ಚಿಕ್ಕಬಳ್ಳಾಪುರ: ಆವಲಗುರ್ಕಿ ಸಮೀಪದ ಜಾಲಾರಿ ನರಸಿಂಹಸ್ವಾಮಿ ಬೆಟ್ಟದ ಬಳಿ ನಿರ್ಮಾಣಗೊಳ್ಳುತ್ತಿರುವ ಈಶಾ ಯೋಗ ಕೇಂದ್ರ ಜಾಗತಿಕ ಕೇಂದ್ರವಾಗಿ ಬೆಳೆಯಲಿದ್ದು ಸರ್ಕಾರ ಎಲ್ಲ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲ್ಲೂಕಿನ ಆವಲಗುರ್ಕಿ ಗ್ರಾಮದ ಬಳಿಯ ಜಾಲಾರಿ ನರಸಿಂಹಸ್ವಾಮಿ ಬೆಟ್ಟದಲ್ಲಿ ಈಶಾ ಯೋಗ ಕೇಂದ್ರ ಶನಿವಾರ ಹಮ್ಮಿಕೊಂಡಿದ್ದ ನಾಗ ಮಂಟಪ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಆದಾಯವನ್ನು ಅವರು ದುಪ್ಪಟ್ಟು ಮಾಡಲು ಮುಂದಾಗಿದ್ದಾರೆ. ಭವಿಷ್ಯದಲ್ಲಿ ಅದನ್ನು ರಾಜ್ಯದಾದ್ಯಂತ ಪಸರಿಸಲಾಗುವುದು’ ಎಂದು ಹೇಳಿದರು.
‘ಇಲ್ಲಿನ ನಾಗ ಪ್ರತಿಮೆಯಲ್ಲಿ ಸೃಷ್ಟಿಯ ಪರಿಕಲ್ಪನೆ ಬಿಂಬಿಸಿದ್ದಾರೆ. ನಾಗರಿಕತೆ ಬೆಳೆದು, ಪ್ರಗತಿ ಹೊಂದಿದ್ದೇವೆ. ಆದರೆ, ಸಂಸ್ಕೃತಿ ಏನಾಗಿದೆ ಎನ್ನುವ ಚಿಂತನೆ ಅವರದ್ದು. ನಾಗರಿಕತೆ ಬೆಳೆದಿದೆ. ಆದರೆ, ನಾವು ಏನಾಗಿದ್ದೇವೆ ಎನ್ನುವುದು ಸಂಸ್ಕೃತಿ’
ಎಂದರು.
ರೈತರು ಹೈನುಗಾರಿಕೆ, ತೋಟಗಾರಿಕೆ ಮತ್ತು ಕೃಷಿ ಕ್ಷೇತ್ರದಲ್ಲಿ ಜಿಲ್ಲೆಯ ಜನರು ದೇಶಕ್ಕೆ ಮಾದರಿ ಆಗಿದ್ದಾರೆ. ಇಂತಹ ಕಡೆ ಈ ಕ್ಷೇತ್ರ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರ ಅಧ್ಯಾತ್ಮಿಕವಾಗಿ ದೊಡ್ಡ ಮಟ್ಟದಲ್ಲಿ ಬೆಳೆಯಲಿಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ಹೇಳಿದರು.
ಪಾಪಾಗ್ನಿ ಮಠದ ವೃಷಭಾನಂದ ಉಮೇಶ್ವರ ಸ್ವಾಮೀಜಿ, ನಿವೃತ್ತ ಪೊಲೀಸ್ ಅಧಿಕಾರಿ ಗೋಪಾಲ್ ಹೊಸೂರು, ಇಸ್ರೊ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಆರ್.ಕೆ.ಶ್ರೀವಾಸ್ತವ್
ಇದ್ದರು.
‘ರೈತರ ಆದಾಯ ಹೆಚ್ಚಿಸುವ ಗುರಿ’
‘ರೈತರ ಆದಾಯ ಹೆಚ್ಚಿಸುವುದು ನಮ್ಮ ಉದ್ದೇಶ. ಚಿಕ್ಕಬಳ್ಳಾಪುರದಲ್ಲಿ ರೈತ ಉತ್ಪಾದಕ ಗುಂಪು ಮಾಡಬೇಕು ಎನ್ನುವ ಆಲೋಚನೆ ಇದೆ. ಈಗಾಗಲೇ ದೇಶದ ಹಲವು ಕಡೆಗಳಲ್ಲಿ ರೈತ ಉತ್ಪಾದಕ ಗುಂಪು ರಚಿಸಿದ್ದೇವೆ. ಅಂತಹ ಕಡೆಗಳಲ್ಲಿ ರೈತರ ಆದಾಯ ಶೇ 800 ರಷ್ಟು ಹೆಚ್ಚಿದೆ’ ಎಂದು ಜಗ್ಗಿ ವಾಸುದೇವ್ ಹೇಳಿದರು.
‘ಇಲ್ಲಿ 112 ಅಡಿ ಆದಿಯೋಗಿ ಮೂರ್ತಿಯನ್ನು ನಾಲ್ಕೂವರೆ ತಿಂಗಳಲ್ಲಿ ನಿರ್ಮಿಸಲಾಗಿದೆ. ಜೊತೆಗೆ ಸಂಸ್ಕೃತಿ ಶಾಲೆ, ನಾಯಕತ್ವ ತರಬೇತಿ ಅಕಾಡೆಮಿ, ಯೋಗ ಶಾಲೆ, ಅಧ್ಯಾತ್ಮ ಕೇಂದ್ರ ನಿರ್ಮಾಣವಾಗುತ್ತಿವೆ. ಅಧ್ಯಾತ್ಮ ಎಂದರೆ ನಮ್ಮ ಒಳಗೆ ನಾವು ನೋಡಿಕೊಳ್ಳುವುದೇ ಆಗಿದೆ. ಇದು ಒಂದು ಅಧ್ಯಾತ್ಮಿಕ ಕ್ಷೇತ್ರ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.