ADVERTISEMENT

ದಪ ದಪ ಎಂದು ಜನರು ಬಿದ್ದರು: ಗೋಲಿಬಾರ್ ಕಣ್ಣಾರೆ ಕಂಡ ಅಶ್ವತ್ಥಪ್ಪ

ವಿದುರಾಶ್ವತ್ಥದ ಗೋಲಿಬಾರ್ ಕಣ್ಣಾರೆ ಕಂಡ ಅಶ್ವತ್ಥಪ್ಪ ‘ಪ್ರಜಾವಾಣಿ’ಯೊಂದಿಗೆ ಮಾತುಕತೆ

ಡಿ.ಎಂ.ಕುರ್ಕೆ ಪ್ರಶಾಂತ
Published 15 ಆಗಸ್ಟ್ 2022, 4:33 IST
Last Updated 15 ಆಗಸ್ಟ್ 2022, 4:33 IST
ಅಶ್ವತ್ಥಪ್ಪ
ಅಶ್ವತ್ಥಪ್ಪ   

ಚಿಕ್ಕಬಳ್ಳಾಪುರ: ಕರ್ನಾಟಕ ಜಲಿಯನ್ ವಾಲಾಬಾಗ್ ಖ್ಯಾತಿಯ ವಿದುರಾಶ್ವತ್ಥ ಸ್ವಾತಂತ್ರ್ಯ ಹೋರಾಟಕ್ಕೆ ಇತಿಹಾಸದ ಪುಟಗಳಲ್ಲಿ ಮಹತ್ವದ ಸ್ಥಾನವಿದೆ. 84 ವರ್ಷಗಳ ಹಿಂದೆ ನಡೆದ ಈ ಹೋರಾಟದ ಭಾಗವಾದವರು, ಸ್ವಾತಂತ್ರ್ಯ ಹೋರಾಟಗಾರರು ಎನಿಸಿದವರು ಇಂದು ಯಾರೂ ಸಹ ಬದುಕಿಲ್ಲ.

ಆದರೆ ಅಂದಿನ ಘಟನೆಯನ್ನು ಕಣ್ಣಾರೆ ಕಂಡ ವ್ಯಕ್ತಿಯೊಬ್ಬರು ಇದ್ದಾರೆ. ಅಂದು ಅವರಿಗೆ 13 ವರ್ಷ. ಇಂದು 97 ವರ್ಷ. ಅವರೇ ಗೌರಿಬಿದನೂರು ತಾಲ್ಲೂಕಿನ ವೈಚಕೂರು ಗ್ರಾಮದ ಅಶ್ವತ್ಥಪ್ಪ. ಅಶ್ವತ್ಥಪ್ಪ 1925 ಜೂನ್ 10ರಂದು ಜನಿಸಿದರು.

ವಿದುರಾಶ್ವತ್ಥದಲ್ಲಿ ಬ್ರಿಟಿಷರು ನಡೆಸಿದ ಗೋಲಿಬಾರ್ ಮತ್ತು ಅವರು ನೋಡಿದ ಘಟನೆಗಳ ಬಗ್ಗೆ ಅಶ್ವತ್ಥಪ್ಪ ‘ಪ್ರಜಾವಾಣಿ’ ‍ಪ್ರತಿನಿಧಿಗೆ ಹೇಳುವುದು ಹೀಗೆ.

ADVERTISEMENT

ನನಗೆ ಆಗ 12 ಅಥವಾ 13 ವರ್ಷ. ಹೊಸೂರಿನಲ್ಲಿ ಮಿಡ್ಲಿಸ್ಕೂಲ್ ಓದುತ್ತಿದ್ದೆ. ಎಲ್ಲರೂ ವಿದುರಾಶ್ವತ್ಥಕ್ಕೆ ಹೋಗುತ್ತಿದ್ದರು. ನಾನೂ ಅವರ ಜತೆ ಟೋಪಿ ಹಾಕಿಕೊಂಡು ಹೋದೆ. ಈಗಿನಂತೆ ಆಗ ರಸ್ತೆಗಳೇನೂ ಇರಲಿಲ್ಲ. ನಡೆದುಕೊಂಡು ಹೋದೆವು.

ಮಧ್ಯಾಹ್ನದ ಸಮಯ. ಜನವೋ ಜನ. ದೇವಸ್ಥಾನದ ಹಿಂಬದಿಯಲ್ಲಿ ಬಯಲು. ಆ ಬಯಲಿನ ಸಾಕಷ್ಟು ಮರಗಳು ಇದ್ದವು. ಅಲ್ಲಿ ಜಗಲಿಕಟ್ಟೆ ಸಹ ಇತ್ತು. ಆ ಜಗಲಿಕಟ್ಟೆಯಲ್ಲಿ ನಿಂತು ದೊಡ್ಡ ದೊಡ್ಡವರು ಭಾಷಣ ಮಾಡುತ್ತಿದ್ದರು.

ಜಗಲಿಕಟ್ಟೆಗೂ ದೇವಸಾನದ ಕಟ್ಟೆಗೂ ನಡುವೆ ಒಂದು ರೂಂ ಇತ್ತು. ಅಲ್ಲಿ ಕಿಟಕಿಗಳು ಇದ್ದವು.ಜಾಗ ಸಾಲದೆ ಜನರು ಮರಗಳನ್ನು ಹತ್ತಿಕೊಂಡಿದ್ದರು. ಪೊಲೀಸರು ಲಾಠಿ ಚಾರ್ಚ್‌ ಮಾಡಿದರು. ಮರಗಳ ಮೇಲಿದ್ದ ಜನರು ದಪ ದಪ ಎಂದು ಬಿದ್ದರು. ಜನರು ಕಲ್ಲುಗಳ ತೆಗೆದುಕೊಂಡು ಪೊಲೀಸರತ್ತ ಬೀಸಿದರು.

ಅಮಲ್ದಾರರು ಇರಬೇಕು ಎನಿಸುತ್ತದೆ. ಅವರು ಶೂಟ್ ಮಾಡಲು ಆರ್ಡರ್ ಕೊಟ್ಟರು. ಕಿಟಕಿಗಳಿಂದ ಪೊಲೀಸರು ಮನಬಂದಂತೆ ಗುಂಡು ಹಾರಿಸಿದರು. ಜನರು ದಪ ದಪ ಎಂದು ನೆಲಕ್ಕೆ ಉರುಳಿಬಿದ್ದರು. ಹೆಚ್ಚು ಜನರೇ ಸತ್ತ ಬಿದ್ದರು.

ನಾನು ಹಾಗೂ ಕೆಲವರು ಎದ್ದೆವೊ ಬಿದ್ದೆವೊ ಎಂದು ಹಳ್ಳದತ್ತ (ಉತ್ತರ ಪಿನಾಕಿನಿ ನದಿ ಹರಿಯುವ ಜಾಗ) ಓಡಿಹೋದೆವು. ಆ ಹಳ್ಳದ ಕಡೆಯಿಂದ ಕದಿರೇನಹಳ್ಳಿಗೆ ಹೋಗಲು ಒಂದು ರಸ್ತೆ ಇದೆ. ಹಳ್ಳದಲ್ಲಿ ಬಿದ್ದು ರಸ್ತೆಗೆ ಹೋಗಿ ಕದಿರೇನಹಳ್ಳಿ ಸೇರಿದೆವು. ಇದಿಷ್ಟು ಮಾತ್ರ ನನಗೆ ಗೊತ್ತು.

‘ಅಂದು ವಿದುರಾಶ್ವತ್ಥದಲ್ಲಿ ಜಾತ್ರೆ ನಡೆಯುತ್ತಿತ್ತೇ’ ಎಂದು
ಪ್ರಶ್ನಿಸಿದರೆ, ಅವರ ಉತ್ತರಕ್ಕೆ ಮರೆವು ಅಡ್ಡ ಬರುತ್ತದೆ. ‘ನೆನಪಾಗುತ್ತಿಲ್ಲ. ಆದರೆ ಜನರು ಹೆಚ್ಚು ಸೇರಿದ್ದರು. ಮರಗಳ ಮೇಲೆಲ್ಲಾ ಹತ್ತಿದ್ದರು’ ಎನ್ನುತ್ತಾರೆ.

ಹೀಗೆ ತಾವು ಕಣ್ಣಾರೆ ಕಂಡ ವಿದುರಾಶ್ವತ್ಥದ ದುರ್ಘಟನೆಯ ಬಗ್ಗೆ ಅಶ್ವತ್ಥಪ್ಪ ನೆನಪಿಸಿಕೊಳ್ಳುವರು. ಇನ್ನು ಮೂರು ವರ್ಷ ದಾಟಿದರೆ ಅಶ್ವತ್ಥಪ್ಪ ಶತಮಾನ ಪೂರೈಸುವರು. ವಿದುರಾಶ್ವತ್ಥದ ಘಟನೆಗಳನ್ನು ನೇರವಾಗಿ ಕಂಡವರಲ್ಲಿ ಸದ್ಯ ಇರುವವರು ಅಶ್ವತ್ಥಪ್ಪ ಮಾತ್ರ.

ವಿದುರಾಶ್ವತ್ಥದ ಅಂದಿನ ಘಟನೆಗಳ ಬಗ್ಗೆ, ಅರೆಬರೆಯಾದ ನೆನಪುಗಳನ್ನು ಒಗ್ಗೂಡಿಸಿ ಮಾತನಾಡುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.