ADVERTISEMENT

ಸ್ವಾತಂತ್ರ್ಯ ಹೋರಾಟಕ್ಕೆ ಶಿಡ್ಲಘಟ್ಟ ಕೊಡುಗೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2023, 5:50 IST
Last Updated 15 ಆಗಸ್ಟ್ 2023, 5:50 IST
ಶಿಡ್ಲಘಟ್ಟ ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟಗಾರರು
ಶಿಡ್ಲಘಟ್ಟ ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟಗಾರರು   

ಡಿ.ಜಿ.ಮಲ್ಲಿಕಾರ್ಜುನ

ಶಿಡ್ಲಘಟ್ಟ: ದೇಶದ ಸ್ವಾತಂತ್ರ್ಯದ ಹೋರಾಟದ ಹೆದ್ದಾರಿಯಲ್ಲಿ ಧೀರರಾಗಿ ನಡೆದು ಚಳವಳಿ ಮತ್ತು ಸತ್ಯಾಗ್ರಹಗಳ ಮೂಲಕ ಮಾತ್ರವಲ್ಲದೆ ಬಲಿದಾನದಿಂದಲೂ ಭಾರತಾಂಬೆಗೆ ರಕ್ತ ಹರಿಸಿ ಹುತಾತ್ಮರಾದ ತಾಲ್ಲೂಕಿನ ಸ್ವಾತಂತ್ರ್ಯ ಚಳವಳಿಗಾರರ ಹೋರಾಟವು ಸ್ಮರಣೀಯವಾದದ್ದು.

ಬ್ರಿಟಿಷರ ದಾಸ್ಯದಿಂದ ದೇಶವನ್ನು ಮುಕ್ತಗೊಳಿಸಲು ಲೆಕ್ಕವಿಲ್ಲದಷ್ಟು ಜನರು ತಮ್ಮ ಮನೆ, ಸಂಸಾರಗಳನ್ನು ತೊರೆದರು. ಈ ಮೂಲಕ ಇಂದು ನಾವು ಸ್ವಾತಂತ್ರ್ಯುತ್ಸವ ಆಚರಿಸಲು ಕಾರಣೀಭೂತರಾಗಿದ್ದಾರೆ ಎಂದರೆ ತಪ್ಪಾಗಲಾರದು.  

ADVERTISEMENT

1936ರ ಮೇ 31ರಂದು ಮಹಾತ್ಮ ಗಾಂಧೀಜಿ ಅವರು ಹರಿಜನೋದ್ಧಾರ ನಿಧಿ ಸಂಗ್ರಹಣೆಗಾಗಿ ಶಿಡ್ಲಘಟ್ಟಕ್ಕೆ ಭೇಟಿ ನೀಡಿದ್ದರು. ಆದಾಗ್ಯೂ ಅವರು ಬಂದಿದ್ದರಿಂದಾಗಿ ತಾಲ್ಲೂಕಿನಲ್ಲೂ ಸ್ವಾತಂತ್ರ್ಯದ ಕಿಚ್ಚು ಹೊತ್ತಿಕೊಂಡಿತು. ಗಾಂಧೀಜಿ ಅವರ ಪ್ರೇರಣೆಯಿಂದ ಶಿಡ್ಲಘಟ್ಟ ತಾಲ್ಲೂಕಿನಲ್ಲಿ 1938ರಿಂದಲೇ ದೇಶದ ಸ್ವಾತಂತ್ರ್ಯಕ್ಕಾಗಿ ಹಲವರು ಹೋರಾಟಕ್ಕಿಳಿದರು ಎಂಬುದು ಇತಿಹಾಸದಿಂದ ತಿಳಿಯುತ್ತದೆ. 

1938ರ ಏಪ್ರಿಲ್ ಮೊದಲ ವಾರದಲ್ಲಿ ಮದ್ದೂರಿನ ಶಿವಪುರದಲ್ಲಿ ನಡೆದಿದ್ದ ಮೈಸೂರು ಕಾಂಗ್ರೆಸ್‌ನ ಪ್ರಥಮ ಅಧಿವೇಶನದಲ್ಲಿ ಮಳ್ಳೂರಿನ ಜಿ.ಪಾಪಣ್ಣ ಅವರು ತಮ್ಮ ಯುವ ಪಡೆಯೊಂದಿಗೆ ಹೋಗಿದ್ದರು. ಆದರೆ, ಧ್ವಜಾರೋಹಣ ನಡೆಯಬಾರದು ಎಂಬ ಕಾರಣಕ್ಕೆ 144ನೇ ನಿಯಮದಡಿ ನಿಷೇಧಾಜ್ಞೆಯನ್ನು ಆಗಿನ ಬ್ರಿಟಿಷ್ ಸರ್ಕಾರ ಜಾರಿಗೊಳಿಸಿತ್ತು. ಇದರಿಂದಾಗಿ ಪಾಪಣ್ಣ ಸೇರಿದಂತೆ ಧ್ವಜಾರೋಹಣಕ್ಕೆ ಬಂದಿದ್ದವರನ್ನು ದಸ್ತಗಿರಿ ಮಾಡಲಾಗಿತ್ತು. 

1947ರಲ್ಲಿ ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದರೂ, ಅಂದಿನ ಮೈಸೂರು ರಾಜ್ಯದ ಮಹಾರಾಜರು ಭಾರತದ ಒಕ್ಕೂಟದಲ್ಲಿ ವಿಲೀನಗೊಳ್ಳಲು ವಿರೋಧಿಸಿದರು. ಆಗ ಮೈಸೂರು ಸಂಸ್ಥಾನದಾದ್ಯಂತ ಜವಾಬ್ದಾರಿ ಸರ್ಕಾರಕ್ಕೆ ಆಗ್ರಹಿಸಿ ಹೋರಾಟಗಳು ತೀವ್ರಗೊಂಡವು. ಇಂಥದ್ದೇ ಚಳವಳಿ ಭಾಗವಾಗಿ ಶಿಡ್ಲಘಟ್ಟದ ತಾಲ್ಲೂಕು ಕಚೇರಿ ಬಳಿ ಸತ್ಯಾಗ್ರಹಿಗಳು ಸೇರಿಕೊಂಡು ಮಹಾರಾಜರ ವಿರುದ್ಧ ಘೋಷಣೆಗಳನ್ನು ಮೊಳಗಿಸಿದ್ದರು. ಈ ವೇಳೆ ಹೋರಾಟಗಾರರು ಲಾಠಿ ಚಾರ್ಜ್ ಹಾಗೂ ಗೋಲಿಬಾರ್‌ ದಾಳಿಗೂ ಗುರಿಯಾಗಿದ್ದರು. 

ಶಿಡ್ಲಘಟ್ಟ ತಾಲ್ಲೂಕು ಭಕ್ತರಹಳ್ಳಿಯ ಬಂಡಿ ನಾರಾಯಣಪ್ಪ ಆಗಿನ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಪರೋಕ್ಷವಾಗಿ ಮಹಾ ಪೋಷಕರಾಗಿದ್ದರು. 1947ರಲ್ಲಿ ‘ಜವಾಬ್ದಾರಿ ಸರ್ಕಾರ’ಕ್ಕಾಗಿ ಶಿಡ್ಲಘಟ್ಟ ತಾಲ್ಲೂಕು ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸುವಾಗ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಪೋಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಭಕ್ತರಹಳ್ಳಿಯ ವೆಂಕಟರಮಣಪ್ಪ ಮತ್ತು ಕುಂಬಾರ ದೊಡ್ಡ ನಾರಾಯಣ ಎಂಬ ಇಬ್ಬರು ದೇಶಭಕ್ತರು ವೀರಮರಣವನ್ನಿಪ್ಪಿದರು. ಬಹುಪಾಲು ಸ್ವಾತಂತ್ರ್ಯ ಧೀರರು ಜೈಲು‌ಪಾಲಾದರು.

ಬಂಡಿ ನಾರಾಯಣಪ್ಪ, ನಾಗಮಂಗಲದ ವೆಂಕಟರಾಯಪ್ಪ, ಪಟೇಲ್ ಮುನಿಶಾಮಿಗೌಡ, ಬಿ.ವೆಂಕಟರಾಯಪ್ಪ, ಬಿ.ಆರ್.ಕೆ.ಆರಾಧ್ಯ, ನಾರಾಯಣಸ್ವಾಮಿ ಗೌಡ, ಎಚ್ ಕಾಳಪ್ಪ, ಬಿ.ಆಂಜನೇಯ ಗೌಡ, ಬಂಡಿ ಕ್ಯಾತಣ್ಣ, ತೋಟಿ ರಂಗಪ್ಪ, ಬಿ.ಎನ್.ಪುಟ್ಟಣ್ಣ, ಬಿ.ಎಸ್.ಬಚ್ಚೇಗೌಡ, ಡಿ.ಮಾರಪ್ಪ, ತಳವಾರ ನಾರಾಯಣಪ್ಪ, ನಾಯಕರ ಮುನಿಯಪ್ಪ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು.

ಮಳ್ಳೂರು ಜಿ.ಪಾಪಣ್ಣ, ಕೆ.ಮುತ್ತಕದಳ್ಳಿಯ ಎಂ.ಬಿ.ನಾರಾಯಣಗೌಡ, ಚೌಡಸಂದ್ರದ ನಾರಾಯಣಪ್ಪ, ರಾಮಪ್ಪ, ಬಚ್ಚಹಳ್ಳಿಯ ಚಂಗಲರಾವ್, ಹುಜಗೂರು ಹನುಮಂತರಾಯಪ್ಪ, ಮೇಲೂರು ಸುಬ್ಬಣ್ಣ, ನಂಜುಂಡಶೆಟ್ಟಿ, ಸಂಜೀವಪ್ಪ, ಮಳ್ಳೂರು ಮುನಿಯಪ್ಪ, ಅಪ್ಪೇಗೌಡನಹಳ್ಳಿ ಪಿಳ್ಳಪ್ಪ ಸೇರಿದಂತೆ ಸ್ವಾತಂತ್ರ್ಯುತ್ಸವಕ್ಕೆ ಹೋರಾಡಿದ ಪ್ರತಿಯೊಬ್ಬರನ್ನೂ ನಾವಿಂದು ನೆನೆಯಲೇಬೇಕು. 

ವಿದುರಾಶ್ವತ್ಥ ಹತ್ಯಾಕಾಂಡಕ್ಕೆ ಪಾಪಣ್ಣ ಸಾಕ್ಷಿ

ಸುಮಾರು 35 ಸ್ವಾತಂತ್ರ್ಯ ಹೋರಾಟಗಾರರನ್ನು ಬಲಿಪಡೆಯುವ ಮೂಲಕ ಕರ್ನಾಟಕದ ಜಲಿಯನ್‌ವಾಲಾಬಾಗ್ ಎಂದೇ ಕುಖ್ಯಾತಿಯಾಗಿರುವ ವಿದುರಾಶ್ವತ್ಥ ಹತ್ಯಾಕಾಂಡ ಘಟನೆಯಲ್ಲೂ ಜಿ. ಪಾಪಣ್ಣ ತಮ್ಮ ಸ್ನೇಹಿತರೊಂದಿಗೆ ಭಾಗವಹಿಸಿದ್ದರು. ಈ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ 33 ಹೋರಾಟಗಾರರು ಬಲಿಯಾಗಿ ಸುಮಾರು 90 ಜನರು ಗಾಯಗೊಂಡರು. ಅದೃಷ್ಟಾವಶತ್ ಪಾಪಣ್ಣ ಅವರು ಈ ದಾಳಿಯಿಂದ ಪರಾಗಿದ್ದರು. 

ಕ್ರೂರ ಆಡಳಿತಕ್ಕೆ ಕುಖ್ಯಾತಿಯಾದ ಬ್ರಿಟಿಷ್ ಅಧಿಕಾರಿ ಹ್ಯಾಮಿಲ್ಟನ್ ಹೆಸರನ್ನು ಮೈಸೂರಿನ ಕಟ್ಟಡವೊಂದಕ್ಕೆ ನಾಮಕರಣ ಮಾಡಲು ಮುಂದಾದ ಕ್ರಮವನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವು 1939ರ ಫೆಬ್ರುವರಿಯಲ್ಲಿ ಸತ್ಯಾಗ್ರಹಕ್ಕೆ ಕರೆ ನೀಡಲಾಯಿತು. ಈ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಕಳವಾರದ ವೆಂಕಟಕೃಷ್ಣಪ್ಪ ಚಿಕ್ಕಬಳ್ಳಾಪುರದ ಎ.ಮುನಿಯಪ್ಪ ಮಳ್ಳೂರು ಜಿ.ಪಾಪಣ್ಣ ಮತ್ತು ಮಳಮಾಚನಹಳ್ಳಿ ಎಂ.ಬಿ.ಕೆಂಪಯ್ಯ ಬಂಧಿಸಲ್ಪಟ್ಟರು. ಜ.ಪಾಪಣ್ಣ ಮತ್ತು ಎಂ.ಬಿ ಕೆಂಪಯ್ಯ ಅವರನ್ನು 1939ರ ಅಕ್ಟೋಬರ್ 14ರಂದು ಬಂಧಿಸಿ ಮೈಸೂರು ಶಿವಮೊಗ್ಗ ಮತ್ತು ತೀರ್ಥಹಳ್ಳಿ ಬಂಧಿಖಾನೆಗಳಲ್ಲಿ ಇಡಲಾಗಿತ್ತು. ಕೊನೆಗೆ 1940ರಲ್ಲಿ ತೀರ್ಥಹಳ್ಳಿ ಜೈಲಿನಲ್ಲಿದ್ದಾಗ ಬಿಡುಗಡೆ ಮಾಡಲಾಗಿತ್ತು. 

ಪಿಂಚಣಿಯನ್ನೂ ನಿರಾಕರಿಸಿದ್ದ ಹೋರಾಟಗಾರರಿವರು

ಸ್ವಾತಂತ್ರ್ಯ ಹೋರಾಟಗಾರ ಹಾಗೂ ಶಿಡ್ಲಘಟ್ಟ ಕ್ಷೇತ್ರದ ಮಾಜಿ ಶಾಸಕ ಬಿ.ವೆಂಕಟರಾಯಪ್ಪ ಅವರು ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರ ನೀಡುವ ಪಿಂಚಣಿಯನ್ನೂ ನಿರಾಕರಿಸಿದ್ದರು. ಈ ಮೂಲಕ ಇತರ ಹೋರಾಟಗಾರರಿಗೆ ಮಾದರಿಯಾಗಿದ್ದರು.  ಕೆ.ಮುತ್ತಕದಹಳ್ಳಿಯ ಎಂ.ಬಿ.ನಾರಾಯಣಗೌಡ ಸ್ವಾತಂತ್ರ್ಯ ಹೋರಾಟದಲ್ಲಿ ಜೈಲ್ ಬರೊ ಚಳವಳಿಯಲ್ಲಿ ಪಾಲ್ಗೊಂಡು ಮೂರು ತಿಂಗಳು ಜೈಲು ಸೇರಿದ್ದವರು. ಸರ್ಕಾರದಿಂದ ಯಾವುದೇ ರೀತಿಯ ಸವಲತ್ತು ಅಥವಾ ಮಾಶಾಸನ ಪಡೆಯಲಿಲ್ಲ. ಸ್ವಾತಂತ್ರ್ಯ ಹೋರಾಟಗಾರ ಬಚ್ಚಹಳ್ಳಿಯ ಚಂಗಲ್ ರಾವ್ ಸ್ವಾತಂತ್ರ್ಯದ ನಂತರ ಗಾಂಧೀಜಿಯವರ ಸ್ವಾವಲಂಬನೆ ಕರೆಗೆ ಓಗೊಟ್ಟು ನಗರದಲ್ಲಿನ ತನ್ನ ಮನೆಯನ್ನು ತೊರೆದಿದ್ದರು. ವಂಶ ಪಾರಂಪರ್ಯವಾಗಿ ಬಂದಿದ್ದ ಜೋಡಿ ಗ್ರಾಮ ಬಚ್ಚಹಳ್ಳಿಗೆ ಬಂದು ನೆಲೆಸಿ ವ್ಯವಸಾಯ ಮಾಡಿಕೊಂಡು ಮಾದರಿಯಾಗಿ ಬದುಕಿದ್ದರು.

ಸ್ವಾತಂತ್ರ್ಯ ಯೋಧರಿಗೆ ಸನ್ಮಾನ

ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಚಿಕ್ಕಬಳ್ಳಾಪುರ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರನ್ನು ರಾಷ್ಟ್ರ ರಾಜಧಾನಿ ದೆಹಲಿಗೆ ಕರೆಸಿಕೊಂಡು ಸನ್ಮಾನಿಸಲಾಗಿತ್ತು.  ಆಗ ಚೌಡಸಂದ್ರ ನಾರಾಯಣಪ್ಪ ಮೇಲೂರು ಸುಬ್ಬಣ್ಣ ಮಳ್ಳೂರು ಮುನಿನಾಗಪ್ಪ ಭಕ್ತರಹಳ್ಳಿ ಬಚ್ಚೇಗೌಡ ಬಚ್ಚಹಳ್ಳಿ ಚಂಗಲರಾವ್ ಚೌಡಸಂದ್ರ ರಾಮಪ್ಪ ಮೇಲೂರು ಸಂಜೀವಪ್ಪ ಹುಜಗೂರು ಹನುಮಂತರಾಯಪ್ಪ ಮಳ್ಳೂರು ಮುನಿಯಪ್ಪ ಅಪ್ಪೇಗೌಡನಹಳ್ಳಿ ಪಿಳ್ಳಪ್ಪ ಸೇರಿದಂತೆ ತಾಲ್ಲೂಕಿನ ಹಲವು ಹೋರಾಟಗಾರರನ್ನು ಗೌರವಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.