಬೇಕು ಎಂದು ಸಂಸದ ಮುನಿಸ್ವಾಮಿ ಪಟ್ಟು ಹಿಡಿದರು. ಅವರ ಹಟಕ್ಕೆ ಮಣಿದ ಅಧಿಕಾರಿಗಳು ಕೊನೆಗೆ ಹತ್ತು ಜನರ ತಂಡವನ್ನು ಸ್ಥಳದ ಸಮೀಪ ಹೋಗಲು ಅವಕಾಶ ಮಾಡಿಕೊಟ್ಟರು.
ಆದರೆ, ಈ ತಂಡಕ್ಕೆ ವಿವಾದಿತ ಜಮೀನಿನ ಒಳಗಡೆ ಹೋಗಲು ಅವಕಾಶ ನೀಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಮಾಜಿ ಸಂಸದ ಅಲ್ಲಿಯೇ ಧರಣಿ ಕೂರುವುದಾಗಿ ಪಟ್ಟು ಹಿಡಿದರು. ಕಾನೂನು ಮೀರಿದರೆ ಬಂಧಿಸಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದರು. ಆಗ ಮತ್ತೊಮ್ಮೆ ಉಪವಿಭಾಗಧಿಕಾರಿ, ತಹಶೀಲ್ದಾರ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಮುಗಿಬಿದ್ದರು.
ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸೆ, ಕೋಲಾರ ಎಸ್‌ಪಿ ನಿಖಿಲ್, ಮೂವರು ಹೆಚ್ಚುವರಿ ಎಸ್.ಪಿ, ಮೂವರು ಡಿವೈಎಸ್‌ಪಿ ಈ ವೇಳೆ ಸ್ಥಳದಲ್ಲಿದ್ದರು. ಐದು ಕೆಎಸ್ಆರ್‌ಪಿ ತುಕಡಿ ಹಾಗೂ ಎರಡು ಜಿಲ್ಲೆಗಳ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.
ತಿಮ್ಮಸಂದ್ರ ಗ್ರಾಮದ ಸರ್ವೆ ನಂಬರ್ 13 ಮತ್ತು 20 ಜಮೀನಿನಲ್ಲಿ ಉಳುಮೆ ಮಾಡುವ ಸಂಬಂಧ ರೈತರು ಮತ್ತು ಜಾಮಿಯಾ ಮಸೀದಿ ಕಮಿಟಿ ಪದಾಧಿಕಾರಿಗಳು ನಡುವೆ ಶುಕ್ರವಾರ ಜಟಾಪಟಿ ನಡೆದಿತ್ತು. ಪೊಲೀಸರು ಮಧ್ಯ ಪ್ರವೇಶಿಸಿ ಎರಡೂ ಗುಂಪುಗಳನ್ನು ಸಮಾಧಾನಪಡಿಸಿ ಕಳಿಸಿದ್ದರು. ಸ್ಥಳದಲ್ಲಿ ಪೊಲೀಸ್ ಕಾವಲು ಹಾಕಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.