ಶಿಡ್ಲಘಟ್ಟ: ‘ಭಾರತದ ಸಂವಿಧಾನದ ಅರ್ಥ, ರಚನೆ, ಶಾಸನ, ವೈಶಿಷ್ಟ್ಯಗಳು ಮತ್ತು ಮಹತ್ವವನ್ನು ಅರಿಯಬೇಕು. ದೇಶದ ಮೌಲ್ಯ, ತತ್ವಗಳು ಮತ್ತು ಆಡಳಿತದ ಚೌಕಟ್ಟನ್ನು ಒಳಗೊಂಡಿರುವ ಸಂವಿಧಾನ ಅರಿತಾಗ ಎಲ್ಲರಲ್ಲೂ ದೇಶಪ್ರೇಮ, ಕಾನೂನಿನ ಮೇಲೆ ಗೌರವವೂ ಹೆಚ್ಚುತ್ತದೆ’ ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.
ತಾಲ್ಲೂಕಿನ ಗಡಿಭಾಗ ಲಕ್ಕಹಳ್ಳಿ ಗೇಟ್‌ನಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಭಾನುವಾರ ನಿರ್ಮಿಸಿದ್ದ ಮಾನವ ಸರಪಳಿಯಲ್ಲಿ ಸಂವಿಧಾನ ಪ್ರತಿಜ್ಞೆ ಸ್ವೀಕರಿಸಿ ಮಾತನಾಡಿದರು.
ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ನಾಗರಿಕರು, ಅಧಿಕಾರಿ ಮತ್ತು ಸಿಬ್ಬಂದಿ ಎಲ್ಲರೂ ಈ ದಿನಾಚರಣೆಯಲ್ಲಿ ಭಾಗವಹಿಸಿ ಮಾನವ ಸರಪಳಿ ನಿರ್ಮಿಸಿದ್ದು ಎಲ್ಲರಿಗೂ ಧನ್ಯವಾದ ತಿಳಿಸಿದರು.
ತಹಶೀಲ್ದಾರ್ ಬಿ.ಎನ್.ಸ್ವಾಮಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ‘ಶಿಡ್ಲಘಟ್ಟ ತಾಲ್ಲೂಕಿನಲ್ಲಿ 25 ಕಿ.ಮೀ ಮಾನವ ಸರಪಳಿಯನ್ನು ನಿರ್ಮಿಸಲು ಅಧಿಕಾರಿಗಳು, ಶಿಕ್ಷಕರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಮಹಿಳೆಯರು ಎಲ್ಲರೂ ಉತ್ಸಾಹದಿಂದ ಭಾಗಿಯಾಗಿದ್ದಾರೆ. ನಾವೆಲ್ಲಾ ಒಂದು, ಸಂವಿಧಾನವೇ ನಮಗೆ ಶ್ರೇಷ್ಠ. ಮಾನವ ಬಂಧುತ್ವವನ್ನು ಸಾರೋಣ ಎನ್ನುವ ಸಂದೇಶದೊಂದಿಗೆ ನಾವೆಲ್ಲಾ ಮಾನವ ಸರಪಳಿ ನಿರ್ಮಿಸಿದ್ದೇವೆ’ ಎಂದರು.
ಸಂವಿಧಾನದ ಮಹತ್ವ ಸಾರುವ ಪ್ರಸ್ತಾವನೆ ಓದುವುದು ಹಾಗೂ ಪ್ರಜಾಪ್ರಭುತ್ವದ ರಕ್ಷಣೆಯ ಹೊಣೆಗಾರಿಕೆ ನೆನಪಿಸುವ ಜಾಗೃತಿ ಮೂಡಿಸಲಾಯಿತು.
ತಾಲ್ಲೂಕಿನ ಚಿಕ್ಕಬಳ್ಳಾಪುರ ಭಾಗದ ಗಡಿಭಾಗ ಲಕ್ಕಹಳ್ಳಿ ಗೇಟ್‌ನಿಂದ ಕೋಲಾರ ಭಾಗದ ಗಡಿ ಎಚ್.ಕ್ರಾಸ್ ವರೆಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಇಲಾಖೆ ಅಧಿಕಾರಿ, ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮಾನವ ಸರಪಳಿ ನಿರ್ಮಿಸಿದ್ದರು.
ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ, ಬಿಇಒ ನರೇಂದ್ರ ಕುಮಾರ್, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ್, ಡಾ.ವೆಂಕಟೇಶಮೂರ್ತಿ, ಮಂಜುನಾಥ್, ವೆಂಕಟಸ್ವಾಮಿ, ರೂಪ ನವೀನ್, ಅನಿಲ್ ಕುಮಾರ್, ಮಂಜುನಾಥ್, ಫುಡ್ ಮನೋಹರ್, ಶ್ರೀನಿವಾಸ್, ಸುಬ್ಬಾರೆಡ್ಡಿ, ಮೇಲೂರು ಮಂಜುನಾಥ್, ಬಂಕ್ ಮುನಿಯಪ್ಪ, ತಾದೂರು ರಘು, ತಮೀಮ್ ಅನ್ಸಾರಿ, ನಾರಾಯಣಸ್ವಾಮಿ, ಡಾಲ್ಫಿನ್ ನಾಗರಾಜ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.