ADVERTISEMENT

ಶಿಡ್ಲಘಟ್ಟ: ಅಮ್ಮನಕೆರೆಗೆ ಎಚ್‌.ಎನ್ ವ್ಯಾಲಿ ನೀರು ಪೂರೈಕೆ

ಅಧಿಕಾರಿಗಳ ಜೊತೆ ಶಾಸಕ ವಿ. ಮುನಿಯಪ್ಪ ಚರ್ಚೆ l ವಾರದೊಳಗೆ ನೀರು ಹರಿಸಲು ತಾಕೀತು

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 4:52 IST
Last Updated 17 ಜುಲೈ 2021, 4:52 IST
ಶಿಡ್ಲಘಟ್ಟದ ಶಾಸಕ ವಿ. ಮುನಿಯಪ್ಪ ಅವರು ಎಚ್‌.ಎನ್ ವ್ಯಾಲಿ ಯೋಜನೆಯಡಿ ಅಮ್ಮನಕೆರೆಗೆ ನೀರು ಹರಿಸುವ ವಿಚಾರವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿದರು
ಶಿಡ್ಲಘಟ್ಟದ ಶಾಸಕ ವಿ. ಮುನಿಯಪ್ಪ ಅವರು ಎಚ್‌.ಎನ್ ವ್ಯಾಲಿ ಯೋಜನೆಯಡಿ ಅಮ್ಮನಕೆರೆಗೆ ನೀರು ಹರಿಸುವ ವಿಚಾರವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿದರು   

ಶಿಡ್ಲಘಟ್ಟ: ಮುಂದಿನ ವಾರದಲ್ಲಿ ನಗರ ಹೊರವಲಯದ ಅಮ್ಮನಕೆರೆಗೆ ಗುಡಿಹಳ್ಳಿಯ ಕೆರೆಯಿಂದ ಎಚ್‌.ಎನ್ ವ್ಯಾಲಿಯ ನೀರು ಹರಿದು ಬಿಡಲು ಅಗತ್ಯವಾದ ಎಲ್ಲ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಎಚ್‌.ಎನ್ ವ್ಯಾಲಿ ಯೋಜನೆಯ ಎಂಜಿನಿಯರ್ ಪ್ರದೀಪ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಎಚ್‌.ಎನ್ ವ್ಯಾಲಿ ಯೋಜನೆಯಡಿ ಅಮ್ಮನಕೆರೆಗೆ ನೀರು ಹರಿಸುವ ಕಾರ್ಯ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಶಾಸಕ ವಿ. ಮುನಿಯಪ್ಪ ಅವರು ಕರೆದಿದ್ದ ಅಧಿಕಾರಿಗಳ ಅನೌಪಚಾರಿಕ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

ಈಗಾಗಲೇ ಶಿಡ್ಲಘಟ್ಟ ತಾಲ್ಲೂಕಿನ ಗುಡಿಹಳ್ಳಿ ಕೆರೆಗೆ ನೀರು ಹರಿದು ಬರುತ್ತಿದ್ದು, ಮುಂದಿನ ವಾರ ಅಮ್ಮನ ಕೆರೆಗೂ ನೀರು ಹರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ADVERTISEMENT

ಎಚ್‌.ಎನ್ ವ್ಯಾಲಿ ಯೋಜನೆಯಡಿ ಬರುವ ಕೆರೆಗಳಲ್ಲಿ ಕೆರೆಗಳು ತುಂಬುವ ತನಕ ಕಾಯಬಾರದು. ಶೇ 50ರಷ್ಟು ತುಂಬಿದರೆ ಸಾಕು. ಮುಂದಿನ ಕೆರೆಗಳಿಗೆ ತೂಬು ಮೂಲಕ ನೀರು ಹರಿಸಲು ಸಚಿವರ ಆದೇಶವಿದ್ದು ಅದರಂತೆ ಅಮ್ಮನಕೆರೆಗೆ ಮುಂದಿನ ವಾರ ನೀರು ಹರಿಸಲು ಅಗತ್ಯ ಎಲ್ಲ ಕ್ರಮಕೈಗೊಳ್ಳಲಾಗಿದೆ ಎಂದರು.

ಆದರೆ, ಕೆರೆ ಅಂಗಳದಲ್ಲಿ ಜಂಗಲ್ ತೆಗೆಯುವುದು, ಸಮಾಧಿ ಸ್ಥಳ ಗುರ್ತಿಸುವುದು, ಕೆರೆ ಅಂಗಳವನ್ನು ಸಮತಟ್ಟು ಮಾಡುವಂತಹ ಕೆಲ ಕೆಲಸಗಳು ಬಾಕಿ ಇವೆ. ಆ ಕೆಲಸಗಳು ಸಂಪೂರ್ಣವಾಗಿ ಆಗಬೇಕಿದೆ ಎಂದು ಮಾಹಿತಿ ನೀಡಿದರು.

ಯೋಜನಾಧಿಕಾರಿ ಕೋಟೇಶ್ವರ ರಾವ್ ಮಾತನಾಡಿ, ಕೆರೆಯಲ್ಲಿನ ಜಾಲಿ ಮರಗಳನ್ನು ತೆಗೆಯಲು ಟೆಂಡರ್ ಪಡೆದಿದ್ದ ವ್ಯಕ್ತಿಯು ನಿಧಾನಗತಿಯಲ್ಲಿ ಮರಗಳನ್ನು ತೆರವುಗೊಳಿಸುವ ಕಾರ್ಯ ಮಾಡಿದ್ದರಿಂದ ತೆರವು ಕಾರ್ಯ ತಡವಾಯಿತು. ಇದೀಗ ಎಲ್ಲ ಮರಗಳನ್ನು ತೆರವುಗೊಳಿಸಿದ್ದು ಸಣ್ಣಪುಟ್ಟ ಗಾತ್ರದ ಜಂಗಲ್ ಮಾತ್ರ ಉಳಿದುಕೊಂಡಿದೆ. ಅವುಗಳನ್ನು ತೆಗೆದು ನೆಲ ಸಮತಟ್ಟು ಮಾಡಿಕೊಳ್ಳುವ ಕಾರ್ಯ ಆಗಬೇಕಿದೆ. ಆ ಕೆಲಸವನ್ನು ಎಚ್‌.ಎನ್ ವ್ಯಾಲಿ ಯೋಜನೆಯಲ್ಲೇ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜತೆಗೆ ಕೆರೆ ಅಂಚಿನಲ್ಲಿ ಸಮಾಧಿಗಳಿದ್ದು, ಅವುಗಳ ಸರ್ವೆ ಕಾರ್ಯ ಮಾಡಿಸಬೇಕು. ಆ ಜಾಗವನ್ನು ಬಿಟ್ಟು ಉಳಿದ ಜಾಗಕ್ಕೆ ತಡೆಗೋಡೆ ನಿರ್ಮಾಣ ಮಾಡುವ ಕಾರ್ಯ ಆಗಬೇಕಿದೆ. ಅದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೇ ಪತ್ರ ಬರೆದಿದ್ದು ಆ ಕೆಲಸವೂ ವಾರದಲ್ಲಿ ಮುಗಿಯಲಿದೆ ಎಂದರು.

ಇನ್ನು ಕೆರೆಯಲ್ಲಿನ ಮರಗಳನ್ನು ಈಗಾಗಲೇ ತೆಗೆಯಲಾಗಿದೆ. ಉಳಿದ ಮರಗಳನ್ನು ತೆಗೆಯದೆ ಇನ್ನುಳಿದ ಕೆಲಸ ಮಾಡಿಕೊಳ್ಳಲು ನಮ್ಮ ಇಲಾಖೆಯಿಂದ ಏನೂ ತಕರಾರು ಇಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು
ಸ್ಪಷ್ಟಪಡಿಸಿದರು.

ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಮುನಿಯಪ್ಪ ಅವರು, ಕಳೆದ ತಿಂಗಳು ಜಿಲ್ಲೆಗೆ ಭೇಟಿ ನೀಡಿದ್ದ ಸಚಿವ ಮಾಧುಸ್ವಾಮಿ ಅವರ ಬಳಿ ಚರ್ಚಿಸಿದಂತೆ ಅಮ್ಮನಕೆರೆಗೆ ನೀರು ಹರಿಸುವ ಕಾರ್ಯ ಪ್ರಗತಿಯಲ್ಲಿದೆ. ಅಂದು ನೀಡಿದ ಗಡುವಿನ ಒಳಗೆ ನೀರು ಹರಿಸಬೇಕು ಎಂದು ತಾಕೀತು ಮಾಡಿದರು.

ಇದೀಗ ನೀಡಿದ ಎಲ್ಲ ಮಾಹಿತಿಯಂತೆ ಮುಂದಿನ ವಾರದಲ್ಲಿ ನೀರು ಹರಿಸುವ ಬಗ್ಗೆ ಸ್ಪಷ್ಟಪಡಿಸಿದ್ದು, ಯಾವುದೇ ಕಾರಣಕ್ಕೂ ಅದು ತಪ್ಪಬಾರದು. ಮುಂದಿನ ವಾರ ಅಮ್ಮನಕೆರೆಗೆ ನೀರು ಹರಿಯಲೇಬೇಕು ಎಂದು ಸೂಚಿಸಿದರು.

ಅರಣ್ಯ ಅಧಿಕಾರಿಗಳಾದ ಸುರೇಶ್, ದಿವ್ಯಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.