ADVERTISEMENT

ಚಿಕ್ಕಬಳ್ಳಾಪುರ: ನುಗ್ಗೆ ಕೃಷಿ ನೀಡಿತು ಬಾಳಿಗೆ ನಗು

ಎರಡು ಎಕರೆಯಲ್ಲಿ ನುಗ್ಗೆ ಬೆಳೆದಿರುವ ಗೌರಿಬಿನೂರು ತಾಲ್ಲೂಕಿನ ರಾಯರೇಖಲಹಳ್ಳಿ ನಂಜುಂಡೇಗೌಡ

ಡಿ.ಎಂ.ಕುರ್ಕೆ ಪ್ರಶಾಂತ
Published 25 ಜನವರಿ 2022, 5:40 IST
Last Updated 25 ಜನವರಿ 2022, 5:40 IST
ನುಗ್ಗೆ ಗಿಡಗಳಲ್ಲಿ ಕಾಯಿಗಳು ಕಟ್ಟಿದಾಗ ನಂಜುಂಡಗೌಡ ಅವರ ಪತ್ನಿ ರತ್ನಮ್ಮ ಮುಖದಲ್ಲಿ ಸಂತಸ ಮೂಡಿದ ಕ್ಷಣ
ನುಗ್ಗೆ ಗಿಡಗಳಲ್ಲಿ ಕಾಯಿಗಳು ಕಟ್ಟಿದಾಗ ನಂಜುಂಡಗೌಡ ಅವರ ಪತ್ನಿ ರತ್ನಮ್ಮ ಮುಖದಲ್ಲಿ ಸಂತಸ ಮೂಡಿದ ಕ್ಷಣ   

ಚಿಕ್ಕಬಳ್ಳಾಪುರ:‘ನುಗ್ಗೆ ಕೃಷಿ ಮಾಡುತ್ತೇನೆ ಎಂದಾಗ ಕೆಲವರು ನಕ್ಕಿದ್ದರು. ಆದರೆ ಈಗ ಜನರೇ ಮಾದರಿಯ ತೋಟ ಎನ್ನುತ್ತಿದ್ದಾರೆ’–ಹೀಗೆ ಹೇಳುವಾಗ ಗೌರಿಬಿದನೂರು ತಾಲ್ಲೂಕಿನಅಲಕಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಯರೇಖಲಹಳ್ಳಿಯ ನಂಜುಂಡ ಗೌಡ ಅವರ ಮುಖದಲ್ಲಿ ಸಂಭ್ರಮದ ಅರಳುತ್ತದೆ.

ನಂಜುಂಡ ಗೌಡ ಅವರದ್ದು ಕೃಷಿ ಕುಟುಂಬ. ಬಡತನದ ಕಾರಣದಿಂದ 4ನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರು. ಕೆಲವು ವರ್ಷ ಮನೆಯವರ ಜತೆ ಜಮೀನಿನಲ್ಲಿ ಕೆಲಸ ಮಾಡಿದರು. ನಂತರ ತಮ್ಮ 4 ಎಕರೆ ಜಮೀನಿನಲ್ಲಿ ಸಣ್ಣ ಪುಟ್ಟ ಬೆಳೆ ಮತ್ತು ರಾಗಿ, ಜೋಳ ಬೆಳೆಯುತ್ತಿದ್ದರು. ಹೀಗೆ ಕೃಷಿ ಮಾಡಿಕೊಂಡಿದ್ದವರ ಬದುಕಿಗೆ ಬಲ ನೀಡಿದ್ದು ನರೇಗಾ ಯೋಜನೆ.

‘ನಮ್ಮ ಪಕ್ಕದ ಜಮೀನಿನಲ್ಲಿ ಬದು ಮಾಡಿದ್ದರು. ನಾನೂ ಅದನ್ನು ನೋಡಿ ನರೇಗಾ ಯೋಜನೆ ಬಗ್ಗೆ ಮಾಹಿತಿ ಪಡೆದೆ. ನುಗ್ಗೆಬೆಳೆಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಇರುವುದು ನೋಡಿ ನುಗ್ಗೆ ಕೃಷಿಗೆ ಆಲೋಚಿಸಿದೆ. ತೋಟಗಾರಿಕಾ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದೆ’ ಎಂದು ನಂಜುಂಡ ಗೌಡ ಮಾಹಿತಿ ನೀಡುತ್ತಾರೆ.

2 ಎಕರೆಯಲ್ಲಿ ನುಗ್ಗೆ ನಾಟಿ ಮಾಡಿರುವೆ. ಪ್ರತಿ 9 ಅಡಿ ದೂರಕ್ಕೆ 10 ಅಡಿ ಅಗಲಕ್ಕೆ ಒಂದು ಸಸಿಯಂತೆ ಒಟ್ಟು 784 ಹೆಚ್ಚು ನುಗ್ಗೆ ಗಿಡಗಳನ್ನು ನೆಟ್ಟಿದ್ದೇವೆ. ಸಾವಯವ ಗೊಬ್ಬರ ಹಾಕಿದ್ದೇವೆ. ಗಿಡಗಳು ಹುಲುಸಾಗಿ ಬೆಳೆದವು. ಫಸಲನ್ನು ಪಡೆಯುತ್ತಿದ್ದು ಉತ್ತಮ ಆದಾಯ ಕಾಣುತ್ತಿದ್ದೇವೆ ಎಂದು ತಿಳಿಸುತ್ತಾರೆ.

ADVERTISEMENT

ನುಗ್ಗೆ ಗಿಡಗಳು ಹಿತ್ತಲಲ್ಲಿ ಸಾಮಾನ್ಯ. ಆದರೆ ಅದನ್ನೇ ಕೃಷಿಯಾಗಿ ಮಾಡಿದರೆ ಆರ್ಥಿಕ ಬದುಕು ಉತ್ತಮವಾಗುತ್ತದೆ. ಇದಕ್ಕೆ ನಾನೇ ಉದಾಹರಣೆ ಎಂದು ಗೌಡರು ನುಡಿಯುತ್ತಾರೆ.

‘ನುಗ್ಗೆ ಬಹುವಾರ್ಷಿಕ ತರಕಾರಿ ಬೆಳೆ. ಪ್ರಪಂಚದಲ್ಲಿ ನುಗ್ಗೆ ಉತ್ಪಾದನೆಯಲ್ಲಿ ಭಾರತವು ಉತ್ತಮ ಸ್ಥಾನ ಪಡೆದಿದೆ. ವಿಶ್ವದ ಬೇಡಿಕೆಯಲ್ಲಿ ಶೇ 80ರಷ್ಟು ರಫ್ತು ಭಾರತದಿಂದ ಆಗುತ್ತಿದೆ. ಗಿಡದ ಪ್ರತಿ ಭಾಗ ಉಪಯೋಗಕ್ಕೆ ಬರುತ್ತದೆ. ಕಾಯಿ ಮಾತ್ರವಲ್ಲದೆ ಸೊಪ್ಪಿಗೂ ಬೇಡಿಕೆ ಹೆಚ್ಚಾಗುತ್ತಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ನುಗ್ಗೆ ಸೊಪ್ಪನ್ನು ಒಣಗಿಸಿ ಪುಡಿ ಮಾಡಿ ಅದರಿಂದ ಟೀ ಪುಡಿ ಮಾಡುವರು. ಅದರ ಪುಡಿ ಸಹ ಸೇವಿಸುವರು. ತೊಗಟೆ ಆಯುರ್ವೇದ ಔಷಧಿಯಾಗಿ ಬಳಕೆ ಆಗುತ್ತಿದೆ. ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ನುಗ್ಗೆಯನ್ನು ಮುಖ್ಯಬೆಳೆಯಾಗಿ ಬೆಳೆಯುವ ಜತೆಗೆ ಇದರ ನಡುವೆ ಅನೇಕ ಅಂತರ ಬೆಳೆಗಳನ್ನು ಸಹ ಬೆಳೆಯಬಹುದು. ಆರ್ಥಿಕ ಅನುಕೂಲ ಪಡೆಯಬಹುದು ಎಂದು ಅಧಿಕಾರಿಗಳು ಹೇಳುವರು.

ನಂಜುಂಡ ಗೌಡ ಅವರ ಸಂ‍ಪರ್ಕ ಸಂಖ್ಯೆ9019774145.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.