ADVERTISEMENT

ಚಿಕ್ಕಬಳ್ಳಾಪುರ | ಆದಾಯ ತೆರಿಗೆ; 2,340 ಪಡಿತರ ಚೀಟಿ ಬದಲು

ಬಿಪಿಎಲ್, ಅಂತ್ಯೋದಯದಿಂದ ಎಪಿಎಲ್‌ಗೆ ಪರಿವರ್ತನೆ

ಡಿ.ಎಂ.ಕುರ್ಕೆ ಪ್ರಶಾಂತ
Published 13 ಅಕ್ಟೋಬರ್ 2024, 5:44 IST
Last Updated 13 ಅಕ್ಟೋಬರ್ 2024, 5:44 IST
ಪಡಿತರ ಚೀಟಿ (ಸಾಂದರ್ಭಿಕ ಚಿತ್ರ)
ಪಡಿತರ ಚೀಟಿ (ಸಾಂದರ್ಭಿಕ ಚಿತ್ರ)   

ಚಿಕ್ಕಬಳ್ಳಾಪುರ: ಆದಾಯ ತೆರಿಗೆ ಪಾವತಿದಾರರು ಮತ್ತು ಸರ್ಕಾರಿ ನೌಕರರು ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿದ್ದರೆ ಅವುಗಳನ್ನು ಸರ್ಕಾರವು ಎಪಿಎಲ್‌ ಪಡಿತರ ಚೀಟಿಯಾಗಿ ಪರಿವರ್ತನೆ ಮಾಡುತ್ತಿದೆ. 

ಆದಾಯ ತೆರಿಗೆ ಪಾವತಿಸುವವರು ಮತ್ತು ಸರ್ಕಾರಿ ನೌಕರರ ಬಳಿಯ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿಗಳನ್ನು ‘ಅನರ್ಹ’ಗೊಳಿಸಲಾಗುತ್ತಿದೆ. ಆ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2,340 ಪಡಿತರ ಚೀಟಿಗಳನ್ನು ಬದಲಾವಣೆ ಮಾಡಲಾಗಿದೆ. 

ಚಿಂತಾಮಣಿ ತಾಲ್ಲೂಕಿನಲ್ಲಿ 607 ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿ ಅವುಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಅನರ್ಹ ಪಡಿತರ ಚೀಟಿಗಳು ಪತ್ತೆಯಾಗಿರುವ ತಾಲ್ಲೂಕು ಇದಾಗಿದೆ. ಗುಡಿಬಂಡೆಯಲ್ಲಿ ಕಡಿಮೆ ಅಂದರೆ 79 ಪಡಿತರ ಚೀಟಿಗಳು ಅನರ್ಹವಾಗಿವೆ.

ADVERTISEMENT

ಆದಾಯ ತೆರಿಗೆ ಪಾವತಿಸುವ, ಸರ್ಕಾರಿ ನೌಕರರು ಹಾಗೂ ವಾರ್ಷಿಕ ಕುಟುಂಬದ ಆದಾಯ ಮೀರಿ ಸಂಪಾದನೆ ಮಾಡುವ ಅರ್ನಹರು 2,340 ಬಿಪಿಎಲ್ ಕಾರ್ಡ್ ಹೊಂದಿರುವುದು ಬೆಳಕಿಗೆ ಬಂದಿದೆ. 83 ಮಂದಿ ಸರ್ಕಾರಿ ನೌಕರರ ಬಳಿ ಬಿಪಿಎಲ್ ಕಾರ್ಡ್‌ಗಳು ಇವೆ.

ಆಹಾರ ಇಲಾಖೆಯು ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲು ಮುಂದಾಗಿತ್ತು. ಬಡತನರೇಖೆಗಿಂತ ಕೆಳಗೆ ಇರುವ ಅರ್ಹ ಬಡ ಕುಟುಂಬಗಳಿಗೆ ಸಿಗಬೇಕಾದ ಬಿಪಿಎಲ್ ಪಡಿತರ ಚೀಟಿಗಳು ಜಿಲ್ಲಾದ್ಯಂತ ಬರೋಬ್ಬರಿ 8,000 ಕ್ಕೂ ಅಧಿಕ ಅರ್ನಹ ಕುಟುಂಬಗಳ ಪಾಲಾಗಿರುವುದು ಕಂಡು ಬಂದಿದೆ.

ವಾರ್ಷಿಕ ₹ 1.20 ಲಕ್ಷ ಆದಾಯ ಗಳಿಸುವ 5,973 ಮಂದಿ ಬಳಿ ಬಿಪಿಎಲ್ ಕಾರ್ಡ್‌ಗಳು ಇವೆ ಎಂದು ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಬಿಪಿಎಲ್ ಪಡಿತರ ಚೀಟಿಗಳನ್ನು ಅಕ್ರಮವಾಗಿ ಪಡೆದಿರುವ ಅರ್ನಹರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮುಂದಾಗಿದೆ. ಜಿಲ್ಲೆಯಲ್ಲಿ ಒಟ್ಟು 8,396 ಅರ್ನಹರ ಬಳಿ ಬಿಪಿಎಲ್ ಪಡಿತರ ಚೀಟಿಗಳು ಇರುವುದನ್ನು ಆಹಾರ ಇಲಾಖೆ ಪತ್ತೆ ಮಾಡಿದೆ.

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿ ಬಳಿಕ ಕೆಲವರು ಅಡ್ಡದಾರಿಯಲ್ಲಿ ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆದಿದ್ದಾರೆ. ಅದರಲ್ಲೂ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳನ್ನು ಮೀರಿ ಕೆಲವರು ಬಡವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಸಿಯಲು ಬಿಪಿಎಲ್ ಕಾರ್ಡ್‌ಗಳನ್ನು ಪಡೆದಿದ್ದಾರೆ

ಜಿಲ್ಲೆಯಲ್ಲಿ ಇಲ್ಲಿಯವರೆಗೂ ಪತ್ತೆ ಮಾಡಲಾಗಿರುವ ಸರ್ಕಾರದ ಮಾನದಂಡಗಳನ್ನು ಉಲ್ಲಂಘಿಸಿ ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿರುವ ಪಟ್ಟಿಯಲ್ಲಿ ಚಿಂತಾಮಣಿ ತಾಲ್ಲೂಕು ಮೊದಲ ಸ್ಥಾನದಲ್ಲಿದ್ದರೆ ಗೌರಿಬಿದನೂರು ಎರಡನೇ ಸ್ಥಾನದಲ್ಲಿದೆ.

ಚಿಂತಾಮಣಿ ತಾಲೂಕಿನ ಒಂದರಲ್ಲಿಯೆ 2,672 ಅರ್ನಹರ ಬಳಿ ಬಿಪಿಎಲ್ ಕಾರ್ಡ್‌ಗಳಿವೆ. ‌ಗೌರಿಬಿದನೂರಲ್ಲಿ 1,940 ಬಿಪಿಎಲ್ ಕಾರ್ಡ್‌ಗಳು ಇವೆ. ಚಿಕ್ಕಬಳ್ಳಾಪುರದಲ್ಲಿ 1,632 ಮಂದಿ ಅರ್ನಹರ ಬಳಿ ಬಿಪಿಎಲ್ ಕಾರ್ಡ್‌ಗಳು ಇವೆ.

ಆದಾಯ ತೆರಿಗೆ ಪಾವತಿಸುತ್ತಿರುವ ಬಿಪಿಎಲ್, ಅಂತ್ಯೋದಯ ಕಾರ್ಡ್ ವಿವರ

ಇಲಾಖೆಯಿಂದ ಮಾಹಿತಿ ಬದಲಾವಣೆ
ಆದಾಯ ತೆರಿಗೆ ಪಾವತಿಸುವ 2340 ಬಿಪಿಎಲ್ ಕಾರ್ಡ್‌ಗಳು ಜಿಲ್ಲೆಯಲ್ಲಿ ಇವೆ ಎನ್ನುವ ಬಗ್ಗೆ ಇಲಾಖೆಯಿಂದ ನಮಗೆ ಮಾಹಿತಿ ದೊರೆತಿತ್ತು. ಆ ಪ್ರಕಾರ ಆ ಅನರ್ಹ ಕಾರ್ಡ್‌ಗಳನ್ನು ಎಪಿಎಲ್‌ಗೆ ಬದಲಾವಣೆ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ನಾಗರಾಜ ಹಿತ್ತಿಲಮನಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.